Advertisement

ಕುಂದಾಪುರ ಠಾಣೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಕಾಸರಗೋಡು ಬೀಚ್ ಬಳಿ ಆತ್ಮಹತ್ಯೆ

01:54 AM Feb 08, 2023 | Team Udayavani |

ಕುಂದಾಪುರ : ಇಲ್ಲಿನ ನಗರ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದ ರಾಮ ಗೌಡ (32) ಅವರು ಹೊನ್ನಾವರ ತಾಲೂಕಿನ ಕಾಸರಕೋಡು ಇಕೋ ಬೀಚ್‌ ಬಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಅನಾರೋಗ್ಯ ಅಥವಾ ಆನ್‌ಲೈನ್‌ ಬೆಟ್ಟಿಂಗ್‌ನಿಂದ ಆರ್ಥಿಕ ಸಂಕಷ್ಟ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.

Advertisement

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಗ್ರಾಮದ ನಾಗೇಶ ಗೌಡ ಅವರ ಪುತ್ರರಾಗಿರುವ ರಾಮ ಗೌಡ ಅವರು ಕಳೆದ 5 ವರ್ಷಗಳಿಂದ ಕುಂದಾಪುರ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದರು.

ಫೆ. 2ರಿಂದ ಮೇಲಾಧಿಕಾರಿಗಳು ಅಥವಾ ಸಹೋದ್ಯೋಗಿಗಳಿಗೆ ಮಾಹಿತಿ ನೀಡದೇ ಕರ್ತವ್ಯಕ್ಕೆ ಗೈರಾಗಿದ್ದರು. ಕಳೆದ 4-5 ದಿನಗಳಿಂದ ಅವರ ಮೊಬೈಲ್‌ ಫೋನ್‌ ಸ್ವಿಚ್‌xಆಫ್‌ ಆಗಿತ್ತು. ಇಲಾಖೆ ಸಿಬಂದಿಯಿಂದ ಅವರಿಗಾಗಿ ಹುಡುಕಾಟ ನಡೆಯುತ್ತಿತ್ತು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಕಾಸರಕೋಡಿನ ಇಕೋ ಬೀಚ್‌ ಬಳಿಯ ಪಾರ್ಕ್‌ ಸಮೀಪದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರಾಮ ಗೌಡ ಅವರ ಮೃತದೇಹ ಪತ್ತೆಯಾಗಿದೆ. ಈ ವೇಳೆ ಸಮೀಪದಲ್ಲಿ ಬ್ಯಾಗ್‌ ಸಹ ದೊರೆತಿದೆ ಎನ್ನಲಾಗಿದೆ.

ಪೊಲೀಸರ ಭೇಟಿ
ಕುಂದಾಪುರ ಎಸ್‌ಐ ಈರಯ್ಯ ಹಾಗೂ ಸಿಬಂದಿ ಹೊನ್ನಾವರದ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡಿತ್ತೇ ಆರೋಗ್ಯ ಸಮಸ್ಯೆ?
ರಾಮ ಗೌಡ ಉತ್ತಮ ವಾಲಿಬಾಲ್‌ ಆಟಗಾರರಾಗಿದ್ದು, ಇತ್ತೀಚೆಗೆ ಹೆಚ್ಚಾಗಿ ಒಂಟಿಯಾಗಿರುತ್ತಿದ್ದು, ಮನೆ, ಸಂಕಷ್ಟಗಳ ಬಗ್ಗೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಕೆಲವು ಸಮಯದಿಂದ ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು ಎನ್ನುವ ಮಾಹಿತಿಯಿದೆ. ಇನ್ನು ಇವರು ಆನ್‌ಲೈನ್‌ ಬೆಟ್ಟಿಂಗ್‌ ವಿಚಾರದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದರೆನ್ನಲಾಗಿದ್ದು, ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ತಂಗಿಯ ಮದುವೆ ಮಾಡಿಸಲು ಆಗಲಿಲ್ಲ, ಅದಕ್ಕಾಗಿ ಆಕೆಗೆ ಸರಕಾರಿ ಉದ್ಯೋಗ ನೀಡಿ ಎನ್ನುವುದಾಗಿ ರಾಮ ಅವರು ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next