ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ(ಅಧಿಕಾರಿ) ಮನೆಯ ಮುಂದೆ ಕೆಲ ಕಿಡಿಗೇಡಿಗಳು ನಾಯಿಯನ್ನು ಬಡಿದು ಹಾಕಿ ವಿಕೃತ ವಾಮಾಚಾರ ಮಾಡಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಸಿಬ್ಬಂದಿಗಳ ಕೊರತೆ ಬಹಳ ಎದುರಾಗಿದೆ.ಕೆಲ ದಿನಗಳ ಹಿಂದೆರಾತ್ರಿ ವೇಳೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರು ಅಧಿಕಾರಿಗಳಿಗೆ ಒತ್ತಡ ಹೇರಿ ಒಬ್ಬ ಸ್ಟಾಪ್ ನರ್ಸ್ ಅಮಾನತು ಮಾಡಲಾಗಿತ್ತು.
ಶುಶ್ರೂಷಕಿ ಯಶೋಧ ಸುಮಾರು 4 ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ. ಇತ್ತೀಚ್ಚಿಗೆ ಅವರು ರಜೆ ಮೇಲೆ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಸ್ವಲ್ಪ ದಿನಗಳ ನಂತರ ಮರಳಿ ಸಿರಿಗೇರಿ ಗ್ರಾಮಕ್ಕೆ ಬಂದಾಗ ಅವರ ಮನೆಯ ಮುಂದೆ ಕೆಲ ಕಿಡಿಗೇಡಿಗಳು ನಾಯಿಯನ್ನು ಬಡಿದು ಹಾಕಿ ಅದರ ಮೇಲೆ ವಿವಿಧ ರೀತಿಯ ಕುಂಕುಮ, ನಿಂಬೆಹಣ್ಣು, ಕಾಯಿಗಳನ್ನು ಒಡೆದು ವಾಮಾಚಾರ ಮಾಡಿದ್ದಾರೆ. ಇದನ್ನು ನೋಡಿ ಶುಶ್ರೂಷಕಿ ಹಾಗೂ ಅವರ ಕುಟುಂಬ ಸದಸ್ಯರು ಭಯಭೀತಗೊಂಡಿದ್ದಾರೆ.
ಪರಿಣಾಮವಾಗಿ ಸಿರಿಗೇರಿ ಯಲ್ಲಿ ಕರ್ತವ್ಯ ನಿರ್ವಹಿಸಲು ನನಗೆ ಕಷ್ಟಕರ ವಾಗುತ್ತಿದೆ. ಇಲ್ಲಿ ಕೆಲ ಕಿಡಿಗೇಡಿಗಳು ಹಾಗೂ ನಮ್ಮ ಸಿಬಂದಿಗಳಿಗೆ ಜೀವ ಬೆದರಿಕೆ ಇದೆ. ನನ್ನನ್ನು ಕುರುಗೋಡು ಸಮುದಾಯ ಅರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡುವಂತೆ ಆರೋಗ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿದ್ದಾರೆ.
ಸಿರಿಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬಂದಿಗಳು ಕೊರತೆ ಎದುರಾಗಿದ್ದು, ಈಗಾಗಲೇ ಸ್ಥಳೀಯರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹಲವಾರು ಜೀವಗಳು ಕೂಡ ಕಳೆದುಕೊಂಡಿದ್ದಾರೆ. ಸಿಬಂದಿಗಳು ಕೇಂದ್ರದಲ್ಲಿ ಕಾರ್ಯನಿರ್ವಹಿಸಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಕಿಡಿಗೇಡಿಗಳು ಇಂತಹ ಕೃತ್ಯಕ್ಕೆ ಕೈ ಹಾಕಿರುವುದು ವಿಪರ್ಯಾಸವಾಗಿದೆ.
ಆರೋಗ್ಯ ಅಧಿಕಾರಿಗಳು ನಡೆದ ಘಟನೆ ಬಗ್ಗೆ ಪರಿಶೀಲನೆ ನಡೆಸಿ ಇಂತಹ ಕೃತ್ಯ ವೆಸಗಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಾರ್ಯನಿರ್ವಹಿಸುವ ಅಧಿಕಾರಿಗಳ ವರ್ಗಕ್ಕೆ ಸಮಸ್ಯೆಗಳು ಎದುರಾಗದಂತೆ ನಿಗಾ ವಹಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.