ಕುಣಿಗಲ್: ಕುಡಿಯಲು ನೀರು ಕೇಳುವ ನೆಪದಲ್ಲಿ, ತೋಟದ ಮನೆಗೆ ನುಗ್ಗಿದ ದರೋಡೆಕೋರರು, ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಮನೆಯಲ್ಲಿ ಇದ್ದ ಮೂರು ಲಕ್ಷರೂ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಹಾಡುಹಗಲೇ ತಾಲೂಕಿನ ಕಸಬಾ ಹೋಬಳಿ ಉರ್ಕೆಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಉರ್ಕೆಹಳ್ಳಿ ಗ್ರಾಮದ ಗಂಗಯ್ಯ (56) ಗುಂಡು ತಗಲಿ ಗಾಯಗೊಂಡ ವ್ಯಕ್ತಿ.
ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಹೊಂದಿಕೊಂಡಂತೆ ಇರುವ ಉರ್ಕೆಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಗಂಗಯ್ಯ ಮತ್ತು ಅವರ ಕುಟುಂಬ ವಾಸವಾಗಿದ್ದಾರೆ. ಮಂಗಳವಾರ ಇಬ್ಬರು ದರೋಡೆಕೋರರು ಹೆಲ್ಮೆಟ್ ಧರಿಸಿ ಮನೆ ಹತ್ತಿರ ಬಂದಿದ್ದಾರೆ ಕುಡಿಯಲು ನೀರು ಕೋಡಿ ಎಂದು ಪುಷ್ಪಲತಾ ಅವರನ್ನು ಕೇಳಿದ್ದಾರೆ, ಪುಷ್ಪಲತಾ ತನ್ನ ತಾಯಿ ಗಂಗಮ್ಮನಿಗೆ ಯಾರೋ ಕುಡಿಯಲು ನೀರು ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ, ಗಂಗಮ್ಮ ಕುಡಿಯಲು ನೀರು ತರಲೆಂದು ಮನೆ ಒಳಗೆ ಹೋಗಿದ್ದ ವೇಳೆ ದರೋಡೆಕೋರರು ಒಳಗೆ ನುಗ್ಗಿ ಮನೆಯಲ್ಲಿದ್ದ ಮೂರು ಲಕ್ಷರೂ ನಗದನ್ನು ದೋಚಲು ಯತ್ನಿಸಿದ್ದಾರೆ, ಇದರಿಂದ ಗಾಬರಿಗೊಂಡ ಪುಷ್ಪಲತಾ ಕಿರಿಚಿಕೊಂಡಿದ್ದಾರೆ. ಮನೆಯಲ್ಲೇ ಮಲಗಿದ್ದ ತಂದೆ ಗಂಗಯ್ಯ ಎಚ್ಚರಗೊಂಡು ನೋಡಿದಾಗ ದರೋಡೆಕೋರರು ಹಣವನ್ನು ದೋಚಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ,
ಮನೆಯವರು ಪ್ರತಿಭಟಿಸಿದಾಗ ಓರ್ವ ಗಂಗಯ್ಯನ ಮೇಲೆ ಗುಂಡು ಹಾರಿಸಿದ್ದಾನೆ, ಆ ಗುಂಡು ಗಂಗಯ್ಯನಿಗೆ ತಗಲುವ ಬದಲಾಗಿ ಗೋಡೆಗೆ ತಗಲಿದೆ, ಬಳಿಕ ದರೋಡೆಕೋರರು ಮನೆಯಿಂದ ಪರಾರಿಯಾಗಲು ಯತ್ನಿಸಿದ್ದಾಗ ಮತ್ತೆ ಗಂಗಯ್ಯ ಅವರನ್ನು ಹಿಂಬಾಲಿಸಿದ್ದಾಗ ಮತ್ತೆ ಎರಡನೇ ಬಾರಿ ಗಂಗಯ್ಯನ ಮೇಲೆ ಗುಂಡು ಹಾರಿಸಿದ್ದಾರೆ. ಆ ಗುಂಡು ಗಂಗಯ್ಯನ ಕಾಲಿಗೆ ತಗಲಿ ಗಾಯವಾಗಿದೆ. ಬಳಿಕ ದರೋಡೆಕೋರರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಐಜಿಪಿ ಭೇಟಿ: ಘಟನೆ ಸ್ಥಳಕ್ಕೆ ಧಾವಿಸಿದ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಜಿಲ್ಲಾ ಎಸ್ಪಿ ಅಶೋಕ್, ಡಿವೈಎಸ್‌ಪಿ ಓಂಪ್ರಕಾಶ್ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಮನೆಯವರಿಂದ ಮಾಹಿತಿ ಪಡೆದರು.
ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.