Advertisement

ಕುಣಿಗಲ್: ಕೊಲೆ ಆರೋಪಿಗಳ ಬಂಧನ: ಗ್ರಾಮಸ್ಥರಿಂದ ಪೊಲೀಸರಿಗೆ ಸನ್ಮಾನ

03:26 PM Feb 22, 2023 | Team Udayavani |

ಕುಣಿಗಲ್: ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿದ ಕುಣಿಗಲ್ ಪೊಲೀಸರ ಕಾರ್ಯದಕ್ಷತೆ ಮೆಚ್ಚಿ ಗ್ರಾಮಸ್ಥರು ಪೊಲೀಸರನ್ನು ಸನ್ಮಾನಿಸಿ, ಗೌರವಿಸಿದ ಅಪರೂಪದ ಪ್ರಸಂಗ ಬುಧವಾರ ಪಟ್ಟಣದಲ್ಲಿ ನಡೆಯಿತು.

Advertisement

ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಎಂಬವನನ್ನು ಫೆ 3 ರಂದು ಆತನ ಪತ್ನಿ ಹರ್ಷಿತಾ ತನ್ನ ಸಹಚರರೊಂದಿಗೆ ಸೇರಿ ಬರ್ಬರವಾಗಿ ಹತ್ಯೆಗೈದು ಯಾರಿಗೂ ಅನುಮಾನ ಬರಬಾರದೆಂಬ ಕಾರಣಕ್ಕೆ ಶವ ಹಾಗೂ ಬೈಕ್ ಅನ್ನು ಕೆರೆಯಲ್ಲಿ ಎಸೆದಿದ್ದರು.

ಪ್ರಕರಣ ಬೇಧಿಸಿದ ಕುಣಿಗಲ್ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಹಿನ್ನಲೆ ತಾಲೂಕಿನ ಸೀನಪ್ಪನಹಳ್ಳಿ ಹೊಸಕೆರೆ ಮೊದಲಾದ ಊರಿನ ಗ್ರಾಮಸ್ಥರು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಶಹಪುರ್‌ವಾದ್, ಡಿವೈಎಸ್‌ಪಿ ಲಕ್ಷ್ಮಿಕಾಂತ್, ಸಿಪಿಐಗಳಾದ ಗುರುಪ್ರಸಾದ್, ಅರುಣ್‌ಸಾಲಂಕಿ, ಪಿಎಸ್‌ಐ ಜಮಲ್‌ಅಹಮದ್ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಿದರು.

ಪೊಲೀಸ್ ಸಿಬ್ಬಂದಿ ಹೀರೋ: ಎಸ್ಪಿ ರಾಹುಲ್ ಕುಮಾರ್ ಶಹಪುರ್‌ವಾದ್ ಮಾತನಾಡಿ, ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಪೊಲೀಸ್ ಸಿಬ್ಬಂದಿಗಳ ಪಾತ್ರ ಅತ್ಯಮೂಲ್ಯವಾಗಿದೆ. ಹಾಗಾಗಿ ಇದರ ಶ್ರೇಯಸ್ಸು ಪೊಲೀಸ್ ಸಿಬ್ಬಂದಿಗೆ ಸಲ್ಲಬೇಕು. ಕೊಲೆ ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗಳೇ ಹೀರೋ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಆರೋಪಿಗಳಿಗೆ ಶಿಕ್ಷೆಯಾಗಲು ಸಾಕ್ಷಿ ಮುಖ್ಯ: ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಲಿದ್ದಾರೆ. ಆದರೆ ಆರೋಪಿಗಳಿಗೆ ಶಿಕ್ಷೆಯಾಗಬೇಕಾದರೆ ಸಾಕ್ಷಿಗಳ ಮುಖ್ಯ. ಹಾಗಾಗಿ ಯಾರು ಸಾಕ್ಷಿಗಳಿಗೆ ಸಹಿ ಹಾಕಿದ್ದೀರ ಅವರು ಯಾವುದೇ ಆಸೆ ಆಮಿಷ ಹಾಗೂ ಬೆದರಿಕೆಗೆ ಅಂಜದೇ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಿದರೇ ನೂರಕ್ಕೆ ನೂರರಷ್ಟು ಆರೋಪಿಗಳಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು.

ಇದೇ ವೇಳೆ ಅನಾಥ ಶವಗಳ ಶವ ಸಂಸ್ಕಾರಕ್ಕೆ ಸೇವೆ ಸಲ್ಲಿಸುತ್ತಿರುವ ಅಂಬ್ಯುಲೆನ್ಸ್ ಚಾಲಕರು, ಆಸ್ಪತ್ರೆ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಬಿಳಿಲಿಂಗೇಗೌಡ, ಸ್ವಾಮಿ ಹಾಲುವಾಗಿಲು, ಮಾಜಿ ಸದಸ್ಯ ಬೈರಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ಬೋರೇಗೌಡ ಹಾಗೂ ಇತರ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next