Advertisement
ರವಿವಾರ ಸಂಜೆ 7.10 ರ ಸುಮಾರಿಗೆ ಚಿಕ್ಕನ್‌ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಬಳಿ ರಾಘವೇಂದ್ರ ಹಾಗೂ ವ್ಯಾಗನರ್ ಕಾರಿನಲ್ಲಿ ಬಂದಿದ್ದ ಇನ್ನಿಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದು, ಆ ಪೈಕಿ ಓರ್ವ ರಾಘವೇಂದ್ರ ಅವರ ತೊಡೆಗೆ ಚೂರಿಯಿಂದ ಇರಿದು ಬಳಿಕ ಇಬ್ಬರೂ ಕಾರಿನಲ್ಲಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಸೋಮ ವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ರಾಘವೇಂದ್ರ ಅವರು, ಕೆಲವು ವರ್ಷಗಳಿಂದ ಊರಾದ ಕುಂದಾಪುರಕ್ಕೆ ಬಂದು ಇಲ್ಲಿಯೇ ನೆಲೆಸಿದ್ದರು. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. “ಬನ್ಸ್ ರಾಘು’ ಎಂದೇ ಗುರುತಿಸಿಕೊಂಡಿದ್ದ ರಾಘವೇಂದ್ರ ಅವರು “ಸಂಚಲನ’ ಎನ್ನುವ ಸಿನೆಮಾ ದಲ್ಲಿಯೂ ನಟಿಸಿದ್ದರು. ಎಸ್ಪಿ ಭೇಟಿ
ಘಟನ ಸ್ಥಳಕ್ಕೆ ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ. ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಡಿವೈಎಸ್ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ನಂದ ಕುಮಾರ್, ಉಪನಿರೀಕ್ಷಕರು, ಸಿಬಂದಿ ಭೇಟಿ ನೀಡಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
Related Articles
ಮೇಲ್ನೋಟಕ್ಕೆ ಯಾವುದೋ ಪೂರ್ವ ದ್ವೇಷದಿಂದಲೇ ರಾಘವೇಂದ್ರ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಆರೋಪಿ ಶಿವಮೊಗ್ಗ ಮೂಲದವ ಎಂದು ತಿಳಿದುಬಂದಿದೆ.
Advertisement
ಆರೋಪಿಯ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆಗಿಳಿದಿದ್ದಾರೆ. ಆರೋಪಿ ಪತ್ತೆಗಾಗಿ ಎಸ್ಪಿಯವರು ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ನಂದಕುಮಾರ್ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್ ನೇತೃತ್ವದಲ್ಲಿ 3 ವಿಶೇಷ ತಂಡಗಳನ್ನು ರಚಿಸಿದ್ದಾರೆ.