ಕುಣಿಗಲ್: ತಂಬಾಕು ಸೇವನೆ ಕ್ಯಾನ್ಸರ್ ಉಂಟು ಮಾಡುವುದಲ್ಲದೆ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪ್ರಾಚಾರ್ಯ ಸಿ.ಕೆ.ಗೋವಿಂದ ರಾಜು ಎಚ್ಚರಿಸಿದರು. ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸಂಬಂಧ್ ಹೆಲ್ತ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಗುಲಾಬಿ ಹೂ ಆಂದೋಲನಾ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾವಿಗೆ ಕಾರಣ: ಬೀಡಿ, ಸಿಗರೇಟು ಹಾಗೂ ಹೊಗೆ ಸೊಪ್ಪು ಸೇವಿಸುವುದು ತುಂಬ ಅಪಾಯಕಾರಿ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಅಸ್ತಮಾ ಸೇರಿ ಆನೇಕ ರೋಗಗಳು ಕಾಣಿಸಿಕೊಂಡು ಮನುಷ್ಯನ ಸಾವಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.
ಪೂರ್ವಿಕರು ಬೀಡಿ, ಬಂಗಿ ಸೊಪ್ಪು ಸೇವನೆ ಮಾಡಿ ನಶೆ ಏರಿಸಿಕೊಳ್ಳತ್ತಿದ್ದರು. ಮಹಿಳೆಯರು ಹೊಗೆಸೊಪ್ಪು ಹಾಕಿಕೊಳ್ಳುತ್ತಿದ್ದರು. ಇದರಿಂದ ಲಿವರ್, ಬಾಯಿ ಕ್ಯಾನ್ಸರ್ ಸೇರಿ ಮೊದಲಾದ ರೋಗಗಳಿಗೆ ತುತ್ತಾಗುತ್ತಿದ್ದರು. ಆದರೆ ಅಂದಿನ ದಿನದಲ್ಲಿ ಆರೋಗ್ಯ ಕ್ಷೇತ್ರ ಅಷ್ಟೊಂದು ಉತ್ತಮ ವಾಗಿರಲಿಲ್ಲ. ಆರ್ಯುವೇದಕ್ಕೆ ಅವಲಂಬಿತರಾಗಿದ್ದರು. ಆದರೂ ಪ್ರಯೋಜನವಾಗುತ್ತಿರಲಿಲ್ಲ. ಇಂದು ಜಾಗತಿಕ ಯುಗದಲ್ಲಿ ಈ ದುಶ್ಚಟಗಳಿಗೆ ಯುವಕರು ಹಾಗೂ ಯುವತಿಯರು ಒಳಗಾಗಿರುವುದು ವಿಷಾದಕರ ಎಂದರು.
ಬೀಡಿ ಸಿಗರೇಟು ಸೇವನೆ ಚಟವನ್ನಾಗಿಸಿಕೊಂಡಿದ್ದಾರೆ. ಇದರ ಸೇವನೆಯಿಂದ ಸುಮಾರು 500ರಿಂದ 600 ಹಾನಿಕಾರ ಬ್ಯಾಕ್ಟೀರಿಯ ದೇಹ ಸೇರುತ್ತವೆ. ತಂಬಾಕು ಸೇವನೆಯಿಂದ ಕಣ್ಣಿನ ದೃಷ್ಟಿ ಹಾಳಾಗುತ್ತದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 60 ಲಕ್ಷ ಜನ ಮತ್ತು ರಾಜ್ಯದಲ್ಲಿ 60 ಸಾವಿರ ಜನ ಹಾಗೂ ದೇಶದಲ್ಲಿ 5 ನಿಮಿಷಕ್ಕೆ ಒಬ್ಬ ವ್ಯಕ್ತಿ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು. ಇದರ ಜಾಗೃತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆನೇಕ ಕಾರ್ಯಕ್ರಮ ಜಾರಿಗೆ ತಂದಿದೆ. ಹಾಗಾಗಿ ವಿದ್ಯಾರ್ಥಿಗಳು ತಂಬಾಕು ಸೇವನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
ಅಕ್ರಮ ತಂಬಾಕು ಮಾರಾಟ ಹಾಗೂ ನಿಷೇಧಿತ ತಂಬಾಕು ಸೇವನೆ ತಡೆಗಟ್ಟಲು ಅನೇಕ ಕಾಯ್ದೆ ಜಾರಿಗೆ ತರಲಾಗಿದೆ. ಅಲ್ಲದೆ ಕಾನೂನು ಉಲ್ಲಂಘಿಸಿದವರ ವಿರುದ್ಧ ದಂಡ ಹಾಗೂ ಜೈಲು ಶಿಕ್ಷೆ ನೀಡಿದ್ದರೂ ತಂಬಾಕು ನಿಷೇಧ ಜಾರಿಯಾಗಿಲ್ಲ. ತಂಬಾಕು ಸೇವನೆ ಯಿಂದ ಆಗುವ ದುಷ್ಪರಿಣಾಮ ಕುರಿತು ಜನರಲ್ಲಿ ಅರಿವು ಮೂಡಿಸುವ ಮೂಲಕ ತಂಬಾಕು ವ್ಯಸನಿಗಳ ಮನಪರಿವರ್ತನೆ ಸಾಧ್ಯ ಎಂದು ಹೇಳಿದರು.
ಎಚ್ಚರ ವಹಿಸಿ: ವಿದ್ಯಾರ್ಥಿನಿ ಎಂ.ಕೆ. ವರಲಕ್ಷ್ಮೀ ಮಾತನಾಡಿ, ಹಲವು ವಿದ್ಯಾರ್ಥಿಗಳು ಶೋಕಿಗಾಗಿ ತಂಬಾಕು ಪದಾರ್ಥ ಬಳಸಿ ಮೃತ್ಯುಕೂಪಕ್ಕೆ ಬೀಳುತ್ತಿದ್ದಾರೆ. ಇದು ಸರಿಯಲ್ಲ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ತಂಬಾಕು ಬೇರು ಸಮೇತ ಕಿತ್ತೆಸೆಯಬಹುದು. ಎಚ್ಚರ ವಹಿಸದಿದ್ದರೆ ಮನು ಕುಲ ನಾಶವಾಗುತ್ತದೆ ಎಂದು ಹೇಳಿದರು.
ತಂಬಾಕು ಪದಾರ್ಥಗಳು ಮಾರಾಟ ಮಾಡುವ ಅಂಗಡಿ, ಧೂಮಪಾನ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳಿಗೆ ಗುಲಾಬಿ ಹೂ ನೀಡಿ ಅರಿವು ಮೂಡಿಸಲಾಯಿತು. ಉಪನ್ಯಾಸಕರಾದ ಶ್ರೀನಿವಾಸ್‌ಮೂರ್ತಿ, ಎಂ.ಬಿ. ಸಿದ್ದಗಂಗಯ್ಯ, ರೇಣುಕಾರಾಧ್ಯ, ಎಸ್‌ಎಸ್‌ಎಸ್ ವಿದ್ಯಾರ್ಥಿ ಗಳಾದ ರಂಗ ಸ್ವಾಮಿ, ಅಶೋಕ್ ಮತ್ತಿತರರು ಇದ್ದರು.