ನಗರ : ಬನ್ನೂರಿನಿಂದ ಸಂಪರ್ಕ ಕಲ್ಪಿಸುವ ಕುಂಟ್ಯಾನದಲ್ಲಿ ಸೇತುವೆಯ ಮಧ್ಯೆ ಅಡ್ಡಲಾಗಿ ಬೇಲಿಯೊಂದು ನಿರ್ಮಾಣವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ಏಕಾಏಕಿ ಬೇಲಿಯನ್ನು ಕಂಡ ಸ್ಥಳೀಯರು ರಸ್ತೆಗೆ ಆಕ್ಷೇಪ ವ್ಯಕ್ತಪಡಿಸಿದ ಖಾಸಗಿ ವ್ಯಕ್ತಿಯೇ ಬೇಲಿ ಹಾಕಿದ್ದಾರೆ ಎಂದು ಆರೋಪಿಸಿ, ಪ್ರತಿಭಟನೆಗೂ ಸಿದ್ಧತೆ ನಡೆಸಿದ್ದರು. ಜತೆಗೆ ಸ್ಥಳದಲ್ಲಿ ಜನ ಜಮಾಯಿಸಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಸಂಚಾರಿ ಠಾಣೆ ಪಿಎಸ್‌ಐ ಮಹಾಬಲ ಶೆಟ್ಟಿ, ಬನ್ನೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಾಂತಾರಾಮ್, ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಕೂಡ ಆಗಮಿಸಿದ್ದರು.
ಬಳಿಕ ರಸ್ತೆ ಕಾಮಗಾರಿಯ ಗುತ್ತಿಗೆದಾರ ಸ್ಥಳಕ್ಕೆ ಆಗಮಿಸಿ, ಸೇತುವೆಯ ಸಂಪರ್ಕ ರಸ್ತೆಯ ತಡೆಗೋಡೆಗಾಗಿ ಹೊಂಡ ತೆಗೆಯಲಾಗಿದೆ. ಆದರೆ ಪ್ರಸ್ತುತ ಕಾಮಗಾರಿ ನಡೆಸುವುದಕ್ಕೆ ಖಾಸಗಿ ವ್ಯಕ್ತಿ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ರಸ್ತೆಯಲ್ಲಿ ವಾಹನ ಸಂಚರಿಸಿ ಯಾವುದೇ ಅಪಾಯ ಸಂಭವಿಸಬಾರದು ಎಂದು ಮೇ 19ರಂದು ನಾವೇ ತಡೆಬೇಲಿ ಹಾಕಿರುವುದಾಗಿ ತಿಳಿಸಿದಾಗ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಮುಂದಿನ ದಿನಗಳಲ್ಲಿ ಸೇಡಿಯಾಪು ಮೂಲಕ ತೆರಳುವಂತೆ ಗ್ರಾಮಸ್ಥರಲ್ಲಿ ವಿನಂತಿ ಮಾಡಲಾಗಿ, ಗೊಂದಲಕ್ಕೆ ತೆರೆ ಎಳೆಯಲಾಯಿತು.
ಪ್ರಕರಣದ ವಿವರ
Advertisement
ಬಳಿಕ ಸೇತುವೆಯ ಸಂಪರ್ಕ ರಸ್ತೆಯ ಅಪೂರ್ಣ ಕಾಮಗಾರಿಯಿಂದ ಸುರಕ್ಷಾ ದೃಷ್ಟಿಯಿಂದ ತಾವೇ ಬೇಲಿ ಹಾಕಿರುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡ ಬಳಿಕ ಪ್ರಕರಣ ಸುಖಾಂತ್ಯಗೊಂಡ ಘಟನೆ ಸೋಮವಾರ ನಡೆದಿದೆ.
Related Articles
Advertisement
ಬನ್ನೂರಿನಿಂದ ಕುಂಟ್ಯಾನ, ಕಜೆ, ಸೇಡಿಯಾಪು ಮೂಲಕ ಪೆರ್ನೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 1.50 ಕೋಟಿ ರೂ. ವೆಚ್ಚದಲ್ಲಿ ಡಾಮರು ಹಾಗೂ ಸೇತುವೆ ಕಾಮಗಾರಿಗೆ ಅನುದಾನ ಮಂಜೂರುಗೊಂಡು ಸೇತುವೆ ಸಹಿತ ಬಹುತೇಕ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಬನ್ನೂರು ಭಾಗದಿಂದ ರಸ್ತೆ ಸಂಪರ್ಕಿಸಬೇಕಾದರೆ ಮಣ್ಣು ತುಂಬಿಸಿ ಸಂಪರ್ಕ ಕಲ್ಪಿಸಬೇಕಿತ್ತು. ಹೀಗಾಗಿ ತಡೆಬೇಲಿ ನಿರ್ಮಾಣಕ್ಕೆ ಒಂದು ಬದಿಯನ್ನು ಅಗೆದು ಹೊಂಡ ಮಾಡಲಾಗಿತ್ತು. ಆದರೆ ಈ ಕಾಮಗಾರಿ ಯನ್ನು ಆಕ್ಷೇಪಿಸಿ ಸ್ಥಳೀಯ ಜಾಗದ ಮಾಲಕರೊಬ್ಬರು ದೂರು ನೀಡಿದ್ದರು.
ಪ್ರಸ್ತುತ ಮಳೆ ಬಂದಿದ್ದರಿಂದ ವಾಹನ ಸಂಚರಿಸಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಜತೆಗೆ ಶಾಲಾ-ಕಾಲೇಜು ಆರಂಭ ಗೊಂಡರೆ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಅಪಾಯವಾಗುವುದು ಬೇಡ ಎಂದು ಮುಂಜಾಗ್ರತೆಗಾಗಿ ಗುತ್ತಿಗೆದಾರರು ಬೇಲಿ ಹಾಕಿದ್ದರು.
ಫಲಕ ಬೇಕಿತ್ತು
ಬೇಲಿ ಹಾಕಿದ ಸ್ಥಳದಲ್ಲಿ ಫಲಕವೊಂದನ್ನು ಹಾಕಿದ್ದರೆ ಯಾವುದೇ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಏಕಾಏಕಿ ಬೇಲಿಯನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಫಲಕವನ್ನು ಅಳವಡಿಸುವುದಕ್ಕೆ ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ.