ಮುಂಬಯಿ: ಜಿಎಸ್‌ಬಿ ಸಭಾ ಕುರ್ಲಾ, ಚೆಂಬೂರ್, ಘಾಟ್ಕೊàಪರ್ ಸಂಸ್ಥೆಯ ಬಾಲಾಜಿ ಮಂದಿರದ ಸುವರ್ಣ ಗಣೇಶೋತ್ಸವ ಸಂಭ್ರಮದ ಅಂಗವಾಗಿ ಎ. 29 ರಂದು ಸಂಜೆ 5ರಿಂದ ಜಿಎಸ್‌ಬಿ ಸಮಾಜದ ಆದಿಮಠ ಎಂದೆಣಿಸಿಕೊಂಡ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಬಾಲಾಜಿ ಮಂದಿನಕ್ಕೆ ಆಗಮಿಸಲಿದ್ದಾರೆ.
ಶ್ರೀಗಳು ಎ. 29ರಿಂದ ಮೇ 3 ರವರೆಗೆ ಬಾಲಾಜಿ ಮಂದಿರದಲ್ಲಿ ಮೊಕ್ಕಾಂ ಹೂಡಲಿದ್ದು, ಮೇ 3 ರಂದು ಅಪರಾಹ್ನ 3 ರಿಂದ ಸ್ವಮಠ ವಾಲ್ಕೇಶ್ವರದ ಶಾಂತಾದುರ್ಗಾ ದೇವಾಲಯಕ್ಕೆ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.
ಈ ನಡುವೆ ಸುವರ್ಣ ಗಣೇ ಶೋತ್ಸವ ಆಚರಣೆಯ ಅಂಗವಾಗಿ ಕುರ್ಲಾ ಬಾಲಾಜಿ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎ. 30ರಂದು ವೈಶಾಖ ಪೂರ್ಣಿಮೆಯ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಜರಗಲಿವೆ.
ಆ ದಿನ ಪೂರ್ವಾಹ್ನ 11ರಿಂದ ಪಂಚಾಮೃತ ಅಭಿಷೇಕ, ಮಧ್ಯಾಹ್ನ 12.30ರಿಂದ ಸುವರ್ಣಾಲಂಕಾರ ಪೂಜೆ, ಸಂಜೆ 7 ರಿಂದ ಭಜನೆ, ವಸಂತ ಪೂಜೆ, ಅಷ್ಠಾವಧಾನ ಸೇವೆಯನ್ನು ಆಯೋಜಿಸಲಾಗಿದೆ. ರಾತ್ರಿ 10.15 ರಿಂದ ಪ್ರಸಾದ ವಿತರಣೆ ನಡೆಯಲಿದೆ. ಮೇ 3 ರಂದು ವೈಶಾಖ ಚತುರ್ಥಿಯ ದಿನ ಪ್ರಾತಃಕಾಲ 7 ರಿಂದ ನೈರ್ಮಲ್ಯ ವಿಸರ್ಜನೆ, ಗಣಹೋಮ, ಪೂರ್ಣಾಹುತಿ, ಪ್ರಸಾದ ವಿತರಣೆ ನೆರವೇರಲಿದೆ. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮಂದಿರದ ಅಧ್ಯಕ್ಷ ಗಣೇಶ ಬಿ. ಕಾಮತ್ ಮತ್ತು ಸುವರ್ಣ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಿವೇಕ್ ಭಂಡಾರಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.