Advertisement

ಕುಂದಾಪುರದ ನಿಖೀಲ್‌ಗೆ ಅಮೆರಿಕ ಕ್ರಿಕೆಟ್‌ ತಂಡದಲ್ಲಿ ಆಡುವ ಕನಸು

11:18 AM Dec 22, 2018 | Team Udayavani |

ಕುಂದಾಪುರ: ವಿಶ್ವ ಕ್ರಿಕೆಟ್‌ ಅಂಗಳದಲ್ಲಿ ಅಮೆರಿಕ ನಿಧಾನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ. ಅಲ್ಲಿನ ರಾಷ್ಟ್ರೀಯ ತಂಡದಲ್ಲಿ ಆಡುವ ಕನಸು ಕುಂದಾಪುರ ತಾಲೂಕಿನ ಕೋಟ ಪಡುಕರೆಯ ನಿಖೀಲ್‌ ಕಾಂಚನ್‌ ಅವರದು!
ನಿಖೀಲ್‌ ಕೋಟ ಪಡುಕರೆಯ ಕೃಷ್ಣ ಕಾಂಚನ್‌-ಶಾಂತಾ ಕಾಂಚನ್‌ ದಂಪತಿ ಪುತ್ರ. ವೃತ್ತಿಯಲ್ಲಿ ಅಮೆರಿಕದ ಪ್ರಸಿದ್ಧ ಫೋರ್ಡ್‌ ಕಂಪೆನಿಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರ್‌ ಆಗಿರುವ ಅವರು, ಪ್ರವೃತ್ತಿಯಲ್ಲಿ ಕ್ರಿಕೆಟಿಗನಾಗಿಯೂ ಹೆಸರು ಗಳಿಸಿದ್ದಾರೆ. 

Advertisement

ಚಿಕ್ಕಂದಿನಿಂದಲೇ ಕ್ರಿಕೆಟ್‌ ಪ್ರೀತಿ ಬೆಳೆಸಿಕೊಂಡ ನಿಖೀಲ್‌, ಹುಟ್ಟೂರಲ್ಲಿ “ವಾಹಿನಿ’ ಯುವಕ ಮಂಡಲದ ತಂಡದಲ್ಲಿದ್ದಾಗಲೇ ಮಾವಂದಿರಾದ ಪ್ರಭಾಕರ ಕುಂದರ್‌, ರಾಜೇಂದ್ರ ಸುವರ್ಣ, ಸತೀಶ್‌ ಕುಂದರ್‌ ಹಾಗೂ ರಮೇಶ್‌ ಕುಂದರ್‌ ಅವರಿಂದ ಪ್ರಭಾವಿತರಾಗಿದ್ದರು. ಚಕ್ರವರ್ತಿ ತಂಡದ ಪ್ರದೀಪ್‌ ವಾಜ್‌ ಮೊದಲ ಕೋಚ್‌ ಆಗಿದ್ದರು.

ನಿಖೀಲ್‌ ಸಾಧನೆಗಳು
2014ರಲ್ಲಿ ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆದ ಇಂಡೋರ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ನಿಖೀಲ್‌ ಅವರದು. ಈ ವರ್ಷ ಅಮೆರಿಕದಲ್ಲಿ ನಡೆದ ಐಪಿಎಲ್‌ ಮಾದರಿಯ ಪಂದ್ಯವೊಂದರಲ್ಲಿ ಆಂಡ್ರೆ ರಸೆಲ್‌ ನಾಯಕತ್ವದ ತಂಡದ ವಿರುದ್ಧ ಉತ್ತಮ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದರು. ಸತತ 3 ವರ್ಷ ಯುನಿವರ್ಸಿಟಿ ಆಫ್‌ ಮಿಚಿಗನ್‌ ಚಾಂಪಿಯನ್‌ಶಿಪ್‌ ಗೆಲ್ಲುವಲ್ಲಿ ನಾಯಕ ನಿಖೀಲ್‌ ಪಾತ್ರ ಮಹತ್ವದ್ದಾಗಿದೆ. 

2 ಗಂಟೆ ನೆಟ್‌ ಪ್ರಾಕ್ಟೀಸ್‌
ಬಲಗೈ ಬ್ಯಾಟ್ಸ್‌ಮನ್‌ ನಿಖೀಲ್‌ ಅಮೆರಿಕದ ಹಲವು ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಈಗಾಗಲೇ ಬ್ಯಾಟಿಂಗ್‌ ಮೂಲಕ ಮಿಂಚು ಹರಿಸಿದ್ದಾರೆ. ಮುಂದಿನ ವರ್ಷದಿಂದ ರಾಷ್ಟ್ರೀಯ ತಂಡದಲ್ಲಿ ಆಡುವ ಅರ್ಹತೆ ಸಿಗಲಿದೆ. ಕೆಲಸದ ಮಧ್ಯೆಯೂ ದಿನಕ್ಕೆರಡು ಗಂಟೆ ನೆಟ್‌ ಪ್ರ್ಯಾಕ್ಟೀಸ್‌ ಮಾಡುತ್ತಿದ್ದೇನೆ ಎಂದು ನಿಖೀಲ್‌ ಅಮೆರಿಕದಿಂದ “ಉದಯವಾಣಿ’ಗೆ ತಿಳಿಸಿದರು.  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಬ್ರಹ್ಮಾವರದ ಲಿಟ್ಲರಾಕ್‌ ಇಂಡಿಯನ್‌ ಸ್ಕೂಲ್‌, ಪಿಯು ಕೋಟದ ವಿವೇಕ ಕಾಲೇಜು, ಇಂಜಿನಿಯರಿಂಗ್‌ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಮುಗಿಸಿ, ಸ್ನಾತಕೋತ್ತರ ಪದವಿಯನ್ನು ಅಮೆರಿಕದ ಮಿಚಿಗನ್‌ ವಿವಿಯಲ್ಲಿ ಪೂರೈಸಿದ್ದಾರೆ.

ಕೊಹ್ಲಿ ನೆಚ್ಚಿನ ಆಟಗಾರ
ನಿಖೀಲ್‌ಗೆ ಭಾರತೀಯ ತಂಡದ ಕಪ್ತಾನ ವಿರಾಟ್‌ ಕೊಹ್ಲಿಯೆಂದರೆ ಅಚ್ಚು ಮೆಚ್ಚು. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ಅಭ್ಯಾಸದ ವೇಳೆ ಕೊಹ್ಲಿ ಸಹಿತ ಎಲ್ಲ ಆಟಗಾರರಿಗೆ ಬೌಲಿಂಗ್‌ ಮಾಡಿದ್ದಾಗಿ ನೆನಪಿಸಿಕೊಳ್ಳುತ್ತಾರೆ ನಿಖೀಲ್‌. 

Advertisement
Advertisement

Udayavani is now on Telegram. Click here to join our channel and stay updated with the latest news.

Next