Advertisement

Kundapura: ಪಡಿತರ ಸರ್ವರ್‌ನಿಂದ ಗೃಹಲಕ್ಷ್ಮೀ ವಿಳಂಬ

06:22 PM Sep 22, 2023 | Team Udayavani |

ಕುಂದಾಪುರ: ಪಡಿತರ ಇಲಾಖೆಯ ಸರ್ವರ್‌, ವೆಬ್‌ಸೈಟ್‌ಗಳ ಕಾರ್ಯನಿರ್ವಹಣೆ ಮೇಲೆ ಮಹಿಳೆಯರಿಗೆ ದೊರೆಯುವ ಮಾಸಿಕ ಎರಡು ಸಾವಿರ ರೂ.ಗಳ ಗೃಹಲಕ್ಷ್ಮಿಯ ಭವಿಷ್ಯ ಅವಲಂಬಿತವಾಗಿದೆ.

Advertisement

ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾದ, ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಯಿಂದ ಗೃಹಲಕ್ಷ್ಮಿ ಮಾಸಿಕ 2 ಸಾವಿರ ರೂ. ದೊರೆಯಬೇಕಾದರೆ ಪಡಿತರ ಚೀಟಿ ಮನೆ ಯಜಮಾನಿಯ ಹೆಸರಿನಲ್ಲಿ ಇರಬೇಕು. ಸರಕಾರದ ವಸತಿ ಯೋಜನೆ
ಸಹಿತ ವಿವಿಧ ಯೋಜನೆಗಳಿಗೆ ಅರ್ಜಿ ಹಾಕುವವರು, ವಿದ್ಯಾರ್ಥಿವೇತನ ಮೊದಲಾದ ಸೌಲಭ್ಯ ಪಡೆಯುವವರು ಈಗಾಗಲೇ ಯಜಮಾನಿಯ ಹೆಸರಿನಲ್ಲಿ ಪಡಿತರ ಚೀಟಿ ದಾಖಲಿಸಿಕೊಂಡಿದ್ದಾರೆ. ಪುರುಷರ ಹೆಸರಿನಲ್ಲಿಯೇ ಪಡಿತರ ಚೀಟಿಯಲ್ಲಿ ಯಜಮಾನ ಎಂದು ಉಳಿಸಿಕೊಂಡವರಿಗೆ ಈಗ ಯಜಮಾನ ಸ್ಥಾನ ಬಿಟ್ಟುಕೊಡಬೇಕಾಗಿದೆ.

ಬದಲಾವಣೆ ಸರಕಾರ ಯೋಜನೆಯ ರೂಪರೇಖೆ ಬಿಡುಗಡೆ ಮಾಡುತ್ತಿದ್ದಂತೆಯೇ ಆಹಾರ ಇಲಾಖೆಗೆ ಹೆಸರು ಬದಲಾಯಿಸಲು ದೌಡಾಯಿಸಿದರು. ಆದರೆ ಕಾಲ ಮೀರಿತ್ತು. ಏಕೆಂದರೆ ಅದಾಗಲೇ ಸರಕಾರ ಅನ್ನಭಾಗ್ಯ ಮೂಲಕ 10 ಕೆ.ಜಿ. ಅಕ್ಕಿ ನೀಡುವ ಘೋಷಣೆ ಮಾಡಿತ್ತು. ಆಗ ನಿಖರ ಲೆಕ್ಕಾಚಾರಕ್ಕೆ ಪಡಿತರ ಚೀಟಿ ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಈ ಮಧ್ಯೆ ಅಕ್ಕಿ ಇಲ್ಲ ಎಂದಾದಾಗ ಅಕ್ಕಿ ಬಾಬ್ತು ನಗದು ನೀಡಲು ಮುಂದಾಯಿತು. 5 ಕೆ.ಜಿ. ಅಕ್ಕಿ ಕೇಂದ್ರದಿಂದ, ಕರ್ನಾಟಕದಿಂದ ಹೆಚ್ಚುವರಿ ನೀಡಬೇಕಾಗುವ 5 ಕೆ.ಜಿ. ಅಕ್ಕಿಯ ಹಣವನ್ನು ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವ ನಿರ್ಧಾರಕ್ಕೆ ಬಂತು. ಆಗ ಮತ್ತೆ ಪಡಿತರ ಚೀಟಿಯ ಒದ್ದಾಟ ಆರಂಭವಾಯಿತು.

ನಕಲಿ ಪಡಿತರ ಚೀಟಿ ಪತ್ತೆಗೆ ಕ್ರಮ
ಈ ಮಧ್ಯೆ ನಕಲಿ ಪಡಿತರ ಚೀಟಿ ಪತ್ತೆ ಹಚ್ಚಿ ಬಿಪಿಎಲ್‌ ಅಲ್ಲದವರ ಪಡಿತರ ಚೀಟಿ ರದ್ದುಪಡಿಸಿ ದಂಡ ವಿಧಿಸಲಾಯಿತು. ಖಾತೆಗೆ ಹಣ ಬರುತ್ತದೆ ಎಂದಾದಾಗ ಮೃತರ ಹೆಸರಿನಲ್ಲಿ ಪಡಿತರ ಚೀಟಿ ಹೊಂದಿದವರು ಹೆಸರು ಬದಲಾವಣೆಗೆ ಸರತಿಯಲ್ಲಿ ನಿಂತರು. ಇದೆಲ್ಲ ದರ ಗೊಂದಲದ ನಡುವೆ ಸರಕಾರ, ಮೃತಪಟ್ಟವರ ಹೆಸರು ತೆಗೆಯಲಷ್ಟೇ ಸರ್ವರ್‌ನಲ್ಲಿ ಅವಕಾಶ ನೀಡಿತು.
ಹೊಸ ಹೆಸರು ಸೇರ್ಪಡೆ, ಯಜಮಾನರ ಹೆಸರು ಬದಲಾವಣೆ ಇತ್ಯಾದಿಗಳಿಗೆ ಅವಕಾಶ ನಿರಾಕರಿಸಿತು.ಪರಿಣಾಮ ಅತ್ತ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೂ ತೊಂದರೆಯಾಯಿತು.

ಏನು ತೊಂದರೆ
ಮೃತರ ಹೆಸರು, ಪಡಿತರ ಚೀಟಿಯಲ್ಲಿ ಯಜಮಾನ, ಯಜಮಾನಿ ಎಂದಿದ್ದರೆ ಅನ್ನಭಾಗ್ಯ , ಗೃಹಲಕ್ಷ್ಮಿಯೂ ಇಲ್ಲ. ಊರಿನಲ್ಲಿ ಇಲ್ಲದ ಬಂದುಗಳು ವಿವಾಹಿತ, ಪರವೂರಿನಲ್ಲಿ ಉದ್ಯೋಗಸ್ಥರಾಗಿದ್ದು ಮಾಸಿಕ 2 ಸಾವಿರ ರೂ.ಗಳ ಅಗತ್ಯ ಇಲ್ಲದವರ ಹೆಸರಿನಲ್ಲಿ ಯಜಮಾನರೆಂದಿದ್ದರೂ ಪಡಿತರ ಚೀಟಿ ಅನುಪಯುಕ್ತವಾಗುತ್ತದೆ.

Advertisement

ಸರ್ವರ್‌ ಸಮಸ್ಯೆ
ಕೆಲ ದಿನಗಳ ಹಿಂದೆ ಪಡಿತರ ಚೀಟಿ ತಿದ್ದುಪಡಿಗೆ ಸರಕಾರ ಕೆಲವು ದಿನಗಳ ಸೀಮಿತ ಅವಕಾಶ ನೀಡಿತ್ತು. ಆದರೆ ಸರ್ವರ್‌ ಸಮಸ್ಯೆಯಿಂದ ಬಹಳಷ್ಟು ಜನರಿಗೆ ತಿದ್ದುಪಡಿ ಮಾಡಲಾಗಲಿಲ್ಲ. ಏಕಾಏಕಿ ತಿದ್ದುಪಡಿಗೆ ಉಂಟಾದ ಒತ್ತಡ ಸರ್ವರ್‌ ಮೇಲೆ ಪರಿಣಾಮ ಬೀರಿತು.

ಎಷ್ಟೆಷ್ಟು ಖಾತೆಗೆ ಹಣ
ಉಡುಪಿ ಜಿಲ್ಲೆಗೆ ಮೊದಲ ಹಂತದಲ್ಲಿ 14 ಕೋ.ರೂ. ಬಂದಿದ್ದು 2ನೆ ಹಂತದಲ್ಲಿ 15 ಕೋ.ರೂ. ಬಂದಿದೆ. ಫಲಾನುಭವಿಗಳ ಖಾತೆಗೆ ಹಣ ಹಾಕುವ ಕೆಲಸ ನಡೆಯುತ್ತಿದೆ. ಕುಂದಾಪುರ ತಾಲೂಕಿನಲ್ಲಿ 29 ಸಾವಿರ ಮಂದಿಗೆ ಗೃಹಲಕ್ಷ್ಮಿ ಯೋಜನೆ ಮಂಜೂರಾಗಿದೆ. ಇದಲ್ಲದೇ 4,500 ಮಂದಿ ಮೃತಪಟ್ಟವರ ಹೆಸರು ಮೊದಲು ಬಿಡುಗಡೆಯಾದ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿತ್ತು. ಇವರು ತಿದ್ದುಪಡಿ ಮಾಡಿದರಷ್ಟೇ ಆ ಮನೆಯವರಿಗೆ ಮಾಸಿಕ ಹಣ ದೊರೆಯುತ್ತದೆ. ಪಡಿತರ ಇಲಾಖೆ ಆಹಾರ ಸರ್ವರ್‌ನಲ್ಲಿ ಒಮ್ಮೆ ತಿದ್ದುಪಡಿ ಯಾದರೆ ಅದು ಅಪ್‌ಡೇಟ್‌ ಆಗಿ ಪಡಿತರ ಚೀಟಿಯಲ್ಲಿ ಕಾಣಿಸಿಕೊಳ್ಳಲು ಅರ್ಹವಾಗಬೇಕಿದ್ದರೆ ಕನಿಷ್ಠ 45 ದಿನಗಳಿಂದ 60 ದಿನಗಳ ಕಾಲಾವಕಾಶ ಅಗತ್ಯ.

ದೂರು 
ಪಡಿತರ ಚೀಟಿಯ ತಿದ್ದುಪಡಿ ತತ್‌ಕ್ಷಣ ಮಾಡಲು ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಲು ತೊಂದರೆಯಾಗುತ್ತದೆ ಎಂದು ಅಭಿಜಿತ್‌ ಪೂಜಾರಿ ಹೇರಿಕುದ್ರು ಸರಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದು ಕುಂದಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪರಿಶೀಲನೆಗೆ ಬಂದಿದೆ.

ನಿರಂತರ ಪ್ರಕ್ರಿಯೆ
ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಸಮಯ ಮಿತಿ ಇಲ್ಲ. ನಿರಂತರ ಪ್ರಕ್ರಿಯೆ. ಯಾರೇ ಆದರೂ ಸಮಸ್ಯೆ, ಗೊಂದಲಗಳಿದ್ದರೆ ಅಂಗನವಾಡಿ ಮೇಲ್ವಿಚಾರಕರನ್ನು ಸಂಪರ್ಕಿಸಬಹುದು.

ಅನುರಾಧಾ ಹಾದಿಮನಿ, ಸಿಡಿಪಿಒ, ಕುಂದಾಪುರ

ಕಾಲಾವಕಾಶ ಅಗತ್ಯ
ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿಯಾದ ಬಳಿಕ ಕನಿಷ್ಠ 45 ದಿನಗಳ ಅವಧಿ ಬೇಕಾಗುತ್ತದೆ. ನಿರ್ದಿಷ್ಟ ಪ್ರಕರಣಗಳಿದ್ದರೆ ಗಮನಕ್ಕೆ ತರಬಹುದು.
ಶೋಭಾಲಕ್ಷ್ಮೀ ಎಚ್‌.ಎಸ್‌. ತಹಶೀಲ್ದಾರ್‌, ಕುಂದಾಪುರ

* ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next