ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಆಲ್ಬಂ ಆಡಿಯೋ, ವೀಡಿಯೋಗಳು ಬಂದಿವೆ. ಬಹುತೇಕ ಆಲ್ಬಂಗಳಲ್ಲಿ ರಾಕ್ ಮತ್ತು ಲವ್ ಸಾಂಗ್‌ಗಳೇ ಹೆಚ್ಚಾಗಿವೆ. ಈಗ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಖಳನಟರಿಗಾಗಿ ಆಲ್ಬಂ ವೀಡಿಯೋ ಮಾಡಲಾಗಿದೆ. ಹೌದು, ಹೊಸ ಹುಡುಗರೆಲ್ಲಾ ಸೇರಿಕೊಂಡು “ಬ್ಯಾಡ್ ಬಾಯ್’ ಹೆಸರಿನ ವೀಡಿಯೋ ಆಲ್ಬಂ ಮಾಡಿದ್ದಾರೆ. ಇತ್ತೀಚೆಗೆ ಆ ಆಲ್ಬಂ ವೀಡಿಯೋವನ್ನು ನಿರ್ಮಾಪಕ ಕೆ.ಮಂಜು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಕನ್ನಡದ ಖಳನಟರಾದ ತೂಗುದೀಪ ಶ್ರೀನಿವಾಸ್, ಸುಧೀರ್, ಲೋಕೇಶ್, ಸುಂದರ್‌ಕೃಷ್ಣ ಅರಸ್ ಸೇರಿದಂತೆ ಬಹುತೇಕ ಖಳನಟರಿಗೆ “ಬ್ಯಾಡ್ ಬಾಯ್’ ಆಲ್ಬಂ ಅರ್ಪಣೆ ಮಾಡಿರುವ ಉತ್ಸಾಹಿ ಹುಡುಗರು, ಯಾವುದೇ ಕಮರ್ಷಿಯಲ್ ಸಿನಿಮಾಗೆ ಕಮ್ಮಿ ಇಲ್ಲದಂತೆ ಆಲ್ಬಂ ಸಾಂಗ್ ಚಿತ್ರೀಕರಿಸುವ ಮೂಲಕ ತಮ್ಮೊಳಗಿನ ಪ್ರತಿಭೆ ಹೊರಹಾಕಿದ್ದಾರೆ. ಅಂದಹಾಗೆ, ಅಶ್ವಿನ್‌ರಾವ್ “ಬ್ಯಾಡ್ ಬಾಯ್’ ಆಲ್ಬಂನ ಹೀರೋ. ಅವರಿಗೆ ಈ ಆಲ್ಬಂ ಮಾಡುವ ಯಾವುದೇ ಯೋಚನೆ ಇರಲಿಲ್ಲವಂತೆ. ಸುಮ್ಮನೆ ಗಡ್ಡ, ಕೂದಲು ಬಿಟ್ಟು ಓಡಾಡಿಕೊಂಡಿದ್ದರಂತೆ. ಸ್ನೇಹಿತರೆಲ್ಲಾ ಸೇರಿ, “ಬ್ಯಾಡ್ ಬಾಯ್’ ಆಲ್ಬಂನ ಯೋಚನೆ ಮಾಡಿದರಂತೆ. ಆಗ ಒಬ್ಬೊಬ್ಬರೇ ತಂತ್ರಜ್ಞರು ಇವರೊಟ್ಟಿಗೆ ಸಾಥ್ ಕೊಟ್ಟಿದ್ದಾರೆ.
ನಿರ್ದೇಶಕ ವಸಿಷ್ಠ ಪ್ರಭು, ಮಹಿ, ಕ್ಯಾಮೆರಾಮೆನ್ ಪ್ರಸನ್ನ, ಸಂಗೀತ ನಿರ್ದೇಶಕ ಸಿದ್ಧಾರ್ಥ್, ವಿಷ್ಣು, ವೇಲು ಹೀಗೆ ಒಂದಷ್ಟು ಹುಡುಗರೆಲ್ಲಾ ಸೇರಿಕೊಂಡು “ಬ್ಯಾಡ್ ಬಾಯ್’ ಆಲ್ಬಂ ಮಾಡಿದ್ದಾರೆ.
ಇಂಥದ್ದೊಂದು ಐಡಿಯಾ ಬಂದಿದ್ದೇ ತಡ, ಅಶ್ವಿನ್‌ರಾವ್, ಗೆಳೆಯರ ಬಳಿ ಹೇಳಿಕೊಂಡರಂತೆ. ಆಗ ಎಲ್ಲರೂ ಚರ್ಚೆ ಮಾಡಿ, ಖಳನಟರಿಗಾಗಿಯೇ ಒಂದು ಆಲ್ಬಂ ಮಾಡೋಣ ಅಂತ ನಿರ್ಧರಿಸಿ, “ಬ್ಯಾಡ್ ಬಾಯ್’ ಆಲ್ಬಂ ಮುಗಿಸಿದ್ದಾರೆ. ಈ ಕುರಿತು ಮಾತನಾಡುವ ನಿರ್ದೇಶಕ ಪ್ರಭು, “ಕನ್ನಡದಲ್ಲಿ ಹಲವು ಆಲ್ಬಂಗಳಿವೆ. ಆದರೆ, ನಾವು ಹೊಸದನ್ನು ಮಾಡಬೇಕು ಅಂತ ಹೊರಟಾಗ ಸಿಕ್ಕಿದ್ದೇ ಈ ಬ್ಯಾಡ್ ಬಾಯ್ ಕಾನ್ಸೆಪ್ಟ್. ಇದು ಖಳನಟರಿಗೆ ಅರ್ಪಿಸುತ್ತಿದ್ದೇವೆ. ಇನ್ನು, ಕೇವಲ ಮೂರು ದಿನಗಳಲ್ಲಿ ಆಲ್ಬಂ ಚಿತ್ರೀಕರಿಸಲಾಗಿದೆ. ವಿಶೇಷವಾಗಿ, ಸಂಗೀತ ನಿರ್ದೇಶಕ, ಕ್ಯಾಮೆರಾಮೆನ್ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ’ ಎನ್ನುತ್ತಾರೆ ಅವರು.
ಅಂದು ನಿರ್ಮಾಪಕ ಕೆ.ಮಂಜು ಹೊಸ ಹುಡುಗರು ಹೊರತಂದ “ಬ್ಯಾಡ್ ಬಾಯ್’ ಆಲ್ಬಂ ಬಿಡುಗಡೆ ಮಾಡಿದರು. “ಅಶ್ವಿನ್‌ರಾವ್ ವೇರಿ ಗುಡ್ ಬಾಯ್. ಆದರೆ, “ಬ್ಯಾಡ್ ಬಾಯ್’ ಎಂಬ ಆಲ್ಬಂನಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರಷ್ಟೇ. ಹಿಂದಿ, ಇಂಗ್ಲೀಷ್‌ನಲ್ಲಿ ಆಲ್ಬಂ ಸಾಂಗ್ ಟ್ರೆಂಡ್ ಇತ್ತು. ಮೆಲ್ಲನೆ ಕನ್ನಡಕ್ಕೂ ಬಂತು. ಈಗ ವಿಲನ್‌ಗಳಿಗಾಗಿಯೇ “ಬ್ಯಾಡ್‌ಬಾಯ್’ ಎಂಬ ಆಲ್ಬಂ ಹೊರತಂದಿರುವುದು ಹುಡುಗರಲ್ಲಿರುವ ಕಲಾಪ್ರೀತಿ ತೋರಿಸುತ್ತದೆ. ಇದನ್ನು ಯೂಟ್ಯೂಬ್‌ಗ ಅಪ್‌ಲೋಡ್ ಮಾಡಿ, ಅದರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕು, ಹಣವೂ ಬರಲಿ’ ಎಂದರು ಮಂಜು.
ಅಂದು ಕ್ಯಾಮೆರಾಮೆನ್ ಪ್ರಸನ್ನ, ಸಂಗೀತ ನಿರ್ದೇಶಕ ಸಿದ್ಧಾರ್ಥ್, ಮಹಿ, ಮಂಜೇಶ್, ಅಲೋಕ್, ಪ್ರಸನ್ನ, ವಿಷ್ಣು ಎಲ್ಲರೂ ಮಾತಾಡಿದರು. ಅಂದಹಾಗೆ, ಈ “ಬ್ಯಾಡ್‌ಬಾಯ್’ ಆಲ್ಬಂ ಲಹರಿ ಆಡಿಯೋ ಸಂಸ್ಥೆ ಮೂಲಕ ಹೊರಬಂದಿದೆ.