Advertisement

‌ಕುಂದಾಪುರ: ಅತಂತ್ರವಾಗಿಯೇ ಉಳಿದ ಸೇನಾಪುರ ಗ್ರಾಮ

11:43 AM Feb 24, 2023 | Team Udayavani |

ಕುಂದಾಪುರ: ಸರಿ ಸುಮಾರು 3 ವರ್ಷಗಳ ಹಿಂದೆ ನಾಡ ಗ್ರಾ.ಪಂ.ನಿಂದ ಬೇರ್ಪಟ್ಟು, ಹೊಸಾಡು ಗ್ರಾ.ಪಂ.ಗೆ ಸೇರಿಸಿದಾಗ ಪ್ರತ್ಯೇಕ ಗ್ರಾ.ಪಂ.ಗೆ ಬೇಡಿಕೆಯಿಟ್ಟ ಸೇನಾಪುರ ಗ್ರಾಮದ ಬಗ್ಗೆ ಸರಕಾರ ಯಾವುದೇ ನಿರ್ಧಾರಕ್ಕೆ ಬಾರದ ಕಾರಣ, ಇನ್ನೂ ಅತಂತ್ರವಾಗಿಯೇ ಉಳಿದಿದೆ.

Advertisement

ಅತ್ತ ಸ್ವತಂತ್ರವೂ ಇಲ್ಲದೇ, ಗ್ರಾಮದ ಅಭಿವೃದ್ಧಿಗೂ ಮನ್ನಣೆ ಸಿಗದೇ, ಅತಂತ್ರ ಗ್ರಾಮವಾಗಿಯೇ ಉಳಿದಿದೆ. ಗ್ರಾಮಸ್ಥರ ಬೇಡಿಕೆಯನ್ನು ಯಾರೂ ಕೇಳುವವರೇ ಇಲ್ಲವಾಗಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ ಬಗೆಹರಿಸುವವರೇ ಇಲ್ಲವಾಗಿದೆ. ಇನ್ನೂ ಸರಕಾರದಿಂದ ಸಿಗಬೇಕಿರುವ ಕೆಲವೊಂದು ಸವಲತ್ತುಗಳು ಗ್ರಾಮಸ್ಥರಿಗೆ ಸಿಗುತ್ತಿಲ್ಲ ಎನ್ನುವ ಆರೋಪ ಗ್ರಾಮಸ್ಥರದ್ದಾಗಿದೆ.

ನಾಡ ಗ್ರಾ.ಪಂ. ಬೈಂದೂರು ತಾಲೂಕಿಗೆ ಸೇರಿದ್ದರಿಂದ ಸೇನಾಪುರವನ್ನು ಬೇರ್ಪಡಿಸಿ ಕುಂದಾಪುರ ತಾಲೂಕಿನ ಹೊಸಾಡು ಗ್ರಾ.ಪಂ.ಗೆ ಸೇರಿಸಲಾಗಿತ್ತು. ಆದರೆ ಹೊಸಾಡು ಪಂಚಾಯತ್‌ ಕಚೇರಿ ಸೇನಾಪುರದಿಂದ 8-10 ಕಿ.ಮೀ. ದೂರ ಇರುವುದರಿಂದ ಅಲ್ಲಿನ ಗ್ರಾಮಸ್ಥರು ವಿರೋಧಿಸಿದ್ದರು.

ಇದಲ್ಲದೆ 7 ಗ್ರಾ.ಪಂ. ಸದಸ್ಯರಿದ್ದು, 2011ರ ಗಣತಿ ಪ್ರಕಾರ 2,572 ಮತದಾರರಿದ್ದು, 1,651.44 ಎಕರೆ ವಿಸ್ತೀರ್ಣ ಹೊಂದಿರುವ ಸೇನಾಪುರ ಗ್ರಾಮವನ್ನು ಸ್ವತಂತ್ರ ಗ್ರಾ.ಪಂ. ಆಗಿ ಘೋಷಿಸಬೇಕು ಎನ್ನುವುದಾಗಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಲ್ಲದೆ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಗೂ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಇನ್ನೂ ಇತ್ಯರ್ಥಗೊಂಡಿಲ್ಲ.

ಸರಕಾರದ ಗಮನಕ್ಕೆ
ಸೇನಾಪುರ ಗ್ರಾಮಸ್ಥರ ಬೇಡಿಕೆಯಂತೆ ಪ್ರತ್ಯೇಕ ಗ್ರಾ.ಪಂ. ರಚಿಸಬೇಕು ಎನ್ನುವುದಾಗಿ ಸ್ವತಃ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಸರಕಾರದ ಮುಂದೆ ಸದ್ಯಕ್ಕೆ ಹೊಸ ಗ್ರಾ.ಪಂ. ರಚನೆ ಪ್ರಸ್ತಾವನೆ ಇಲ್ಲದಿರುವುದರಿಂದ ವಿಳಂಬವಾಗುತ್ತಿದೆ. ಇದಲ್ಲದೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರ. ಕಾರ್ಯದರ್ಶಿಯೊಂದಿಗೂ ನಿರಂತರವಾಗಿ ಮಾತುಕತೆ ನಡೆಸಲಾಗುತ್ತಿದೆ.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next