Advertisement

ಕುಂದಾಪುರ: ಮನೆ ಕೆಲಸ ಪೂರ್ಣಗೊಳಿಸಲು ಪಕ್ಕದ ಮನೆಯ ಚಿನ್ನ ಕದ್ದ! ; ಆರೋಪಿ ಅರೆಸ್ಟ್

06:25 PM Aug 11, 2022 | Team Udayavani |

ಕುಂದಾಪುರ: ಮನೆ ಹಿಂಬಾಗಿಲು ಒಡೆದು ಚಿನ್ನಾಭರಣ ಹಾಗೂ ನಗದು ಕಳವುಗೈದ  ಆರೋಪಿಯನ್ನು  ಕುಂದಾಪುರ ನಗರ ಠಾಣೆ ಪೊಲೀಸರು ಆ.10 ರಂದು ಗೋಪಾಡಿ ಸಮೀಪ ಬಂಧಿಸಿದ್ದಾರೆ.

Advertisement

ಮೂಲತಃ ಮರವಂತೆಯ, ಪ್ರಸ್ತುತ ಕುಂಭಾಶಿ ವಿನಾಯಕ ನಗರಲ್ಲಿರುವ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ. ಈತನಿಂದ 8 ಗ್ರಾಂನ ಚಿನ್ನದ ಬ್ರಾಸ್ಲೆಟ್‌, 12 ಗ್ರಾಂನ  ಪೆಂಡೆಂಟ್‌ ಸಹಿತ  ಚೈನ್‌, 4 ಗ್ರಾಂ, 3 ಗ್ರಾಂ ತೂಕದ ಚಿನ್ನದ ಉಂಗುರ,  1,610 ರೂ. ನಗದನ್ನು  ವಶಪಡಿಕೊಂಡಿದ್ದಾರೆ.

ಘಟನೆ ಹಿನ್ನೆಲೆ:

ಕುಂಭಾಶಿಯ ವಿನಾಯಕ ನಗರದ ಮಂಜುನಾಥ ಜೋಗಿ ಜು. 29 ರಂದು ಕುಟುಂಬ ಸಮೇತ ಫ‌ಂಡರಾಪುರ ಮತ್ತು ಶಿರ್ಡಿ ದೇವಸ್ಥಾನಕ್ಕೆ ತೀರ್ಥಯಾತ್ರೆ ತೆರಳಿದ್ದು  ಆ.5 ರಂದು ಮನೆಗೆ ಮರಳಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯ ಹಿಂಬದಿಯ ಬಾಗಿಲು ಹಾಗೂ ಅಡುಗೆ ಮನೆಯ ಬಾಗಿಲನ್ನು ಒಡೆದು ಮನೆಯ ಕಪಾಟಿನಲ್ಲಿರಿಸಿದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟಿನಲ್ಲಿದ್ದ 1.20 ಲಕ್ಷ ರೂ. ಮೌಲ್ಯದ ಒಟ್ಟು  27 ಗ್ರಾಂ ಚಿನ್ನಾಭರಣಗಳು ಮತ್ತು 13,500 ರೂ. ನಗದನ್ನು ಕಳವು ಮಾಡಲಾಗಿತ್ತು.

ಇದನ್ನೂ ಓದಿ: ಕೊರ್ಗಿ: ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ-ಸುಲಿಗೆ; ಸಿಸಿ ಟಿವಿ ದೃಶ್ಯ ಆಧರಿಸಿ ಓರ್ವ ಬಂಧನ

Advertisement

ದಿಕ್ಕು ತಪ್ಪಿಸಲು ನೆರೆಮನೆ ಯವಕನ ಚಪ್ಪಲಿ ಕಳ್ಳತನ:

ಕಳ್ಳತನ ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಆರಂಭದಲ್ಲಿ ಸ್ಥಳೀಯರೇ ಈ ಕೃತ್ಯ ನಡೆಸಿರುವುದು ದೃಢಪಟ್ಟಿತು. ಆದರೆ, ಪೊಲೀಸರ ದಿಕ್ಕು ತಪ್ಪಿಸಲು ಆರೋಪಿ ನೆರೆಮನೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಯುವಕನೋರ್ವನ ಚಪ್ಪಲಿಯನ್ನು ಕಳ್ಳತನ ನಡೆಸಿದ ಬಳಿಕ ಅಡುಗೆ ಮನೆಯಲ್ಲಿ ಇಟ್ಟು ಆ ಯುವಕನ ಮೇಲೆ ಸಂಶಯ ಬರುವಂತೆ ಮಾಡಿದ್ದ. ಚಪ್ಪಲಿ ಕಳ್ಳತನವಾದುದನ್ನು  ನೆರೆಮನೆಯ ಯುವಕ ಪೊಲೀಸರಲ್ಲಿ ಹೇಳಿದ ಬಳಿಕ ತನಿಖೆಯಲ್ಲಿ  ಆರೋಪಿ ಸೆರೆಯಾಗಿದ್ದಾನೆ.

ಸುಳಿವು:

ಸುಭಾಶ್ಚಂದ್ರ ಆಚಾರ್ಯ ಮನೆ ಕಟ್ಟುತ್ತಿದ್ದು ಹಣಕ್ಕಾಗಿ ಸಮೀಪದ ಮನೆಯಲ್ಲೇ ಕಳ್ಳತನ ನಡೆಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿದ್ದ ಈತ ಕಳವಿನ ಬಳಿಕ ಕೆಲಸಕ್ಕೆ ಹೋಗಿರಲಿಲ್ಲ. ಈತನ ಬ್ಯಾಂಕ್‌ ಖಾತೆಗೆ 20 ಸಾವಿರ ರೂ. ವರ್ಗಾವಣೆಯಾಗಿತ್ತು. ಪೊಲೀಸರಿಗೆ ಈತನ ಮೇಲೆ ಸಂಶಯ ಮೂಡಿ, ತಾಂತ್ರಿಕ ಸಹಾಯದ ಮೂಲಕ ನಿಖರಗೊಳಿಸಿ ಬಂಧಿಸಿದ್ದಾರೆ.

ತಂಡದಲ್ಲಿ ಎಸ್‌ಪಿ ವಿಷ್ಣುವರ್ಧನ್‌ ಎನ್‌., ಹೆಚ್ಚುವರಿ ಎಸ್‌ಪಿ ಎಸ್‌.ಟಿ. ಸಿದ್ದಲಿಂಗಪ್ಪ  ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ. ನಿರ್ದೇಶನದಲ್ಲಿ ಕುಂದಾಪುರ ಪೊಲೀಸ್‌ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕ ಪ್ರಸಾದ್‌ ಕುಮಾರ್‌ ಕೆ., ಕಾನೂನು ಸುವ್ಯವಸ್ಥೆ ಪಿಎಸ್‌ಐ ಸದಾಶಿವ ಆರ್‌. ಗವರೋಜಿ ನೇತೃತ್ವದಲ್ಲಿ ಅಪರಾಧ ಪತ್ತೆದಳ ತಂಡದ ಸಿಬಂದಿಗಳಾದ ಸಂತೋಷ ಕುಮಾರ್‌ ಕೆ.ಯು., ಸಂತೋಷ ಕುಮಾರ್‌, ರಾಘವೇಂದ್ರ ಬೈಂದೂರು, ಅವಿನಾಶ್‌, ರಾಮ ಪೂಜಾರಿ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next