ಕುರುಗೋಡು: ಐತಿಹಾಸಿಕ ಸುಪ್ರಸಿದ್ಧ ಶ್ರೀ ದೊಡ್ಡಬಸವೇಶ್ವರ ಜಾತ್ರೆ ಐದನೇ ದಿನಕ್ಕೆ ಸುಸ್ತು ಹೊಡೆದಿದೆ. ಸುಡುವ ಬಿಸಿಲು, ಕೊರೊನಾದ ಭೀತಿಯಿಂದ ಜನರ ಮುಖದಲ್ಲಿ ಮಂದಹಾಸವಿಲ್ಲದ ಕಾರಣ ಪ್ರತಿ ವರ್ಷ 10 ದಿನ ನಡೆಯುತ್ತಿದ್ದ ಜಾತ್ರೆ ಸೊಗಡಿಗೆ ಗರ ಬಡಿದಿದೆ.
ಜಾತ್ರೆ ನಿಮ್ಮಿತ್ತ ಪ್ರತಿ ವರ್ಷದಂತೆ ಸಾಕಷ್ಟು ಅಂಗಡಿಗಳನ್ನು ತೆರದಿವೆ. ಕೆಲ ಅಂಗಡಿಯಲ್ಲಿ ಹೆಚ್ಚಿನ ವ್ಯಾಪಾರ ಇನ್ನೂ ಕೆಲ ಅಂಗಡಿಗಳಲ್ಲಿ ಅಲ್ಪಸ್ವಲ್ಪ ವ್ಯಾಪಾರ ಹಾಗೂ ಇನ್ನುಳಿದ ಅಂಗಡಿಗಳಲ್ಲಿ ವ್ಯಾಪಾರವಿಲ್ಲದೆ ನೊಣ ಹೊಡೆಯುವ ಕೆಲಸ ಶುರುವಾಗಿದೆ.
ಕೊರೊನಾ ಭೀತಿಯಿಂದ ಸೊರಗಿದ ವ್ಯಾಪಾರ: ಪಟ್ಟಣದ ದೊಡ್ಡಬಸವೇಶ್ವರ ಜಾತ್ರೆ ಮೊದಲ ದಿನ ಬಂದ ಭಕ್ತಾದಿಗಳು ಐದನೇ ದಿನಕ್ಕಿಲ್ಲ. ವ್ಯಾಪಾರ ಸೊರಗಿದೆ ಎಂದು ಅಂಗಡಿ ಮಾಲೀಕರು ಕೊರಗುತ್ತಿದ್ದಾರೆ.
ಕೊರೊನಾ ಭೀತಿಯಿಂದ ಹೊರಗಿನ ತಿಂಡಿ-ತಿನಿಸುಗಳನ್ನು ಜನ ಮುಟ್ಟುತ್ತಿಲ್ಲ. ವಾರಗಟ್ಟಲೇ ಇಲ್ಲೆ ತಳ ಊರಿ ಕೈತುಂಬ ಲಾಭ ಹೊತ್ತು ಹೋಗುತ್ತಿದ್ದ ವ್ಯಾಪಾರಿಗಳ ಕನಸು ಕಮರಿದೆ. ಬಳೆ ವ್ಯಾಪಾರಿಗಳು ಮಾತ್ರ ಲಾಭದಲ್ಲಿದ್ದಂತೆ ಕಂಡುಬಂತು. ಗಿರಾಕಿ ಇಲ್ಲದೆ ವ್ಯಾಪಾರಿಗಳು ಏನು ಲಾಭವಿಲ್ಲ ಎಂಬ ಕಾರಣಕ್ಕೆ ಅಂಗಡಿಗಳನ್ನು ತೆರವುಗೊಳಿಸಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮ ಊರಿಗೆ ಹಿಂತಿರುಗುತ್ತಿದ್ದಾರೆ.
ಇನ್ನು ಕೆಲವರು ದಿನದ ವೆಚ್ಚ ಗಿಟ್ಟಿದರೆ ಸಾಕು ಎಂಬ ಲೆಕ್ಕಾಚಾರ ನಡೆಸಿದ್ದಾರೆ. ಸಿಹಿ ತಿನಿಸು, ಮಿಠಾಯಿ, ಕಾಯಿ ಮಾರುವ ಅಂಗಡಿಗಳು ಪ್ರತಿ ವರ್ಷ ರಥೋತ್ಸವದ ಮೂರು ದಿನ ಮುಂಚಿತವಾಗಿ ಅಂಗಡಿಗಳನ್ನು ಹಾಕುತ್ತಿದ್ದರು. ಆದರೆ ಈ ವರ್ಷ ದೇವಸ್ಥಾನದ ಸಮಿತಿಯವರು ರಥೋತ್ಸವ ನಂತರ ಅಂಗಡಿಗಳನ್ನು ಹಾಕಬೇಕು ಎಂದು ಅದೇಶ ಮಾಡಿದ್ದರು. ಅದರೆ ಈಗ ವ್ಯಾಪಾರವಿಲ್ಲದೇ ನಮಗೆ ನಷ್ಟವಾಗಿದೆ. ಮುಂದಿನ ವರ್ಷವೂ
ಹೀಗೆ ತೊಂದರೆಯಾದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು .
ಸುಧಾಕರ ಮಣ್ಣೂರು