Advertisement

ಮರ್ಯಾದೆ ಇಲ್ಲದ ಆಡಳಿತ ಎಂದದ್ದಕ್ಕೆ ಸಭಾತ್ಯಾಗ

08:57 PM Dec 30, 2021 | Team Udayavani |

ಕುಂದಾಪುರ: ಪುರಸಭೆಯಲ್ಲಿ ಹಣ ಕೊಡದೆ, ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಹಿರಿಯ ಸದಸ್ಯೆ ದೇವಕಿ ಸಣ್ಣಯ್ಯ ಅವರ ಪತ್ರಿಕಾ  ಹೇಳಿಕೆ. ಇದಕ್ಕೆ ಪೂರಕ ಮಾತಾಡುವಾಗ ಮರ್ಯಾದೆ ಇಲ್ಲದ ಆಡಳಿತ ಎಂದು ವಿಪಕ್ಷದ ಶ್ರೀಧರ ಶೇರಿಗಾರ್‌ ಅವರ ಟೀಕೆ. ದೇವಕಿಯವರಿಂದ ದೊರೆಯದ ಭ್ರಷ್ಟರ ಪಟ್ಟಿ. ಹೇಳಿಕೆ ಹಿಂಪಡೆಯದ ಶ್ರೀಧರ್‌. ಇದಿಷ್ಟಕ್ಕೆ ಮರ್ಯಾದೆ ಹೋಯಿತು ಎಂದು ಸಭಾತ್ಯಾಗ ಮಾಡಲು ಮುಂದಾದ ಆಡಳಿತ ಪಕ್ಷ ಬಿಜೆಪಿ ಸದಸ್ಯರು.

Advertisement

ಗುರುವಾರ ಅಪರಾಹ್ನ ನಡೆದ ಸಾಮಾನ್ಯ ಸಭೆಯಲ್ಲಿ ಸಭೆ ನಡೆಸುವ ಜವಾಬ್ದಾರಿ ಹೊಂದಿದ ಆಡಳಿತ ಪಕ್ಷವೇ ಸಭೆಯಿಂದ ಹೊರನಡೆಯಿತು.

ರಾಜಕೀಯ ಲಾಭ :

ಗಿರೀಶ್‌ ದೇವಾಡಿಗ ಅವರು ದೇವಕಿ ಸಣ್ಣಯ್ಯ ಅವರ ಹೇಳಿಕೆ ಕುರಿತು ಸ್ಪಷ್ಟನೆ ಬಯಸಿದರು. ಭ್ರಷ್ಟರ ಪಟ್ಟಿ ಕೊಡಿ, ತನಿಖೆ ಆಗಲಿ. ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ಸುಖಾಸುಮ್ಮನೆ ರಾಜಕೀಯ ಲಾಭಕ್ಕಾಗಿ ಹೇಳಿಕೆ ಕೊಡಬೇಡಿ. ಇದರ ಷಡ್ಯಂತ್ರ ಬಯಲಾಗಲಿ ಎಂದರು. ಆದರೆ ದೇವಕಿ ಅವರು ನಾನು ಕೇಳಿದ ಯುಜಿಡಿ ಕುರಿತಾದ ಪ್ರಶ್ನೆಗೆ ಅಧ್ಯಕ್ಷರು ಉತ್ತರಿಸದ ಕಾರಣ ನಾನು ಇದಕ್ಕೆ ಉತ್ತರಿಸಬೇಕಿಲ್ಲ. ಸಮಯ ಬಂದಾಗ ಹೇಳುವೆ ಎಂದರು. ಈ ವೇಳೆ ಶ್ರೀಧರ್‌ ಅವರು ಯುಜಿಡಿ ಹಗರಣ ನಡೆದು ಮುಖ್ಯಾಧಿಕಾರಿ ಮೇಲೆಯೇ ಆರೋಪ ಮಾಡಿಲ್ಲವೇ. ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ. ಮರ್ಯಾದೆ ಇಲ್ಲದ ಆಡಳಿತ ಎಂದರು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಮೋಹನದಾಸ ಶೆಣೈ ಖಂಡಿಸಿದರು. ಇದಕ್ಕೆ ಎಲ್ಲರೂ ಬೆಂಬಲ ನೀಡಿ ಹೊರನಡೆದರು. ಅಧ್ಯಕ್ಷೆ ಕಲಾಪ ಮುಂದೂಡಿದರು.

ಆರೋಪ :

Advertisement

ಅನುಚಿತವಾಗಿ ಮಾತಾಡಿದ ಸದಸ್ಯರನ್ನು ಅಮಾನತು ಮಾಡಿ ಎಂದು ಸಂತೋಷ್‌ ಶೆಟ್ಟಿ ಹೇಳಿದರು. ಸಭಾತ್ಯಾಗ ಮಾಡಿದ್ದು ಸರಿಯಲ್ಲ, ನಮಗೂ ಅಧ್ಯಕ್ಷರಲ್ಲವೇ ? ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದಾಗ ಅಧ್ಯಕ್ಷೆ ಸಭೆ ನಡೆಸಿದ್ದಾರೆ ಎಂದು ಅಶ್ಪಕ್‌ ಕೋಡಿ ಹೇಳಿದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸಭಾತ್ಯಾಗ ಮಾಡಿಲ್ಲ. 10 ನಿಮಿಷ ಕಳೆದು ಸಭೆ ಮುಂದುವರಿಯಿತು. ಅದೇ ಚರ್ಚೆ ಮುಂದುವರಿಯಿತು. ಅನುಚಿತ ಹೇಳಿಕೆ ಕಡಿತದಿಂದ ತೆಗೆಯಲಾಗುತ್ತದೆ. ಭ್ರಷ್ಟಾಚಾರದ ಆರೋಪಕ್ಕೆ ಸಮಜಾಯಿಷಿ ನೀಡಬೇಕೆಂದು ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌ ಹೇಳಿದರು. ಎಲ್ಲೆಡೆ ಆರೋಪ ಇದೆ. ಪಟ್ಟಿ ಕೊಡುವುದಿಲ್ಲ ಎಂದು ದೇವಕಿ ಹೇಳಿದರು. ಪುರಸಭೆಯಲ್ಲಿ ಕೆಲಸ ಆಗಲು ಮಧ್ಯ ವರ್ತಿಗಳು ಬೇಕು. ಆಡಳಿತದವರು ಸ್ಪಂದಿಸುವುದಿಲ್ಲ. ಹಾಗಿದ್ದರೂ ನಾನು ಆಡಳಿತದ ಗೌರವ ಕಳೆಯಲಿಲ್ಲ. ಮಧ್ಯವರ್ತಿ ಇಲ್ಲದೆ ಜನರ ಕೆಲಸ ಆಗುವುದಿಲ್ಲ ಇಲ್ಲಿ. ಆಡಳಿತದಲ್ಲಿ ಪಾರದರ್ಶಕತೆ ಬೇಕು. ನನ್ನ ಸಹಿ ನಕಲಿ ಮಾಡಿ ನನ್ನ ವಾರ್ಡ್‌ಗೆ  ಮಂಜೂರಾದ ಕಾಮಗಾರಿ ಸ್ಥಳಾಂತರಿಸಲಾಗುತ್ತದೆ. ನಮ್ಮದೇ ಪಕ್ಷದ ಚಂದ್ರಶೇಖರ ಖಾರ್ವಿ ನಕಲಿ ಸಹಿ ಹಾಕಿದ್ದರು ಎಂದು ಪ್ರಭಾವತಿ ಶೆಟ್ಟಿ ಹೇಳಿದರು. ಯಾವುದೇ ಕಡತ ಬಾಕಿ ಇಲ್ಲ. ಸಕಾಲ ಯೋಜನೆಯಂತೆ ನಡೆಯುತ್ತದೆ ಎಂದು ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಕಾಮಗಾರಿ :

ಸ್ಥಾಯೀ ಸಮಿತಿ ರಚನೆಯಾಗಿ ತಿಂಗಳೆಂಟು ಆದರೂ ಬೀದಿದೀಪ ಸಂಬಂಧ ನಾನು ಹೇಳಿದ ಕೆಲಸ ಈವರೆಗೂ ನಡೆದಿಲ್ಲ. ನಿಮ್ಮಿಂದ ಆಗದೇ ಇದ್ದರೆ ಹೇಳಿ.ಎಷ್ಟು ಸಮಯ ಕಾಯಬೇಕು ಎಂದು ಅಶ್ವಿ‌ನಿ ಪ್ರದೀಪ್‌ ಹೇಳಿದರು. ಮರ ಕಡಿಯಲು ಅರ್ಜಿ ನೀಡಿದರೂ ಕಡಿದಿಲ್ಲ. ತಾರತಮ್ಯ ಮಾಡಲಾಗುತ್ತಿದೆ ಎಂದು ಪುಷ್ಪಾ ಶೇಟ್‌ ಹೇಳಿದರು. ಅನುಮತಿಗೆ ಬರೆಯಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ್‌ ಪೂಜಾರಿ ಹೇಳಿದರು. ಸ್ಥಾಯೀ ಸಮಿತಿಯಲ್ಲಿ ಬೇಕಾಬಿಟ್ಟಿ ದರ ನಮೂದಿಸಿ ಕಾಮಗಾರಿಗೆ ನಿರ್ಣಯ ಮಾಡಲಾಗಿದೆ ಎಂದು ಶ್ರೀಧರ್‌ ಶೇರಿಗಾರ್‌ ಹೇಳಿದರು.

ಅಪಾಯಕಾರಿ ಮರ ತೆರವುಗೊಳಿಸಿ ಎಂದು ಪ್ರಭಾವತಿ ಹೇಳಿದರು. ಪ್ರಭಾಕರ್‌ ವಿ. ಅವರು ಹೇಳಿದ ಮರಗಳ ಗೆಲ್ಲು ಕಡಿಯಲು ಅನುಮತಿ ದೊರೆತಿದೆ. ಅರಣ್ಯ ಇಲಾಖೆ ಅನುಮತಿ ಇಲ್ಲದೇ ಮರಗಳ ಕಡಿತ, ಗೆಲ್ಲು ತೆಗೆಯಲಾಗದು ಎಂದು ಮುಖ್ಯಾಧಿಕಾರಿ ಹೇಳಿದರು. ಹೆದ್ದಾರಿ ಕುರಿತಾದ ಚರ್ಚೆಗೆ ಪ್ರತ್ಯೇಕ ಸಭೆ ಕರೆಯಲಾಗುತ್ತದೆ ಎಂದು ಅಧ್ಯಕ್ಷೆ ಹೇಳಿದರು. ಉಪಾಧ್ಯಕ್ಷ ಸಂದೀಪ್‌ ಖಾರ್ವಿ ಉಪಸ್ಥಿತರಿದ್ದರು.

ಯುಜಿಡಿ ಕಥೆ ಏನಾಯಿತು? :

ಯುಜಿಡಿ ಹಗರಣದ ತನಿಖೆ ನಡೆಯಬೇಕೆಂದು ಮಾಡಿದ ನಿರ್ಣಯ ಏನಾಯಿತು ಎಂದು ದೇವಕಿ ಸಣ್ಣಯ್ಯ ಕೇಳಿದರು. ವಕೀಲರಿಗೆ ಅಭಿಪ್ರಾಯ ಕೇಳಲಾಗಿದೆ. ಅಲ್ಲಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನೀಡಿದ ದೂರಿನಂತೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂದು ಮುಖ್ಯಾಧಿಕಾರಿ ಹೇಳಿದರು. ಯುಜಿಡಿ ಕಾಮಗಾರಿ ಸ್ಥಗಿತಗೊಳಿಸಿದ ಕಪ್ಪುಚುಕ್ಕೆ ಸದಸ್ಯರ ಮೇಲೆ ಬರುವುದು ಬೇಡ ಎಂದು ಶ್ರೀಧರ್‌, ಗಿರೀಶ್‌ ಹೇಳಿದರು. ಜ.4ಕ್ಕೆ ಯುಜಿಡಿ ಕುರಿತಾದ ಸಭೆ ಕರೆಯಲಾಗಿದೆ.  ಪ್ರಕರಣ ತನಿಖೆಯಲ್ಲಿರುವಾಗ ಕಾಮಗಾರಿ ಮುಂದುವರಿಸಬಹುದೇ ಬೇಡವೇ ಎಂಬ ಕುರಿತು ಡಿಸಿ ಹಾಗೂ ವಕೀಲರಿಂದ ಸಲಹೆ ಪಡೆದು ಮುಂದುವರಿಯಲಾಗುವುದು. ವಿವಾದಿತ 5 ಸೆಂಟ್ಸ್‌ ಹೊರಗಿಟ್ಟರೂ ಕಾಮಗಾರಿ ಮುಂದುವರಿಸಲು ಸಮಸ್ಯೆ ಆಗದು ಎಂದು ಮುಖ್ಯಾಧಿಕಾರಿ ಹೇಳಿದರು.

ಸುದಿನ ವರದಿ :

ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರಗಳ ಅಗತ್ಯದ ಕುರಿತು “ಉದಯವಾಣಿ’ “ಸುದಿನ’ ವಿಸ್ತೃತ ವರದಿ ಮಾಡಿದೆ ಎಂದು ಗಿರೀಶ್‌ ಗಮನ ಸೆಳೆದರು. ಡಯಾಲಿಸಿಸ್‌ ಯಂತ್ರ ನೀಡಲು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮನವಿ ಮಾಡಿದ್ದು ಒಪ್ಪಿಗೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next