Advertisement

ಸಮಸ್ಯೆಗಳ ಆಗರ ಸಿರಿಗೇರಿ ರೈತ ಕೇಂದ್ರ

11:50 AM Jul 03, 2019 | Team Udayavani |

ಸುಧಾಕರ್‌ ಮಣ್ಣೂರು
ಕುರುಗೋಡು:
ರೈತರಿಗೆ ಕುಳಿತುಕೊಳ್ಳಲು ಸುರಕ್ಷಿತವಾದ ಸ್ಥಳವಿಲ್ಲ. ಬಿತ್ತನೆ ಬೀಜಗಳನ್ನು ಖರೀದಿ ಮಾಡಲು ಬರುವುದಕ್ಕೆ ಸರಿಯಾಗಿ ದಾರಿ ವ್ಯವಸ್ಥೆ ಇಲ್ಲ. ಕಚೇರಿಯೂ ಪಾಳುಬಿದ್ದು ನಾರುತ್ತಿದ್ದು ಒಟ್ಟಾರೆ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ ಕುರುಗೋಡು ಪಟ್ಟಣ ಸಮೀಪದ ಸಿರಿಗೇರಿಯ ರೈತ ಸಂಪರ್ಕ ಕೇಂದ್ರ.

Advertisement

ಹೌದು, ಸಿರಿಗೇರಿಯ ರೈತ ಸಂಪರ್ಕ ಕೇಂದ್ರಕ್ಕೆ ಸುತ್ತಮುತ್ತ ಹತ್ತಾರು ಹಳ್ಳಿಯ ರೈತರು ನವಣಿ, ಸಜ್ಜೆ, ತೊಗರಿ, ಸೂರ್ಯಕಾಂತಿ, ಜೋಳ ಸೇರಿದಂತೆ ವಿವಿಧ ರೀತಿಯ ಬೀಜಗಳನ್ನು ಪ್ರತಿ ವರ್ಷ ತೆಗೆದುಕೊಂಡು ಹೋಗುತ್ತಾರೆ. ಅದರೆ ಕೇಂದ್ರಕ್ಕೆ ಬರುವವರಿಗೆ ಸರಿಯಾದ ವ್ಯವಸ್ಥೆಯಿಲ್ಲ. ಕೇಂದ್ರದ ಸುತ್ತಮುತ್ತದ ಬೀದಿ ಬದಿ ವ್ಯಾಪಾರಸ್ಥರು ಕಸ ಕಡ್ಡಿಗಳನ್ನು ಕೇಂದ್ರದ ಅವರಣದಲ್ಲಿ ಸಂಗ್ರಹಿಸಿ ಅದನ್ನು ಸುಟ್ಟು ಹಾಕಿ ಹೋಗುತ್ತಿದ್ದರು ಅದನ್ನು ಪ್ರಶ್ನಿಸುವವರು ಇಲ್ಲದಂತಾಗಿದೆ.

ಕೇಂದ್ರದ ಮುಂಭಾಗದಲ್ಲಿ ವೈನ್‌ ಶಾಪ್‌ ಇದ್ದು ಸಂಜೆಯಾದರೆ ಮದ್ಯಪ್ರಿಯರ ಹಾವಳಿ ಕೇಂದ್ರದ ಅವರಣದಲ್ಲಿ ದೌಡಾಯಿಸಿ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಾಟಲ್ಗಳು ಬಿಸಾಡಿ ಹೋಗುವುದು ಸರ್ವಸಮಾನ್ಯವಾಗಿದೆ. ಇನ್ನೂ ಕೇಂದ್ರದ ಹಿಂಭಾಗದಲ್ಲಿ ರಾಶಿಗಟ್ಟಲೇ ಮದ್ಯ ಬಾಟಲ್ಗಳು ಬಿದ್ದಿದ್ದು ಈ ಅಕ್ರಮ ಚಟುವಟಿಕೆಗೆ ಕೃಷಿ ಅಧಿಕಾರಿಗಳು ಸಾಥ್‌ ನೀಡುತ್ತಿದ್ದಾರೆ ಎಂಬ ಪ್ರಶ್ನೆಗಳು ರೈತರಲ್ಲಿ ಕೇಳಿಬರುತ್ತಿವೆ.

ಕೇಂದ್ರಕ್ಕೆ ಸರಿಯಾಗಿ ಮುಖ್ಯ ಗೇಟ್ ಇಲ್ಲ: ರೈತ ಸಂಪರ್ಕ ಕೇಂದ್ರಕ್ಕೆ ಸರಿಯಾದ ಗೇಟ್ ವ್ಯವಸ್ಥೆ ಇಲ್ಲ. ಮುಂಭಾಗದ ಬೀದಿ ಬದಿ ವ್ಯಾಪಾರಸ್ಥರು, ಎಗ್‌ರೈಸ್‌, ಹೂಗಳ ಅಂಗಡಿ, ಕಿರಾಣಿ ಅಂಗಡಿ ಸೇರಿದಂತೆ ಇತರೆ ಅಂಗಡಿಗಳ ಅಡ್ಡೆಯಾಗಿದೆ. ಕೇಂದ್ರಕ್ಕೆ ಬರುವ ರೈತರಿಗೆ ಸರಿಯಾಗಿ ವ್ಯವಸ್ಥೆ ಇಲ್ಲದೆ ಕೇಂದ್ರದ ಮುಂದಿರುವ ತಡೆಗೋಡೆ ಮೇಲೆ ಕುಳಿತು ಅಧಿಕಾರಿಗಳನ್ನು ಕಾದು ಕೆಲಸಗಳನ್ನು ಮಾಡಿಕೊಂಡು ಹೋಗಬೇಕಾಗಿದೆ. ಕೆಲವೊಮ್ಮೆ ಬಾಗಿಲು ಮುಚ್ಚಿದ ಸಂದರ್ಭದಲ್ಲಿ ಮತ್ತು ಮುಂದೆ ಅಂಗಡಿಗಳು ಇರುವುದರಿಂದ ಗೊಂದಲಕ್ಕೀಡಾಗಿ ರೈತರು ವಾಪಸ್ಸು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಳು ಬಿದ್ದ ಕೊಠಡಿ: ಕೇಂದ್ರ ಬಹುದಿನಗಳ ಕೊಠಡಿಯಾಗಿದ್ದು ಅಲ್ಲಲ್ಲಿ ಕೇಂದ್ರದ ಮೇಲ್ಛಾವಣಿ ಶಿಥಿಲಗೊಂಡಿದೆ.ಅದರಲ್ಲಿ ಇರುವ ಬೀಜಗಳಿಗೆ ಹೆಗ್ಗ‌ಣಗಳ ಹಾವಳಿ ಜಾಸ್ತಿಯಾಗಿವೆ. ಈಗಾಗಲೇ ಸದ್ಯ ಇರುವ ಕೇಂದ್ರದ ಪಕ್ಕದಲ್ಲಿರುವ ಕೊಠಡಿಯಲ್ಲಿ ಸುಮಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿ ರೈತರಿಗೆ ಅನುಕೂಲಪಡಿಸಿದ್ದರು. ಅದರಲ್ಲಿ ಹೆಗ್ಗಣಗಳ ಕಾಟದಿಂದ ಪಕ್ಕದ ಹಳೆಯ ನೀರಾವರಿ ಕೊಠಡಿಗೆ ಸ್ಥಳಾಂತರಗೊಂಡಿದ್ದರು. ಇದರಲ್ಲಿ ಕೂಡ ಸರಿಯಾಗಿ ವ್ಯವಸ್ಥೆ ಇಲ್ಲದಂತಾಗಿದ್ದು ಸದ್ಯ ಮದ್ಯಪ್ರಿಯರ ತಾಣವಾಗಿದೆ.

Advertisement

ಅನುಕೂಲವಾದಾಗ ಕಚೇರಿ ಒಪನ್‌: ವರ್ಷದಲ್ಲಿ 2-3 ತಿಂಗಳ ಕಾಲ ಮಾತ್ರ ಕೇಂದ್ರದ ಬಾಗಿಲು ತೆರೆಯುತ್ತದೆ. ಅದರಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಸಮಯಕ್ಕೆ ಬಾಗಿಲು ತೆಗೆಯದೇ ತಮಗೆ ಅನುಕೂಲವಾದಾಗ ತೆಗೆಯುತ್ತಿದ್ದು ಇದರಿಂದ ದೂರದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಬೀಜಗಳನ್ನು ಖರೀದಿ ಮಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next