ಕುಣಿಗಲ್: ಅಸಮರ್ಪಕ ಬಸ್ ವ್ಯವಸ್ಥೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಬಸ್ ಗಳನ್ನು ತಡೆದು ಸೋಮವಾರ (ಡಿ.26) ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್ ಅವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದರು.
ಬಳಿಕ ಮಾತನಾಡಿದ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ, ಕುಣಿಗಲ್ ನಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ತುಮಕೂರಿಗೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಸಮಪರ್ಕವಾಗಿ ಬಸ್ ವ್ಯವಸ್ಥೆ ಮಾಡುವಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ವಿಫಲವಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಕಷ್ಟವಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಉಂಟಾಗಿದೆ. ಸಮಸ್ಯೆ ಬಗ್ಗೆ ಹಲವು ಭಾರಿ ಸಾರಿಗೆ ಸಂಸ್ಥೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ವಿದ್ಯಾರ್ಥಿ ಜೀವಿತ ಮಾತನಾಡಿ, ಮೈಸೂರಿನಿಂದ ತುಮಕೂರು ಕಡೆಗೆ ಹೋಗುವ ಸಾರಿಗೆ ಸಂಸ್ಥೆ ಬಸ್ ಗಳು ವಿದ್ಯಾರ್ಥಿಗಳ ಬಳಿ ಪಾಸ್ ಇದೆ ಎಂಬ ಒಂದೇ ಕಾರಣಕ್ಕೆ ಬಸ್ ಗೆ ಹತ್ತಿಸುವುದಿಲ್ಲ. ಕಾಲೇಜು ಸಮಯದಲ್ಲಿ ಎರಡು ಬಸ್ ಮಾತ್ರ ಕುಣಿಗಲ್ ಡಿಪೋ ನಿಂದ ಬಿಡುತ್ತಾರೆ. ಎರಡು ಬಸ್ ನಲ್ಲಿ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಬಸ್ ನಲ್ಲಿ ವಿದ್ಯಾರ್ಥಿಗಳನ್ನು ಕುರಿ ತುಂಬುವ ರೀತಿ ತುಂಬುತ್ತಾರೆ. ಇದರಿಂದ ಬಸ್ ನಲ್ಲಿ ಪ್ರಯಾಣ ಮಾಡಲು ವಿದ್ಯಾರ್ಥಿನಿಯರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆ.ಎಸ್.ಆರ್.ಟಿ.ಸಿ. ಡಿಟಿಓ ಸ್ಥಳಕ್ಕೆ ಬಂದು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪ್ರತಿಭಟನೆ ಮುಂದುವರೆಸಿದ್ದಾರೆ. ಸಿಪಿಐ ಗುರುಪ್ರಸಾದ್ ನೇತೃತ್ವದ ಪೊಲೀಸ್ ತಂಡ ಬಿಗಿ ಪೊಲೀಸ್ ಬಂದೂ ಬಸ್ತ್ ಮಾಡಲಾಗಿದೆ. ಈ ವೇಳೆ ವಿದ್ಯಾರ್ಥಿಗಳಾದ ರವೀಶ್ ಹರೀಶ್ ಪವನ್ ವಿನಯ್ ಶಶಿ, ಕುಶಾಲ್, ಹರ್ಷಿತ್ ಮತ್ತಿತರರು ಇದ್ದರು.