Advertisement

ಕೊಂಚಿಗೇರಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

12:43 PM Oct 16, 2019 | Naveen |

„ಸುಧಾಕರ್‌ ಮಣ್ಣೂರು
ಕುರುಗೋಡು:
ಸ್ವಚ್ಛ ಭಾರತ ಯೋಜನೆಯಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸುವ ಹಿನ್ನೆಲೆಯಲ್ಲಿ ಪಟ್ಟ ಶ್ರಮಕ್ಕೆ ಪಟ್ಟಣ ಸಮೀಪದ ಕೊಂಚಿಗೇರಿ ಗ್ರಾಪಂಗೆ ಗಾಂಧಿ  ಗ್ರಾಮ ಪುರಸ್ಕಾರ ಲಭಿಸಿದೆ.

Advertisement

ಗ್ರಾಮಗಳನ್ನು ಬಹಿರ್ದೆಸೆ ಮುಕ್ತ ಮಾಡಲು ಸ್ವಚ್ಛತೆ, ಆರೋಗ್ಯಕರ ಪರಿಸರ ನಿರ್ಮಾಣ ಮುಂತಾದ ಕಾರ್ಯಕ್ರಮಗಳ ಜತೆಯಲ್ಲಿ ಮಾದರಿ ಗ್ರಾಮಗಳನ್ನು ಮಾಡಲು ರಾಜ್ಯ ಸರಕಾರ ಜಿಪಂ ಉಪ ಕಾರ್ಯದರ್ಶಿಗಳ ನೇತೃತ್ವದ ತಂಡ ರಚನೆ ಮಾಡಿ, ಗಾಂಧಿ ಗ್ರಾಮ ಪುರಸ್ಕಾರ ಮಾಡಲು ಯೋಜನೆ ರೂಪಿಸಿದ್ದು, ಪ್ರಸಕ್ತ ಸಾಲಿನಲ್ಲಿ ಪುರಸ್ಕಾರಕ್ಕೆ ಆಯ್ಕೆಗೊಂಡು ಜಿಲ್ಲೆಯ 8 ಗ್ರಾಪಂಗಳ ಪಟ್ಟಿಯಲ್ಲಿ ಕೊಂಚಿಗೇರಿ ಗ್ರಾಮವು ಕೂಡ ಸ್ಥಾನ ಪಡೆದುಕೊಂಡಿದೆ.

ಅಭಿವೃದ್ಧಿಯೇ ಮಾನದಂಡ: ನರೇಗಾ ಕಾಮಗಾರಿ ಅನುಷ್ಠಾನ, ತೆರಿಗೆ ವಸೂಲಿಯಲ್ಲಿ ಶೇ.80ರಷ್ಟು ಸಾಧನೆ, ಗ್ರಾಮಸಭೆ, ವಾರ್ಡ್‌ಸಭೆ, ಸಾಮಾನ್ಯ ಸಭೆ, ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಕರೆದು, ಸಮಸ್ಯೆ ಅಲಿಸಿ ಬಗೆಹರಿಸಲು ಆದ್ಯತೆ ನೀಡಿದೆ. ಜತೆಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನದಂತಹ ವೈದ್ಯಕೀಯ ಶಿಬಿರ ಆಯೋಜಿಸಿ, ಆರೋಗ್ಯ ಸೇವೆಯಲ್ಲೂ ಉತ್ತಮ ಸಾಧನೆ ಮಾಡಿದೆ. ಸ್ಮಶಾನಗಳ ಅಭಿವೃದ್ಧಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಮಳೆ ಕೊಯ್ಲು, ಚೆಕ್‌ ಡ್ಯಾಂ, ಪರಿಸರ ಹಾಗೂ ಜಲ ಸಂರಕ್ಷಣೆಗೆ ವಿಶೇಷ ಒತ್ತುಕೊಡುವ ಮೂಲಕ ಆದರ್ಶ ಗ್ರಾಪಂ ಆಗಿ ಹೊರಹೊಮ್ಮಿದೆ.

ನರೇಗಾದಲ್ಲಿಯೂ ಕ್ರಾಂತಿ: ಗ್ರಾಮೀಣರು ನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಹಾಗೂ ದುಡಿಯುವ ಜನರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ನರೇಗಾ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ನೀಡುವಲ್ಲಿಯೂ ಗುರಿ ಸಾಧನೆ ಮಾಡಲಾಗಿದೆ.

ಮಾನವ ದಿನಗಳ ನಿಗದಿಗಿಂತ ಹೆಚ್ಚಿನ ಮಾನವ ದಿನಗಳನ್ನು ಸೃಷ್ಟಿಸುವ ಮೂಲಕ 870 ಕುಟುಂಬಗಳಿಗೆ ಕೆಲಸ ನೀಡುವುದರ ಮೂಲಕ 67 ಲಕ್ಷ ಖರ್ಚು ಮಾಡಿ ಹೆಚ್ಚು ಸಾಧನೆ ಮಾಡಿದೆ. 1091 ಮಂದಿಗೆ ಜಾಬ್‌ ಕಾರ್ಡ್‌ ನೀಡಿ ಉದ್ಯೋಗವಕಾಶ ಕಲ್ಪಿಸಲಾಗಿದೆ.

Advertisement

ಶುದ್ಧ ಕುಡಿಯುವ ನೀರು: 320ಕ್ಕೂ ಅಧಿಕ ಹೆಚ್ಚು ನಲ್ಲಿಗಳನ್ನು ಅಳವಡಿಸಿ ನೀರು ಬಿಡಲಾಗುತ್ತಿದೆ. ಕೊಂಚಿಗೇರಿ ಮತ್ತು ದಾಸಪುರ ಗ್ರಾಮಗಳಲ್ಲಿ 2 ಶುದ್ಧ ಘಟಕಗಳು ಚಾಲ್ತಿಯಲ್ಲಿವೆ.

ಒಡಿಎಫ್‌ ಘೋಷಣೆ: ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 1930 ಕುಟುಂಬಗಳಿದ್ದು, ಶೌಚಲಯ ನಿರ್ಮಾಣದಲ್ಲೇ 100ರಷ್ಟು ಸಾಧನೆಯಾಗಿ ಜಿಲ್ಲಾಡಳಿತದಿಂದ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಎಂದು ಘೋಷಣೆ ಮಾಡಿದೆ. ಗ್ರಾಮ ಸ್ವತ್ಛತೆಗಾಗಿ ಚರಂಡಿ ನಿರ್ಮಾಣ, ನಿರ್ವಹಣೆ, ಕಸದ ವಿಲೇವಾರಿಗಾಗಿ ಸೂಕ್ತ ಕ್ರಮ ಕೆೃಗೊಳ್ಳಲಾಗಿದೆ ಎನ್ನುತ್ತಾರೆ ಪಿಡಿಒ ಲೀಲಾವತಿ ಬಂಡೂರಿ.

Advertisement

Udayavani is now on Telegram. Click here to join our channel and stay updated with the latest news.

Next