ಪಳ್ಳಿ: ಕಲ್ಯಾ ಗ್ರಾ.ಪಂ. ವ್ಯಾಪ್ತಿಯ ಕುಂಟಾಡಿ-ಹಾಳೆಕಟ್ಟೆ ಸಂಪರ್ಕದ ಸುಮಾರು 1.5ಕಿ.ಮೀ. ರಸ್ತೆಯು ಸಂಪೂರ್ಣ ದುಸ್ತರಗೊಂಡು ಹೊಂಡ ಗುಂಡಿಗಳಿಂದ ಆವೃತವಾಗಿದೆ.
ಗ್ರಾ.ಪಂ., ಕಂದಾಯ ಇಲಾಖೆ, ಶಾಲೆ, ಆರೋಗ್ಯ ಇಲಾಖೆಗಳ ಸಂಪರ್ಕಕ್ಕಾಗಿ ಕುಂಟಾಡಿ ಭಾಗದ ಸಾರ್ವಜನಿಕರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ನಿಟ್ಟೆ ಆಸುಪಾಸಿನ ಸ್ಥಳೀಯರೂ ಉಡುಪಿ, ಮಣಿಪಾಲಕ್ಕೆ ಈ ರಸ್ತೆಯ ಮೂಲಕವೇ ಸಂಚರಿಸುತ್ತಾರೆ.
ಕುಂಟಾಡಿ ಅಸುಪಾಸು ಸುಮಾರು 150ಕ್ಕೂ ಅಧಿಕ ಮನೆಗಳಿದ್ದು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅವರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಮಲ್ಲಯ ಬೆಟ್ಟು ನಿವಾಸಿಗಳಿಗೂ ತಾಲೂಕು ಕೇಂದ್ರ ಸಂಪರ್ಕಿಸಲು ಈ ಮಾರ್ಗ ಅತ್ಯವಶ್ಯ.
ಘನ ವಾಹನಗಳ ಸಂಚಾರ
Advertisement
ಈ ಸಂಪರ್ಕ ರಸ್ತೆಯು ಸುಮಾರು 5.ಕಿ.ಮೀ ಉದ್ದವಿದ್ದು ಕೆಲ ತಿಂಗಳ ಹಿಂದೆ 2018-19ನೇ ಪ್ರಾಕೃತಿಕ ವಿಕೋಪ ಅನುದಾನದಡಿ ಸುಮಾರು 3.18 ಲಕ್ಷ ರೂ.ವೆಚ್ಚದಲ್ಲಿ 3.5 ಕಿ.ಮೀ ರಸ್ತೆಯನ್ನು ಪ್ಯಾಚ್ ವರ್ಕ್ ಮಾಡಲಾಗಿತ್ತು. ಆದರೆ ಕುಂಟಾಡಿಯಿಂದ ಮಲ್ಲಯಬೆಟ್ಟು ವರೆಗಿನ ಸುಮಾರು 1.5 ಕಿ.ಮೀ ರಸ್ತೆಗೆ ಮಾತ್ರ ತೇಪೆ ಕಾರ್ಯ ಮಾಡದ ಕಾರಣ ಹೊಂಡ ಗುಂಡಿಗಳಿಂದ ಕೂಡಿದೆ. ಇದರಿಂದಾಗಿ ಮಳೆ ನೀರು ಹೊಂಡಗಳಲ್ಲಿ ನಿಂತು ಸಂಚಾರ ಕಷ್ಟಕರವಾಗಿದೆ.
Related Articles
Advertisement
ಮಲ್ಲಯಬೆಟ್ಟು ಪರಿಸರದಲ್ಲಿ ಕಲ್ಲಿನ ಕೋರೆಗಳಿದ್ದು ಇವುಗಳಿಗೆ ತೆರಳುವ ಘನ ವಾಹನಗಳ ಸಂಚಾರದಿಂದ ರಸ್ತೆ ಹಾಳಾಗಿದ್ದು ಈ ಬಗ್ಗೆ ಸ್ಥಳೀಯರು ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿ ಅಧಿಕ ಪ್ರಮಾಣದ ಭಾರ ಹೊರುವ ಲಾರಿಗಳನ್ನು ಕಳೆದ 4 ತಿಂಗಳ ಹಿಂದೆ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ್ದ ಕಾರ್ಕಳ ಠಾಣಾಧಿಕಾರಿ ಗ್ರಾಮಸ್ಥರ ಮನವೊಲಿಸಿ ಈ ರಸ್ತೆಗೆ ಕಲ್ಲಿನ ಕೋರೆಗಳ ಮಾಲಕರಿಂದ ಪ್ಯಾಚ್ ವರ್ಕ್ ಕಾಮಗಾರಿ ಮಾಡಿಸಿ ಕೊಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದಿದ್ದರು. ಆದರೂ ಈವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಯ ಭರವಸೆ
ವಿಷಯವನ್ನು ಜಿ.ಪಂ. ಸದಸ್ಯರ ಗಮನಕ್ಕೆ ತರಲಾಗಿದ್ದು ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ.
– ಕೃಷ್ಣರಾಜ ರೈ ಕುಂಟಾಡಿ, ಕಲ್ಯಾ ಗ್ರಾ.ಪಂ. ಸದಸ್ಯರು