Advertisement

ಕುರುಬಾರಹಳ್ಳಿ ಜಮೀನು ವಿವಾದಕ್ಕೆ ಪರಿಹಾರ

12:40 PM Mar 12, 2018 | |

ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನ ಕುರುಬಾರಹಳ್ಳಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಎದುರಾಗಿದ್ದ ಭೂ ಸಮಸ್ಯೆಗೆ ಪರಿಹಾರ ದೊರೆತಿದ್ದು, ಬಡಾವಣೆ ನಿವಾಸಿಗಳಿಗೆ ಖಾತೆ ವರ್ಗಾವಣೆ, ಮನೆ ನಿರ್ಮಾಣಕ್ಕೆ ಸಾಲ ಸೇರಿದಂತೆ ಎಲ್ಲಾ ಸೌಲಭ್ಯಗಳು ದೊರೆಯಲಿದೆ ಎಂದು ಶಾಸಕ ಎಂ.ಕೆ.ಸೋಮಶೇಖರ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಚಾಮುಂಡಿಬೆಟ್ಟದ ತಪ್ಪಲಿನ ಭೂ ವಿವಾದ ಹಿನ್ನೆಲೆಯಲ್ಲಿ ಕಾನೂನುಬದ್ಧವಾಗಿ ನಿರ್ಮಾಣಗೊಂಡಿರುವ ಮುಡಾ ಬಡಾವಣೆಗಳ ಆಸ್ತಿ ದಾಖಲೆಗಳು ಕೂಡ ವಿಲೇವಾರಿಯಾಗದೆ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಗಮನಿಸಿದ ರಾಜ್ಯ ಸರ್ಕಾರ, ಮುಡಾ ಬಡಾವಣೆಗಳ ಸಮಸ್ಯೆ ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿತ್ತು.

ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಸರ್ಕಾರ ಮುಡಾ ಬಡಾವಣೆಗಳನ್ನು ಬಿ ಕರಾಬು(ಸರ್ಕಾರಿ) ವ್ಯಾಪ್ತಿಯಿಂದ ಹೊರಗಿಡಲು ನಿರ್ಧಾರಿಸಿದೆ. ಈ ಹಿನ್ನೆಲೆಯಲ್ಲಿ ಕುರುಬಾರಹಳ್ಳಿ ಸರ್ವೇ ನಂ.4 ಮತ್ತು ಆಲನಹಳ್ಳಿ ಸರ್ವೇ ನಂ.41 ವ್ಯಾಪ್ತಿಯಲ್ಲಿ ಬರುವ ಮುಡಾ ಬಡಾವಣೆಗಳನ್ನು ಬಿ ಖರಾಬು ವ್ಯಾಪ್ತಿಯಿಂದ ಹೊರಗಿಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ವಾರದಲ್ಲಿ ಸಮಸ್ಯೆ ಇತ್ಯರ್ಥ: ಭೂ ವಿವಾದಕ್ಕೆ ಸಂಬಂಧಿಸಿದಂತೆ ಇನ್ನು ಒಂದು ವಾರದಲ್ಲಿ ಸಮಸ್ಯೆ ಸಂಪೂರ್ಣವಾಗಿ ಬಗೆ ಹರಿಯಲಿದೆ. ಅದರಂತೆ ಸಿದ್ದಾರ್ಥನಗರದ 205.09 ಎಕರೆ, ಕೆ.ಸಿ.ಬಡಾವಣೆಯ 105 ಎಕರೆ, ಜೆ.ಸಿ.ನಗರದ 44.2 ಎಕರೆ ಸೇರಿದಂತೆ 354.11 ಎಕರೆ ಪ್ರದೇಶವನ್ನು ಬಿ-ಖರಾಬಿನಿಂದ ಮುಕ್ತಗೊಳಿಸಲು ಕಳೆದ ಸಚಿವ ಸಂಪುಟ ಸಭೆಯಲ್ಲೇ ಅನುಮೋದನೆ ದೊರೆತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿ ಆಗಿರದ ಕಾರಣ, ಇದೀಗ ಅವರ ಸಹಿಯೊಂದಿಗೆ ಕಡತವನ್ನು ಕಂದಾಯ ಇಲಾಖೆ ಕಾರ್ಯದರ್ಶಿಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಯಾವುದೇ ಆತಂಕ ಬೇಡ: ಸರ್ಕಾರ ಬಿ-ಖರಾಬಿನಿಂದ ಸಿದ್ದಾರ್ಥನಗರ, ಕೆ.ಸಿ.ಬಡಾವಣೆ, ಜೆ.ಸಿ.ಬಡಾವಣೆಗಳನ್ನು ಮುಕ್ತಗೊಳಿಸಿದೆ. ಆದರೆ, ಆದಾಯ ತೆರಿಗೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ, ಹೀಗಾಗಿ ಬಡಾವಣೆ ನಿವಾಸಿಗಳು ಆತಂಕಪಡುವ ಅಗತ್ಯವಿಲ್ಲ. ಜೆ.ಸಿ.ಬಡಾವಣೆಯ 55.2 ಎಕರೆಯಲ್ಲಿ ಆದಾಯ ತೆರಿಗೆ ನಗರ ಸೇರಿರುವ ಬಗ್ಗೆ ಸರ್ವೇ ನಡೆಸಬೇಕಾದ ಅವಶ್ಯಕತೆ ಇದೆ. ಒಂದು ವೇಳೆ ಸೇರದೆ ಇದ್ದರೆ ಆದಾಯ ತೆರಿಗೆ ನಗರದ ಸಮಸ್ಯೆ ಬಗೆಹರಿಸಲು ಕೂಡ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

Advertisement

ಭೂ ವಿವಾದ ಹಿನ್ನೆಲೆ: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪತ್ರ ಆಧರಿಸಿ 2 ಸಾವಿರ ಎಕರೆ ಭೂಮಿಯನ್ನು 2010-11ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಸರ್ಕಾರಿ ಭೂಮಿ(ಬಿ ಖರಾಬು) ಎಂದು ಆದೇಶಿಸಿದ್ದರು. ಈ ಸಂದರ್ಭದಲ್ಲಿ ಸದರಿ ಭೂಮಿಯನ್ನು ಬಳಸುತ್ತಿದ್ದ ಕೆಲವರು ಜಿಲ್ಲಾಧಿಕಾರಿ ಆದೇಶವನ್ನು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಶ್ನಿಸಿದರು.

ಈ ವೇಳೆ ಹರ್ಷಗುಪ್ತ ಅವರ ಸ್ಥಾನಕ್ಕೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಪಿ.ಎಸ್‌.ವಸ್ತ್ರದ್‌ ಅವರು,  ಚಾಮುಂಡಿಬೆಟ್ಟದ ತಪ್ಪಲಿನ ಎರಡು ಸಾವಿರ ಎಕರೆ ಪ್ರದೇಶವನ್ನು “ಎ ಖರಾಬು’ ಎಂದು ತೀರ್ಪು ನೀಡಿದರು. ಆದರೆ, ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ವಿಧಾನ ಪರಿಷತ್‌ ಸದಸ್ಯ ಗೋ.ಮಧುಸೂದನ್‌, ಅಂದಿನ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರ ಪರಿಣಾಮ ವಸ್ತ್ರದ್‌ ತಮ್ಮ ತೀರ್ಪು ಹಿಂಪಡೆದರು.

ಇದಾದ ಬಳಿಕ ಭೂ ವಿವಾದ ಹೈಕೋರ್ಟ್‌ ಮೆಟ್ಟಿಲೇರಿತ್ತು, ಈ ಹಂತದಲ್ಲಿ ಜಿಲ್ಲಾಧಿಕಾರಿದ್ದ ಸಿ.ಶಿಖಾ ಎರಡು ಸಾವಿರ ಎಕರೆ ಭೂಮಿಯು ಸರ್ಕಾರಿ ಭೂಮಿ ಎಂದು ಮಹತ್ವದ ತೀರ್ಪು ನೀಡಿದ್ದರು. ಅಲ್ಲದೆ ತೀರ್ಪಿನಲ್ಲಿ ಮುಡಾ ಸ್ವಾಧೀನದಲ್ಲಿರುವ ಭೂಮಿ ಹೊರತುಪಡಿಸಿ ಅಕ್ರಮ ಖಾತೆ ಮಾಡಿಕೊಂಡಿರುವ ಎಲ್ಲಾ ಖಾತೆಯನ್ನು ಬದಲಾಯಿಸಬೇಕೆಂದು ಉಲ್ಲೇಖೀಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next