Advertisement

ಐಸಿಸಿ ಕಿವುಡರ ಟಿ20 ಟ್ರೋಫಿ: ಭಾರತ ತಂಡದಲ್ಲಿ ಕುಂದಾಪುರದ ಪೃಥ್ವಿರಾಜ್‌ ಶೆಟ್ಟಿ

10:29 PM Sep 29, 2022 | Team Udayavani |

ಕುಂದಾಪುರ: ಮುಂದಿನ ವರ್ಷದ ಅಂತಾರಾಷ್ಟ್ರೀಯ ಕಿವುಡರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಪೂರ್ವಭಾವಿಯಾಗಿ ಯುಎಇಯಲ್ಲಿ ಅ. 2ರಿಂದ ಐಸಿಸಿ ಕಿವುಡರ ಚಾಂಪಿಯನ್ಸ್‌ ಟ್ರೋಫಿ-2022 ಟಿ20 ಪಂದ್ಯಾವಳಿ ನಡೆಯಲಿದೆ. ಭಾರತ ತಂಡದಲ್ಲಿ ಕುಂದಾಪುರ ಮೂಲದ ಪೃಥ್ವಿರಾಜ್‌ ಶೆಟ್ಟಿ ಹುಂಚನಿ ಸ್ಥಾನ ಪಡೆದಿದ್ದು, ಆಡುವ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

Advertisement

ಈ ಮೊದಲು ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ವಿಶ್ವಕಪ್‌ ನಿಗದಿಪಡಿಸಲಾಗಿದ್ದು, ಆದರೆ ಈಗ ಅದನ್ನು 2023ರ ಮಾರ್ಚ್‌-ಮೇಗೆ ಮುಂದೂಡಲಾಗಿದೆ. ಕತಾರ್‌ ಅಥವಾ ಆಸ್ಟ್ರೇಲಿಯದಲ್ಲಿ ಕಿವುಡರ ಐಸಿಸಿ ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ. ಇದಕ್ಕೂ ಮುಂಚಿತವಾಗಿ ಅ. ಒಂದರಿಂದ ಅ. 9ರ ವರೆಗೆ ಚಾಂಪಿಯನ್ಸ್‌ ಟ್ರೋಫಿ ನಡೆಯುತ್ತಿದ್ದು, ಕುತೂಹಲ ಮೂಡಿಸಿದೆ. ಅ. 2ರಂದು ಭಾರತ-ಪಾಕಿಸ್ಥಾನ ಎದುರಾಗಲಿವೆ. ಬಳಿಕ ದಕ್ಷಿಣ ಆಫ್ರಿಕಾ (ಅ. 4), ಬಾಂಗ್ಲಾದೇಶ (ಅ. 5) ಹಾಗೂ ಆಸ್ಟ್ರೇಲಿಯವನ್ನು (ಅ. 7) ಎದುರಿಸಲಿದೆ.

ಭಾರತ ತಂಡಕ್ಕೆ ಆಯ್ಕೆಯಾಗಿರುವ 31 ವರ್ಷದ ಪೃಥ್ವಿರಾಜ್‌ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಗೋಳಿಹೊಳೆ ಗ್ರಾಮದ ಹುಂಚನಿಯ ದಿ| ಸುಭಾಶ್ಚಂದ್ರ ಶೆಟ್ಟಿ ಹಾಗೂ ಶೀಲಾವತಿ ದಂಪತಿಯ ಪುತ್ರ. ತಂಡದ ಪ್ರಧಾನ ವೇಗಿಯಾಗಿರುವ ಇವರು, ಕೆಳ ಕ್ರಮಾಂಕದ ಬ್ಯಾಟರ್‌ ಆಗಿಯೂ ಮಿಂಚಬಲ್ಲರು.

ಏಕೈಕ ಕನ್ನಡಿಗ
ಹೊಸದಿಲ್ಲಿಯಲ್ಲಿ ಒಂದು ತಿಂಗಳ ಕಾಲ ತರಬೇತಿ ಮುಗಿಸಿದ ಭಾರತ ತಂಡ ಟ್ರೋಫಿ ಗೆಲ್ಲುವ ವಿಶ್ವಾಸದೊಂದಿಗೆ ಯುಎಇಗೆ ಪ್ರಯಾಣ ಬೆಳೆಸಿದೆ. ಪೃಥ್ವಿರಾಜ್‌ ಈ 15 ಮಂದಿಯ ತಂಡದ ಏಕೈಕ ಕನ್ನಡಿಗರಾಗಿದ್ದಾರೆ.

ವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿದ ಧೀರ
ಪೃಥ್ವಿರಾಜ್‌ ಹುಟ್ಟು ಕಿವುಡರಾಗಿದ್ದರೂ ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕು ಎನ್ನುವ ಕನಸಿಗೆ ಈ ವೈಕಲ್ಯ ಅಡ್ಡಿಯಾಗಲಿಲ್ಲ. ಈ ವೈಕಲ್ಯವನ್ನೇ ಮೆಟ್ಟಿನಿಂತು ಇಂದು ದೇಶದ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವುದು ಅಸಾಮಾನ್ಯ ಸಾಧನೆಯೇ ಆಗಿದೆ.

Advertisement

ಇವರು ಅಂಪಾರು ಮೂಡುಬಗೆಯ ವಾಗ್ಜ್ಯೋತಿ ವಿಶೇಷ ಮಕ್ಕಳ ಶಾಲೆಯ ಹಳೆ ವಿದ್ಯಾರ್ಥಿ. ವಿಶೇಷ ಕ್ರಿಕೆಟ್‌ ಟೂರ್ನಿಗಳಲ್ಲಿ ಮಾತ್ರವಲ್ಲದೆ ಎಲ್ಲರಂತೆ ಎಂಪಿಲ್‌ನಲ್ಲಿ ಐಕಾನ್‌ ಆಟಗಾರನಾಗಿ, ಕುಂದಾಪುರದ ಟಾರ್ಪಡೋಸ್‌ ತಂಡದ ಆಟಗಾರನಾಗಿಯೂ ಮಿಂಚಿದ್ದಾರೆ. ಚಕ್ರವರ್ತಿ ತಂಡದ ಅರೆಕಾಲಿಕ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಮೂಗರ ಕ್ರಿಕೆಟ್‌ ತಂಡದ ಆಟಗಾರನಾಗಿ, ಕರ್ನಾಟಕ ತಂಡದ ನಾಯಕನಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next