ಕುಂದಾಪುರ: ಪಟ್ಟಾ ಜಮೀನಿನಲ್ಲಿ ಜಾಗ ಬಿಡಬೇಕೆಂದು ಒತ್ತಡ ಹೇರಿ ಪ್ರಾಣ ಬೆದರಿಕೆ ಹಾಕಿದ್ದಲ್ಲದೇ ಜಾಗ ಬಿಡದ್ದಕ್ಕೆ ಪೊಲೀಸರ ಮೂಲಕ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಆಜ್ರಿ ಗ್ರಾಮದ ಭಾರತಿ ಬಾಯರಿ (62) ಅವರು ಜಿಲ್ಲಾ ಎಸ್‌ಪಿ, ರಾಜ್ಯ ಎಡಿಜಿಪಿ, ಗೃಹಸಚಿವರಿಗೆ ದೂರು ನೀಡಿದ್ದಾರೆ.
ಪಟ್ಟಾ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ಪ್ರಶಾಂತ್ ಶೆಟ್ಟಿ, ಸೂರ್ಯ ಪ್ರಕಾಶ್ ಶೆಟ್ಟಿ, ಚಂದ್ರ ಶೆಟ್ಟಿ, ಭಾಸ್ಕರ ಶೆಟ್ಟಿ ಅವರು ಕಲ್ಲುಗಳನ್ನು ಕಳವು ಮಾಡುತ್ತಿರುವಾಗ ಆಕ್ಷೇಪಿಸಿದ್ದಕ್ಕೆ 15 ಸೆಂಟ್ಸ್‌ನಷ್ಟು ಜಾಗ ಇದರಲ್ಲಿ ಬಿಟ್ಟುಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.
ಶಂಕರನಾರಾಯಣ ಠಾಣೆಗೆ ದೂರು ನೀಡಿದಾಗ ನಾಳೆ ಬನ್ನಿ ಎಂದು ಅರ್ಜಿ ತೆಗೆದಿಟ್ಟರು. ಮರುದಿನ ಎಫ್‌ಐಆರ್ ಮಾಡಿ, ಎದುರುವಾದಿಗಳ ಎದುರು ಅರ್ಜಿದಾರರಿಗೆ ನಿಂದಿಸಿದ ಎಸ್‌ಐ ಪಟ್ಟಾ ಸ್ಥಳದಲ್ಲಿ ಜಾಗ ನೀಡಲು ಒತ್ತಡ ಹಾಕಿ ಕೇಸು ದಾಖಲಿಸುವುದಾಗಿ ಬೆದರಿಸಿದ್ದಾರೆ.
ಕೇಳಿದಷ್ಟು ಜಾಗ ನೀಡಲು ಒಪ್ಪದ ಮೇಲೆ ಕೇಸು ದಾಖಲಿಸಲಾಗಿದ್ದು ಈ ಬಗ್ಗೆ ಠಾಣೆಯ ಸಿಸಿಟಿವಿ ಪರಿಶೀಲಿಸಬಹುದು. ಬಳಿಕ ತಹಶೀಲ್ದಾರ್ ಆದೇಶದಂತೆ ದಾರಿ ನೀಡಲಾಗಿದ್ದು ಅನಂತರವೂ ಎದುರುವಾದಿಗಳ ಅಕ್ರಮ ಪ್ರವೇಶ ಮುಂದುವರಿದಿದೆ.
ಬೆದರಿಕೆಯೂ ಮುಂದುವರಿದಿದ್ದು ಕೇಸು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ. ಆದ್ದರಿಂದ ಹಿರಿಯ ನಾಗರಿಕಳಾದ ನನಗೆ ರಕ್ಷಣೆ ಬೇಕೆಂದು ಅವರು ಮೊರೆ ಇಟ್ಟಿದ್ದಾರೆ.