Advertisement

ಕುರ್ಲಾ ಬಂಟರ ಭವನ: ನವರಾತ್ರಿ ವಿಶೇಷ ಸಂಭ್ರಮ 

12:43 PM Sep 28, 2017 | Team Udayavani |

ಮುಂಬಯಿ: ಸುಮಾರು 90 ವರ್ಷಗಳ ಇತಿಹಾಸವನ್ನು ಹೊಂದಿರುವ ಬಂಟ ಸಮಾಜದ ಹಿರಿಯ ಸಂಸ್ಥೆ ಬಂಟರ ಸಂಘ ಮುಂಬಯ ಇದರ ಕೀರ್ತಿಯು ಇಂದು ವಿಶ್ವದಾದ್ಯಂತ ಹರಡಿದ್ದರೆ ಅದಕ್ಕೆ ಸಮಾಜದ ಬಂಟ ಮಹಾನೀಯರ ಕೊಡುಗೆ, ಸಂಘದ ಕಾರ್ಯಕರ್ತರ ಪರಿಶ್ರಮದ ಫಲವೇ ಸಾಕ್ಷಿಯಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ನುಡಿದರು.

Advertisement

ಸೆ. 23ರಂದು ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಹಾಗೂ ಸಂಘದ ಜ್ಞಾನಮಂದಿರ ಸಮಿತಿ ಜಂಟಿ ಆಶ್ರಯದಲ್ಲಿ ಜರಗಿದ ನವರಾತ್ರಿ ವಿಶೇಷ ಕಾರ್ಯಕ್ರಮ ಕಾಡಮಲ್ಲಿಗೆ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಟರ ಸಂಘವಿಂದು ಜ್ಞಾನದ ಭಂಡಾರವಾಗಿ ಅತೀ ಎತ್ತರಕ್ಕೆ ನಿಂತ ಸಂಸ್ಥೆಯಾಗಿದೆ. ಸಮಾಜದ ಉದ್ಧಾರಕ್ಕಾಗಿ ಸದಾ ಚಿಂತಿಸುವ ಸಂಘವು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಕೊಡುಗೆ ಅಪಾರವಾಗಿದೆ. ಕಲೆ, ಸಂಸ್ಕೃತಿಯ ಪ್ರತೀಕವಾಗಿರುವ ಸಂಘವು ಕಲೆ, ಕಲಾವಿದರನ್ನು ಗೌರವಿಸುವ ಜೊತೆಗೆ ಪ್ರತಿಭಾನ್ವಿತ ಬಂಟರ ಅನ್ವೇಷಣೆಗೆ ವೇದಿಕೆಯಾಗಿರುವುದು ಸಂತೋಷದಾಯಕ. ಇಲ್ಲಿಯ ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆಯಿದೆ ಎಂದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಸಂಘದಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ಸಂಘವು ಸಮಾಜ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕಾರ್ಯವನ್ನು ಅನೇಕ ವರ್ಷಗಳಿಂದ ಮಾಡುತ್ತಿದೆ. ನಾನು ಸಂಘದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಗೆ ಕಾರ್ಯಾಧ್ಯಕ್ಷರನ್ನಾಗಿ ರವೀಂದ್ರ ನಾಥ ಭಂಡಾರಿ ಅವರನ್ನು ನೇಮಿಸಿದ್ದೆ. ಅದೇ ವರ್ಷ ಅವರು ತನ್ನ ಸ್ವಂತ ಖರ್ಚಿನಿಂದ ಹೊಸ ನಗರ ಯಕ್ಷಗಾನ ಮಂಡಳಿಯನ್ನು ಆಹ್ವಾನಿಸಿ ಹಿಂದೆಂದೂ ನಡೆಯದ ರೀತಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆಸಲು ಮುಂದಾದರು. ಅವರು ಕಲೆಯ ಬಗ್ಗೆ ಇಟ್ಟಿರುವ ಅದಮ್ಯ ಉತ್ಸಾಹ, ಸಹಕಾರವು ಅಭಿನಂದನೀಯ. ಸಂಘದ ಎಲ್ಲ ಸಮಿತಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜ್ಞಾನಮಂದಿರ ಸಮಿತಿಯ  ಕಾರ್ಯಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ ಅವರು ದೇವ
ಸ್ಥಾನದ ಧರ್ಮದರ್ಶಿಯಂತೆ ದೇಗುಲದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿಕೊಂಡು  ಬರುತ್ತಿರುವುದು ಅಭಿನಂದನೀಯ ಎಂದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಸಂಘದ ಮಾಜಿ ಅಧ್ಯಕ್ಷ ಭುಜಂಗ ಎಂ. ಶೆಟ್ಟಿ  ಮತ್ತು ವಿನೋದಾ ಎಂ. ಶೆಟ್ಟಿ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಹೆಸರಾಂತ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಯಕ್ಷಗಾನದ ನಿರ್ದೇಶಕರಾಗಿ ಸಹಕರಿಸಿದ ಕಲಾವಿದ ವಾಸುದೇವ ಮಾರ್ನಾಡ್‌, ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷಕಲಾ ವೇದಿಕೆಯ ಸಂಚಾಲಕ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಅವರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

ಸಂಘದ ಮುಖವಾಗಿ ಇತ್ತೀಚೆಗೆ ಆಯೋಜಿಸಿದ್ದ ಲೇಖನ, ಕತೆ, ಕವನ ಸ್ಪರ್ಧೆಯಲ್ಲಿ ವಿಜೇತರಾದ ಲಲಿತಾ ಪಿ. ಅಂಗಡಿ, ಲತಾ ಸಂತೋಷ್‌ ಶೆಟ್ಟಿ, ರಮಣ್‌ ಶೆಟ್ಟಿ ರೆಂಜಾಳ, ರಾಜೇಶ್ವರಿ ಹೆಗಡೆ, ಡಾ| ಕರುಣಾಕರ ಶೆಟ್ಟಿ, ವಾಣಿ ಶೆಟ್ಟಿ ಹಾಗೂ ಸಮಾಧಾನಕರ ಬಹುಮಾನ ಪಡೆದ 10 ವಿಜೇತರನ್ನು  ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು, ಸಂಪಾದಕ ಮಂಡಳಿಯ ಡಾ| ಸುನೀತಾ ಎಂ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

Advertisement

ಮೋಹನ್‌ದಾಸ್‌ ರೈ ಪ್ರಾರ್ಥನೆಗೈದರು. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್‌ ಭಂಡಾರಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಟರ ಸಂಘದ ಸಾಂಸ್ಕೃತಿಕ ಸಂಪತ್ತು ಹೆಚ್ಚಲು ಹಾಗೂ ಸಂಘದ ಬಂಟ ಯಕ್ಷಕಲಾ ವೇದಿಕೆಯು ಹುಟ್ಟಲು ಕಾರಣಕರ್ತರಾಗಿರುವ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಪಿ. ಶೆಟ್ಟಿ ಅವರ ಕೊಡುಗೆ ಅನನ್ಯವಾಗಿದೆ. ಸಂಘಕ್ಕೆ ತನ್ನನ್ನು ಪರಿಚಯಿಸಿದ ಮಾಜಿ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ ಕರ್ನಿರೆ ವಿಶ್ವನಾಥ ಶೆಟ್ಟಿ ಅವರ ಋಣಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಯಕ್ಷಗಾನ ಕಲೆಯ ಬಗೆಗಿನ ತನ್ನ ಅಭಿಮಾನ ಹಾಗೂ ಸಾಂಸ್ಕೃತಿಕ ಪ್ರೀತಿಗೆ ಅವಕಾಶ ನೀಡಿದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರಿಗೆ ಕೃತಜ್ಞತೆಗಳು ಎಂದು ನುಡಿದರು.

ಅತಿಥಿಗಳನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಬಂಟರವಾಣಿಯ ಗೌರವ
ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. 

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ ದಾಸ್‌ ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಕುತ್ಯಾರ್‌, ಜತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಜ್ಞಾನಮಂದಿರದ ಕಾರ್ಯಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ಶೆಟ್ಟಿ, ಹಾಗೂ ಕಾರ್ಯಕ್ರಮದ ರೂವಾರಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಮುಂಬಯಿ ಬಂಟರ ಸಂಘ ಇಂದು ವಿಶ್ವವಿಖ್ಯಾತಗೊಳ್ಳಲು ಕಾರಣಕರ್ತರಾದ ಹಿರಿಯ ಬಂಟ ಬಾಂಧವರ ಪರಿಶ್ರಮ ಸದಾ ಸ್ಮರಣೀಯ. ಬಂಟರ ಸಂಘವನ್ನು ಮುಂದಿನ ದಿನಗಳಲ್ಲಿ ಉಳಿಸಿ-ಬೆಳೆಸುವ ಹೊಣೆಗಾರಿಕೆ ನಮ್ಮ ಯುವಪೀಳಿಗೆಯದ್ದಾಗಿದೆ. ಹಲವು ವರ್ಷಗಳ ಹಿಂದೆ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಭುಜಂಗ ಎಂ. ಶೆಟ್ಟಿ ಅವರ ಮಾರ್ಗದರ್ಶನದಂತೆ ಸಂಘಕ್ಕೆ ಸೇರಿದ ತನಗೆ ಆ ಬಳಿಕದ ವರ್ಷಗಳಲ್ಲಿ ಸಮಾಜ ಸೇವೆಗೈಯುವ ಅವಕಾಶ ಒಲಿದು ಬಂತು. ಸಂಘಕ್ಕಾಗಿ ಶಕ್ತಿಗನುಸಾರವಾಗಿ ಸೇವೆಗೈದ ಆತ್ಮತೃಪ್ತಿ ನನಗಿದೆ. ವಿವಿಧ ಉಪ ಸಮಿತಿಗಳು ಸ್ಪರ್ಧಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನೀಯ. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರು ತನ್ನ ಸೇವಾ ಕಾರ್ಯದಲ್ಲಿ ತನ್ನದೇ ಆದ ಸ್ವಂತ ಖರ್ಚಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಇತರರಿಗೆ ಮಾದರಿಯಾಗಿದ್ದಾರೆ. ಸಂಘವು ತನ್ನದೇ ಆದ ಆಸ್ಪತ್ರೆಯೊಂದನ್ನು ತೆರೆಯುವ ಯೋಚನೆ-ಯೋಜನೆಗೆ ತೊಡಗಬೇಕಾಗಿದೆ 
  – ಐಕಳ ಹರೀಶ್‌ ಶೆಟ್ಟಿ (ಉಪಾಧ್ಯಕ್ಷರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ).

Advertisement

Udayavani is now on Telegram. Click here to join our channel and stay updated with the latest news.

Next