ಕರ್ಟ್ ಗರ್ಡಲ್, ಪ್ರಿನ್ಸ್‌ಟನ್‌ನ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಪಾಠ ಮಾಡುತ್ತಿದ್ದ ಜಗತøಸಿದ್ಧ ಗಣಿತಜ್ಞ; ಮಾತ್ರವಲ್ಲ ಐನ್‌ಸ್ಟೈನ್‌ನ ಅತ್ಯಂತ ಆತ್ಮೀಯ ಗೆಳೆಯ ಕೂಡ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಾಝಿಗಳ ಹಿಡಿತದಿಂದ ತಪ್ಪಿಸಿಕೊಂಡು ಬಂದ ವಿಜ್ಞಾನಿ-ಗಣಿತಜ್ಞರಲ್ಲಿ ಗರ್ಡ್‌ಲ್ ಕೂಡ ಒಬ್ಬ. 1947ರ ಹೊತ್ತಿಗೆ ಅವನು ಅಮೆರಿಕದ ಪೌರತ್ವಕ್ಕೆ ಅರ್ಜಿ ಹಾಕಿದ್ದ. ಅದೇ ವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ಅವನು ಅಮೆರಿಕದ ನಾಗರಿಕ ಸಚಿವಾಲಯದೆದುರು ಹಾಜರಾಗಿ ತನ್ನ ವಿಧೇಯತೆಯನ್ನು ರುಜುವಾತು ಪಡಿಸಬೇಕಿತ್ತು. ಅಲ್ಲದೆ, ತಾನು ಯಾವುದೇ ರೀತಿಯಲ್ಲೂ ಅಮೆರಿಕಕ್ಕೆ ಕಂಟಕನಾಗುವುದಿಲ್ಲವೆಂದು ಹೇಳಲು ಇಬ್ಬರು ನಂಬಲರ್ಹ ಸಾಕ್ಷ್ಯಗಳನ್ನು ಕರೆದುಕೊಂಡು ಹೋಗಬೇಕಿತ್ತು. ಗರ್ಡ್‌ಲ್ ತನ್ನ ಗೆಳೆಯ ಐನ್‌ಸ್ಟೈನ್ ಮತ್ತು ಮೋರ್ಗನ್ ಸ್ಟರ್ನ್ರನ್ನು ಕರೆದುಕೊಂಡು ಹೋದ.
ಪ್ರಾಥಮಿಕ ಪರೀಕ್ಷೆಗಳೆಲ್ಲ ಆದವು. ಪರೀಕ್ಷೆಯ ಮುಂದಿನ ಹಂತ ಸಂದರ್ಶನ. “ಅಮೆರಿಕದ ಬಗ್ಗೆ ನಿಮಗೇನನ್ನಿಸುತ್ತದೆ?’ ಎಂದು ಸಂದರ್ಶನದ ಮುಖ್ಯ ತೀರ್ಪುಗಾರನಾಗಿದ್ದ ಫಿಲಪ್ ಫಾರ್ಮಾನ್ ಎಂಬ ಸರಕಾರಿ ಅಧಿಕಾರಿ ಕೇಳಿದಾಗ ಗರ್ಡ್‌ಲ್, “ದಯವಿಟ್ಟು ತಪ್ಪು ತಿಳಿಯಬೇಡಿ. ಈ ದೇಶದ ಸಂವಿಧಾನದಲ್ಲಿರುವ ಒಂದು ಮುಖ್ಯ ದೋಷವನ್ನು ಕಂಡು ಹಿಡಿದಿದ್ದೇನೆ. ಆ ದೋಷ ಎಷ್ಟು ಗಂಭೀರವಾದದ್ದೆಂದರೆ, ಅದು ಮುಂದೆ ಅಮೆರಿಕವನ್ನು ಸರ್ವಾಧಿಕಾರಿಯ ಕೈಯಲ್ಲೂ ಇಡಬಹುದು’ ಎಂದ. ಈ ಉತ್ತರ ಕೇಳುತ್ತಲೇ ಐನ್‌ಸ್ಟೈನ್ ಮತ್ತು ಮೋರ್ಗ್‌ನ್ ಸ್ಟರ್ನ್ ಇಬ್ಬರೂ ಮುಖ ಮುಚ್ಚಿಕೊಳ್ಳುವಂತಾಯಿತು. ಗರ್ಡ್‌ಲ್ ಈ ಬಗ್ಗೆ ಉತ್ತರ ಕೊಡುತ್ತಾನೆಂದು ಅವರೆಣಿಸಿರಲಿಲ್ಲ. ಇದರಿಂದ ಅವನ ಪೌರತ್ವದ ಕೆಲಸಕ್ಕೆ ಎಳ್ಳು ನೀರು ಬಿಟ್ಟಂತೆಯೇ ಎಂದು ಅವರಿಗನಿಸಿತು.
ಆದರೆ, ಪ್ರಶ್ನೆ ಮಾಡುತ್ತಿದ್ದ ಫಾರ್ಮಾನ್‌ಗೆ ಐನ್‌ಸ್ಟೈನ್ ಅವರ ಪರಿಚಯವಿತ್ತು. ಐನ್‌ಸ್ಟೈನ್‌ರ ಪರೀಕ್ಷೆ ನಡೆಸಿದ್ದವನು ಅವನೇ ಆದ್ದರಿಂದ, ಅವರ ಗೆಳೆಯನಾದ ಗರ್ಡ್‌ಲ್‌ನ ಬಗ್ಗೆ ವಿಶ್ವಾಸ ಇತ್ತು. ಆದರೂ, “ಹಾಗೇಕೆ ಹೇಳುವಿರಿ ಮಾನ್ಯ ಗರ್ಡ್‌ಲ್ ಅವರೇ? ನಿಮ್ಮನ್ನು ಆ ರೀತಿ ಯೋಚಿಸಲು ಪ್ರೇರೇಪಿಸಿದ ಅಂಶ ಯಾವುದು?’ ಎಂದು ಕೇಳಿದ. ಇದರಿಂದ ಮತ್ತಷ್ಟು ಹುರುಪುಗೊಂಡ ಗರ್ಡ್‌ಲ್, ಗಣಿತದ ತತ್ವಗಳನ್ನು ಹಾಕಿ ನೋಡಿದರೆ ಅಮೆರಿಕದ ಸಂವಿಧಾನದಲ್ಲಿ ಎಷ್ಟೊಂದು ತಪ್ಪುಗಳನ್ನು ಹುಡುಕಬಹುದೆಂಬುದನ್ನು ಸವಿಸ್ತಾರವಾಗಿ ವಿವರಿಸಲು ತೊಡಗಿದ. ಫಾರ್ಮಾನ್‌ಗೆ ಆ
ಪರಿಸ್ಥಿತಿ ಅರ್ಥವಾಯಿತು. “ಅದಿರಲಿ ಗರ್ಡ್‌ಲ್ ಅವರೇ, ಇಗೋ ನಿಮ್ಮ ಅರ್ಜಿಗೆ ಸಹಿ ಹಾಕಿದ್ದೇನೆ. ನಿಮಗೆ ಪೌರತ್ವ ಸಿಗುವುದಕ್ಕೇನೂ ಅಡಚಣೆಯಿಲ್ಲ’ ಎಂದು ಹೇಳಿ ಅಲ್ಲಿ ಉದ್ಬವಿಸಿದ್ದ ಪರಿಸ್ಥಿತಿಯನ್ನು ತಿಳಿಯಾಗಿಸಿದ.