ಕುಣಿಗಲ್: ಸಾಲದ ಬಡ್ಡಿ ಹಣಕ್ಕಾಗಿ, ಅಪಮಾನ ಮಾಡಿದ್ದನ್ನು ಸಹಿಸಲಾರದೇ, ಮನನೊಂದ ಎಲ್‌ಎಲ್‌ಬಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಕೋಡಿ ಹಳ್ಳಿಪಾಳ್ಯ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕೋಡಿಹಳ್ಳಿಪಾಳ್ಯ ಗ್ರಾಮದ ಎಲ್‌ಎಲ್‌ಬಿ ವಿದ್ಯಾರ್ಥಿನಿ ಕೆ.ಜಿ.ಚೈತ್ರಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ಘಟನೆಗೆ ಸಂಬಂಧಿ ಶಾಂತಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಕೋಡಹಳ್ಳಿಪಾಳ್ಯ ಗ್ರಾಮದ ಶಾಂತಮ್ಮ ಎಂಬುವರ ಬಳಿ, ಕೆ.ಜಿ.ಚೈತ್ರಾ ಅವರ ತಾಯಿ ಲಲಿತಮ್ಮ ಅವರು 18 ಸಾವಿರ ರೂಗಳನ್ನು ಸಾಲವಾಗಿ ಪಡೆದಿದ್ದರು, ವಾರಕ್ಕೆ ಶೇ.10ರೂ. ಬಡ್ಡಿಯಂತೆ 1800 ರೂ ಅನ್ನು ಪ್ರತಿ ವಾರ ಪಾವತಿಸುತ್ತಾ ಬರುತ್ತಿದ್ದರು. ಆದರೆ ಈ ವಾರ ಬಡ್ಡಿಯನ್ನು ಪಾವತಿ ಮಾಡಬೇಕಾಗಿತ್ತು ಊರ ಹಬ್ಬ ಇದ್ದ ಕಾರಣ ಬಡ್ಡಿ ಹಣ ಕೊಡಲು ತಡವಾಗಿತ್ತು.
ಬಡ್ಡಿ ಹಣಕ್ಕೆ ಗಲಾಟೆ : ಮಾ.23 ಶನಿವಾರ ಬೆಳಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಶಾಂತಮ್ಮ ನವರು ಲಲಿತಮ್ಮ ಅವರ ಮನೆ ಹತ್ತಿರ ಬಂದು ಏಕಾಏಕಿ ಬಾಯಿಗೆ ಬಂದಂತೆ ಬೈದು, ಬಡ್ಡಿ ಹಣಕ್ಕೆ ಬೀದಿಯಲ್ಲಿ ಕೂಗಾಡಿದಲ್ಲದೆ, ಈ ದಿನವೇ ಹಣ ಕೊಡುವಂತೆ ಒತ್ತಾಯಿಸಿದರು. ಇನ್ನು ಎರಡು ದಿನ ಸಮಯ ಕೊಡಲು ಲಲಿತಮ್ಮ ಅವರು ಕೇಳಿಕೊಂಡಿದ್ದಾರೆ ಅದಕ್ಕೆ ಒಪ್ಪದ ಶಾಂತಮ್ಮ ಕೋಪಗೊಂಡು ಲಲಿತಮ್ಮ ಅವರ ಮನೆಯ ಬಳಿ ನಿಂತುಕೊಂಡು ಅವಾಚ್ಯವಾದ ಶಬ್ದಗಳಿಂದ ನಿಂದಿಸಿ, ನಿನ್ನಿಂದ ದುಡ್ಡು ಕೊಡಲು ಆಗದಿದ್ದರೇ ಏಕೆ ಬದುಕಿದ್ದೀರ ನೇಣು ಹಾಕಿಕೊಂಡು ಸಾಯಿರಿ ಎಂದು ಬೈದರು ಎಂದು ಲಲಿತಮ್ಮ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಪಮಾನ ತಾಳದೆ ನೇಣಿಗೆ ಶರಣು : ಮನೆಯಲ್ಲಿ ಇದ್ದು ಗಲಾಟೆಯನ್ನು ನೋಡಿ ಮನನೊಂದ ಲಲಿತಮ್ಮಳ ಮಗಳು ದ್ವಿತೀಯ ಎಲ್‌ಎಲ್‌ಬಿ ವಿದ್ಯಾರ್ಥಿನಿ ಕೆ.ಜಿ.ಚೈತ್ರಾ ಶಾಂತಮ್ಮಳ ಬೈಗುಳದಿಂದ ಮನನೊಂದು ಅವರ ಮನೆಯ ಮುಂದೆ ಇರುವ ಸ್ನಾನದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಸೀರೆಯಿಂದ ಚಾವಣಿಯ ಕಂಬಿಗೆ ನೇಣು ಹಾಕಿ ಕೊಂಡಿದ್ದಾಳೆ. ಸ್ನಾನದ ಮನೆಗೆ ಹೋದವಳು ಎಷ್ಟು ಹೊತ್ತಾದರೂ ಬರಲಿಲ್ಲ ಎಂದು ಭಯಗೊಂಡ ಚೈತ್ರಾಳ ತಾಯಿ ಲಲಿತಮ್ಮ ಕೂಗಾಡಿದ್ದಾರೆ. ಲಲಿತಮ್ಮಳ ಸಂಬಂಧಿ ಮನೋಜ ಬಾಗಿಲನ್ನು ಹೊಡೆದು ನೋಡುವಾಗ ಚೈತ್ರಾ ನೇಣು ಬಿಗಿದುಕೊಂಡಿದ್ದಳು ಬಳಿಕ ಸೀರೆಯನ್ನು ಚಾಕುವಿನಿಂದ ಕತ್ತರಿಸಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆದರೆ ವೈದ್ಯರು ತಪಾಸಣೆಗೆ ಒಳಪಡಿಸಿದ್ದಾಗ ಚೈತ್ರಾ ಮೃತಪಟ್ಟಿದ್ದಾಳೆ. ಲಲಿತಮ್ಮ ನೀಡಿರುವ ದೂರಿನ ಅನ್ವಯ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.