Advertisement

ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಕೂರ್ಮಾರಾವ್‌ ಸೂಚನೆ

03:18 PM Aug 09, 2020 | Suhan S |

ಯಾದಗಿರಿ: ಕೃಷ್ಣಾ ಮತ್ತು ಭೀಮಾ ನದಿ ಪಾತ್ರದಲ್ಲಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಿಶೀಲಿಸಿ ಸಂತ್ರಸ್ತರನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮರಾವ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಪಂ ಸಭಾಂಗಣದಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಪಾತ್ರಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಉದ್ಭವಿಸಬಹುದಾದ ಪ್ರವಾಹದ ಸ್ಥಿತಿಗತಿ ಅವಲೋಕಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಇದರಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗುತ್ತಿದೆ. ಇದರಿಂದ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದರು.

ನದಿ ಪಾತ್ರದ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸಬೇಕು, ಕಳೆದಬಾರಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಈ ಬಾರಿಯೂ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ನಾರಾಯಣಪುರ ಜಲಾಶಯದಿಂದ ನೀರು ಬಿಡುವ ಮಾಹಿತಿ ಗ್ರಾಮಗಳಲ್ಲಿ ಡಂಗುರ ಸಾರಿ ಜನರಿಗೆ ಜಾಗೃತಿ ಮೂಡಿಸಬೇಕು. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಪರಿಶೀಲಿಸಲು ತಾಕೀತು ಮಾಡಿದರು. ಹೆಚ್ಚು ನೀರು ಬಂದಾಗ ರೈತರು ತಮ್ಮ ಪಂಪ್‌ಸೆಟ್‌ ತೆಗೆಯಲು ನದಿಯಲ್ಲಿ ಇಳಿಯುವ ಸಾಧ್ಯತೆ ಇದೆ. ಆದರೆ ಕಡ್ಡಾಯವಾಗಿ ರೈತರು ಇಳಿಯದಂತೆ ಜಾಗೃತಿ ವಹಿಸಬೇಕು. ಪ್ರವಾಹ ಪೀಡಿತವಾಗುವ ಗ್ರಾಮಗಳಲ್ಲಿನ ಸಂತ್ರಸ್ತರಿಗೆ ಆತ್ಮವಿಶ್ವಾಸ ಮೂಡಿಸಿ ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವಂತೆ ತಿಳಿಸಿದರು.

ಕಳೆದ ಬಾರಿ ಒಂದು ಕೇಂದ್ರದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರ ಮಾಡುತ್ತಿದ್ದು ಇದೀಗ ಕೋವಿಡ್‌-19 ಇರುವುದರಿಂದ ಹೆಚ್ಚು ಜನರು ಸ್ಥಳಾಂತರಿಸದೇ ಒಂದು ಕೇಂದ್ರದಲ್ಲಿ ಸುಮಾರು 200 ಒಳಗೆ ಇರುವಂತೆ ಹೇಳಿದ ಅವರು ಸ್ಥಳಾಂತರಗೊಂಡ ಜನರಿಗೆ ಮಾಸ್ಕ್, ಟೆಸ್ಟಿಂಗ್‌, ಸ್ಯಾನಿಟೈಸರ್‌, ಸ್ಕ್ರೀನಿಂಗ್‌ ಮಾಡಿಸಬೇಕು ಎಂದು ತಿಳಿಸಿದರು.

ಕೋವಿಡ್‌-19 ವೇಳೆ ಪ್ರವಾಹ ಸಂತ್ರಸ್ತ ಕೇಂದ್ರ ಮತ್ತು ಜಾನುವಾರುಗಳ ಕೇಂದ್ರಗಳನ್ನು ಹೆಚ್ಚಾಗಿ ಮಾಡಬೇಕು, 4 ಲಕ್ಷ ಹೆಚ್ಚಿನದಾಗಿ ನೀರು ಬಿಡುವುದರಿಂದ ನೀಲಕಂಠರಾಯನ ಗಡ್ಡೆ ಮುಳುಗಡೆಯಾಗುವ ಸಂಭವವಿದ್ದು ಅಲ್ಲಿ ನಿಯೋಜನೆಗೊಂಡ ಅಧಿಕಾರಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಬೇಕು ಎಂದು ಹೇಳಿದರು.

Advertisement

ಭೀಮಾ ನದಿಯ ಸನ್ನತಿ ಬ್ಯಾರೇಜ್‌ ವ್ಯಾಪ್ತಿಯಲ್ಲಿನ ಗ್ರಾಮ ಸ್ಥಳಾಂತರ ಮಾಡಿದ್ದು ಇನ್ನು ಕೆಲ ಜನರು ಹಳೆಯ ಗ್ರಾಮದಲ್ಲಿದ್ದು ಅವರಿಗೆ ಎಚ್ಚರಿಕೆ ನೀಡಬೇಕು. ಆಹಾರ ಇಲಾಖೆಯಿಂದ ತಿಂಗಳ 10ರೊಳಗೆ ಆಹಾರಧಾನ್ಯ ಪೂರೈಕೆ ಮಾಡಬೇಕೆಂದರು. ಈ ವೇಳೆ ಜಿಲ್ಲಾ ಮಟ್ಟದ ಪ್ರವಾಹ ಪೀಡಿತ ಗ್ರಾಮಗಳಿಗೆ ನಿಯೋಜನೆ ಮಾಡಿದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next