ಕುಣಿಗಲ್: ಮದುವೆಯಾಗಲು ನಿರಾಕರಿಸಿದ ಮಂಗಳಮುಖಿಗೆ ಭಗ್ನ ಪ್ರೇಮಿಯೋರ್ವ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಕುಣಿಗಲ್ ಪಟ್ಟಣದಲ್ಲಿ ಗ್ರಾಮದೇವತೆ ಸರ್ಕಲ್ ಬಳಿ ಬುಧವಾರ ಸಂಜೆ ನಡೆದಿದೆ.
ಪಟ್ಟಣದ ಕೋಟೆ ಪ್ರದೇಶದ ಮಹಮದ್ ಆಲೀಸಾ ಖಾದ್ರಿ ಅಲಿಯಾಸ್ ಹನೀಶಾ (21) ಚಾಕು ಇರಿತಕ್ಕೆ ಒಳಗಾದ ಪ್ರೇಯಸಿ, ಮಂಡ್ಯ ಮೂಲದ ಆದೀಲ್ (23) ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪ್ರಿಯಕರನಾಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಫೇಸ್‌ಬುಕ್ ಸ್ನೇಹ : ಕಳೆದ ಆರು, ಏಳು ತಿಂಗಳ ಹಿಂದೆ ಹನೀಶಾ ಹಾಗೂ ಆದೀಲ್ ಅವರ ಸ್ನೇಹ ಫೇಸ್ ಬುಕ್‌ನಲ್ಲಿ ಪರಿಚಯವಾದರೂ ಬಳಿಕ ಆದೀಲ್ ಹನೀಶಾ ಅವರ ಮನೆ ಕುಣಿಗಲ್‌ನ ಕೋಟೆಗೆ ಬಂದು ನನಗೆ ತಂದೆ, ತಾಯಿ ಯಾರು ಇಲ್ಲ, ನಾನು ಒಬ್ಬ ಅನಾಥ ಎಂದು ಹೇಳಿಕೊಂಡು ಹನೀಶಾ ಅವರ ಮನೆಯಲ್ಲಿ ಕಳೆದ ನಾಲ್ಕು ಐದು ತಿಂಗಳಿನಿಂದ ವಾಸವಾಗಿದ್ದ, ಮನೆಯ ಕುಟುಂಬ ನಿರ್ವಹಣೆಯನ್ನು ಆತನೇ ಮಾಡುತ್ತಿದ್ದ ಎನ್ನಲಾಗಿದೆ, ಈ ನಡುವೆ ಹನೀಶಾ ಹಾಗೂ ಆದೀಲ್ ಇಬ್ಬರು ಒಬ್ಬರನ್ನೋಬ್ಬರು ಪ್ರೀತಿಸಿ ಮದುವೆಯಾಗಲು ತಿರ್ಮಾನಿಸಿದ್ದರು ಎನ್ನಲಾಗಿದೆ, ಆದರೆ ಕೆಲ ವಿಚಾರವಾಗಿ ಹನೀಶಾ ಹಾಗೂ ಆದೀಲ್ ನಡುವೆ ವೈಮನಸ್ಸು ಉಂಟಾಗಿ ಗಲಾಟೆಯಾಗಿ, ಆದೀಲ್, ಹನೀಶಾಳನ್ನು ಎಲ್ಲೂ ಕೆಲಸಕ್ಕೆ ಹೋಗಬಾರದೆಂದು ತಡೆದಿದ್ದನ್ನು, ಈ ವಿಚಾರಕ್ಕೆ ಹನೀಶಾ ಮೇಲೆ ಆದೀಲ್ ಹಲ್ಲೆ ಸಹ ನಡೆಸಿ ಆತನ ಊರು ಮಂಡ್ಯಗೆ ಹೋಗಿದ್ದ ಎನ್ನಲಾಗಿದೆ,
ಮಾತನಾಡಲು ಕರೆಸಿ ಚಾಕು ಇರಿತ : ಆದೀಲ್ ಬುಧವಾರ ಕುಣಿಗಲ್‌ಗೆ ಬಂದು ದೂರವಾಣಿ ಮೂಲಕ ಹನೀಶಾಳಿಗೆ ಕರೆ ಮಾಡಿ ಮಾತನಾಡೋಣ ಬಾ ಎಂದು ಗ್ರಾಮ ದೇವತೆ ಸರ್ಕಲ್ ಬಳಿ ಹನೀಶಾಳಿಗೆ ಕರೆಸಿಕೊಂಡಿದ್ದಾನೆ, ಈ ವೇಳೆ ಹನೀಶಾ ಬಳಿ ಪೋನ್ ಕೊಡು ಎಂದು ಕೇಳಿದ್ದಾನೆ, ಪೋನ್ ಏಕೆ ಕೊಡಬೇಕು ಎಂದು ಹನೀಶಾ ಹೇಳಿದಾಗ ಕುಪಿತಗೊಂಡ ಆದೀಲ್ ಏಕಾ ಏಕಿ ಚಾಕುವಿನಿಂದ ಹನೀಶಾಳ ಹೊಟ್ಟೆಗೆ ಇರಿದಿದ್ದಾನೆ ಈ ವೇಳೆ ಆಕೆ ಕಿರುಚಿದ್ದಾಳೆ ಇದರಿಂದ ಗಾಬರಿಗೊಂಡ ಆದೀಲ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ ಆತನನ್ನು ಹಿಂಬಾಲಿಸಿದ ಪುರಸಭಾ ಸದಸ್ಯ ರಂಗಸ್ವಾಮಿ ಮತ್ತು ಅವರ ಸ್ನೇಹಿತರು ಆರೋಪಿಯನ್ನು ದೊಡ್ಡಪೇಟೆ ರಸ್ತೆ ಬಳಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ,
ಗಾಯಗೊಂಡ ಪುರಸಭಾ ಸದಸ್ಯ : ಚಾಕುವಿನಿಂದ ಚುಚ್ಚಿ ಪರಾರಿಯಾಗಿತ್ತಿದ್ದ ಆರೋಪಿಯನ್ನು ಬೆನ್ನಟ್ಟಿ ಹಿಡಿಯಲು ಓಡಿದ ಪುರಸಭಾ ಸದಸ್ಯ ರಂಗಸ್ವಾಮಿ ನೆಲಕ್ಕೆ ಬಿದ್ದು ಕೈ, ಕಾಲಿಗೆ ಗಾಯವಾಗಿದೆ ಆದರೂ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಹನೀಶಾಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ, ಸಿಪಿಐ ನವೀನ್‌ಗೌಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.