ಕುಂದಾಪುರ: ಸಿಎಂ ಕಚೇರಿ ಸೂಚನೆಯಂಥೆ ಕುಂದಾಪುರ ತಾಲೂಕಿನಲ್ಲಿ ಮಳೆ ಹಾನಿ ಕುರಿತಂತೆ ಪರಿಹಾರ ಕಾರ್ಯಗಳನ್ನು ನಡೆಸಿ ಪರಿಹಾರ ಧನ ನೀಡಲಾಗಿದೆ ಎಂದು ತಹಶೀಲ್ದಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎರಡು ಜಿಲ್ಲೆಗಳ ಮಳೆ ಹಾನಿಯ ಕುರಿತಾಗಿ ಜು.13ರ “ಉದಯವಾಣಿ’ಯಲ್ಲಿನ ವರದಿ ಪ್ರಕಟನೆಗೆ ಸಿಎಂ ಕಚೇರಿಯಿಂದ ಜಿಲ್ಲಾಡಳಿತಕ್ಕೆ ವಿವರ ಕೇಳಿದ್ದು ಅದರಂತೆ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಯಿಂದ ಮಾಹಿತಿ ಕೇಳಿದ್ದರು. ಮಳೆ ಹಾನಿ ಸಂದರ್ಭ ಸಿಎಂ ಬೊಮ್ಮಾಯಿ ಜಿಲ್ಲೆಗೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದ್ದರು.
ಮುಖ್ಯಮಂತ್ರಿಯವರ ಅಧಿಧೀನ ಕಾರ್ಯದರ್ಶಿ ಅವರು ಪತ್ರ ಬರೆದು ಜು.13ರ ಉದಯವಾಣಿ ಪತ್ರಿಕೆಯಲ್ಲಿ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಗಾಳಿ ಮಳೆಯಾಗಿ ಉಂಟಾದ ಮನೆ ಹಾನಿ, ಕೃಷಿ, ತೋಟಗಾರಿಕಾ ಹಾನಿ ಹಾಗೂ ಮೆಸ್ಕಾಂ ಇಲಾಖಾ ಅಡಿಯಲ್ಲಿ ಸಂಭವಿಸಿದ ಹಾನಿಯ ಕುರಿತ ಸುದ್ದಿಗೆ ಆದ್ಯತೆಯ ಮೇರೆಗೆ ಪರಿಶೀಲಿಸಿ ತತ್‌ಕ್ಷಣವೇ ಅಗತ್ಯ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದರು.
ಗಾಳಿ ಮಳೆಯಿಂದಾಗಿ ಉಳ್ಳೂರು ಗ್ರಾಮದ ಲಕ್ಷ್ಮಿ ಅವರು ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕಾಲು ಜಾರಿ ಬಿದ್ದು ಮೃತ ಪಟ್ಟ ಹಿನ್ನೆಲೆಯಲ್ಲಿ ರೈತರ ಆಕಸ್ಮಿಕ ಮರಣ ಸಮಿತಿಯಲ್ಲಿ ಮಂಡಿಸಿ ಕ್ರಮವಹಿಸಲು ಸಹಾಯಕ ಕೃಷಿ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.
ವಾಸ್ತವ್ಯ ಮನೆಯು ಪೂರ್ಣ ಹಾನಿಯಿಂದಾಗಿ ಗಂಗೊಳ್ಳಿ ಹಾಗೂ ಬೆಳ್ಳಾಲ ಗ್ರಾಮದಲ್ಲಿ ಒಟ್ಟು 3 ಪ್ರಕರಣಗಳಿಗೆ 2.85 ಲಕ್ಷ ರೂ. ಪಾವತಿಸಲಾಗಿದೆ. ತೀವ್ರ ಹಾನಿಯಿಂದಾಗಿ ಕಾಳಾವರ, ಹೆಮ್ಮಾಡಿ, ಹಕ್ಲಾಡಿ, ಸೇನಾಪುರ, ಹಳ್ನಾಡು, ಶಂಕರನಾರಾಯಣ , ಸಿದ್ದಾಪುರ, ಕಮಲಶಿಲೆ, ಮಚ್ಚಟ್ಟು, ಕುಳಂಜೆ ಗ್ರಾಮಗಳ ಒಟ್ಟು 11 ಪ್ರಕರಣಗಳಿಗೆ 10.46 ಲಕ್ಷ ರೂ. ಪಾವತಿಸಲಾಗಿದೆ. ಭಾಗಶಃ ಹಾನಿಯಿಂದಾಗಿ ಅಸೋಡು, ಅಂಪಾರು, ಆನಗಳ್ಳಿ, ಆಲೂರು, ಉಳ್ಳೂರು, ಕರ್ಕುಂಜೆ, ಕುಂದಬಾರಂದಾಡಿ, ಕುಳಂಜೆ, ಜಪ್ತಿ, ತ್ರಾಸಿ, ಬಸ್ರೂರು, ಬಳ್ಳೂರು, ಮಚ್ಚಟ್ಟು, ಮೊಳಹಳ್ಳಿ, ಯಡಾಡಿ ಮತ್ಯಾಡಿ, ರಟ್ಟಾಡಿ, ವಂಡ್ಸೆ, ಶಂಕರನಾರಾಯಣ, ಸಿದ್ದಾಪುರ, ಹಂಗಳೂರು, ಹಾರ್ದಳ್ಳಿ ಮಂಡಳ್ಳಿ, ಹೊಸಾಡು ಗ್ರಾಮಗಳ ಒಟ್ಟು 32 ಪ್ರಕರಣಗಳಿಗೆ 1.66 ಲಕ್ಷ ರೂ. ನ್ನು ಪಾವತಿಸಲಾಗಿದೆ.
ವಾಸ್ತವ್ಯ ಮನೆಗಳನ್ನು ಆರ್‌ಜಿಎಚ್‌ಆರ್‌ಸಿಎಲ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಕೃಷಿ ಬೆಳೆ ಹಾನಿಯಾಗಿರುವ ಪ್ರಕರಣಗಳ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ತಂತ್ರಾಂಶದ ಲಾಗಿನ್‌ನಲ್ಲಿ ದಾಖಲು ಮಾಡಲಾಗಿದೆ ಎಂದು ತಹಶೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.