ಕುಣಿಗಲ್: ಬಾರ್ ಕ್ಯಾಶಿಯರ್‌ನ ಗಮನ ಬೇರೆಡೆಗೆ ಸೆಳೆದು ಲಕ್ಷಾಂತ ರೂ. ನಗದು ಹಣ ಕಳವು ಮಾಡಿ ಹೋಗಿರುವ ಘಟನೆ ಜೂ.25ರ ಮಂಗಳವಾರ ಹಾಡುಹಗಲೇ ಪಟ್ಟಣ ಕೆಆರ್‌ಎಸ್ ಅಗ್ರಹಾರದ ಎಸ್‌ಬಿಐ ಬ್ಯಾಂಕ್ ಮುಂಭಾಗ ನಡೆದಿದೆ.
ಪಟ್ಟಣದ ಜೆ.ಕೆ.ಬಾರ್ ಸಹಾಯಕ ಕ್ಯಾಶಿಯರ್ ವೆಂಕಟೇಶ್ ದುಷ್ಕರ್ಮಿಗಳ ಮೋಸಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ.
ಘಟನೆ ವಿವರ: ಮಂಗಳವಾರ ಬಾರ್ ಸಹಾಯಕ ಕ್ಯಾಶಿಯರ್ ವೆಂಕಟೇಶ್ ಎಸ್‌ಬಿಐ ಬ್ಯಾಂಕ್‌ಗೆ 5 ಲಕ್ಷ ರೂ. ಹಣ ಕಟ್ಟಲೆಂದು ಹಣವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟು ಬೈಕ್‌ನಲ್ಲಿ ಇಲ್ಲಿನ ಕೆ.ಆರ್.ಎಸ್ ಅಗ್ರಹಾರದ ಎಸ್‌ಬಿಐ ಬ್ಯಾಂಕ್‌ಗೆ ಬಂದರು. ಬೈಕ್ ಬ್ಯಾಂಕ್ ಮುಂಭಾಗ ನಿಲ್ಲಿಸಿ 1.70 ಲಕ್ಷ ರೂ.ಗಳನ್ನು ಬ್ಯಾಂಕ್‌ನಲ್ಲಿ ಕಟ್ಟಿ, ಉಳಿದ 3.30 ಲಕ್ಷ ರೂ. ಗಳನ್ನು ಪಟ್ಟಣದ ಪುರಸಭೆ ಬಳಿಯಿರುವ ಎಸ್‌ಬಿಐ ಬ್ಯಾಂಕ್‌ಗೆ ಕಟ್ಟಲೆಂದು, ಹಣದ ಕವರ್ ಹಿಡಿದುಕೊಂಡು ಬೈಕ್ ಹತ್ತಿ ಕುಳಿತುಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ2 ಬೈಕ್‌ನಲ್ಲಿ ಬಂದ ನಾಲ್ವರು ಅವರ ಜೇಬಿನಿಂದ 50 ರೂ.ಗಳ 10 ನೋಟುಗಳನ್ನು ವೆಂಕಟೇಶ್ ಕುಳಿತಿದ್ದ ಬೈಕ್ ಬಳಿ ಎಸೆದಿದ್ದಾರೆ.
ಬಳಿಕ ನಿಮ್ಮ ಹಣ ಬಿದ್ದಿದೆ ಎಂದು ವೆಂಕಟೇಶ್‌ಗೆ ಹೇಳಿ, ವೆಂಕಟೇಶ್ ಗಮನವನ್ನು ಬೇರೆಡೆಗೆ ಸೆಳೆದರು. ಆ ಸಂದರ್ಭದಲ್ಲಿ ವೆಂಕಟೇಶ್ ಬೈಕ್ ಬಳಿ ಬಿದ್ದಿದ ಹಣ ಹೆಕ್ಕಿಕೊಳ್ಳಲು ಅವರ ಬಳಿಯಿದ್ದ 3.30 ಲಕ್ಷ ರೂ.ಗಳ ಹಣದ ಕವರನ್ನು ಬೈಕ್ ಮೇಲೆ ಇಟ್ಟು ನೆಲಕ್ಕೆ ಬಗ್ಗಿ ಎತ್ತುಕೊಳ್ಳಲು ಮುಂದಾಗಿದ್ದರು.
ಈ ವೇಳೆ ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಹಣವನ್ನು ಕಳ್ಳರು ಕ್ಷಣಾರ್ಥದಲ್ಲಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಬೈಕ್ ಮೇಲೆ ಇಟ್ಟಿದ್ದ ಹಣದ ಕವರ್ ಇಲ್ಲದನ್ನು ನೋಡಿ ಗಾಬರಿಗೊಂಡ ವೆಂಕಟೇಶ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸಿಪಿಐ ನವೀನ್‌ಗೌಡ, ಪಿಎಸ್‌ಐ ಕೃಷ್ಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.