Advertisement

Kundapura: ಸ್ವಾತಂತ್ರ್ಯ ಯೋಧರ ಸ್ಮಾರಕ ನಿರ್ಮಾಣವಾಗಲಿ

01:05 PM Aug 15, 2024 | Team Udayavani |

ಕುಂದಾಪುರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕುಂದಾಪುರದ ಪಾಲು ಕೂಡ ಸಣ್ಣದಲ್ಲ. ಕುಂದಾಪುರ ತಾಲೂಕಿನ 40ಕ್ಕಿಂತ ಹೆಚ್ಚು ಮಂದಿ ಸಕ್ರಿಯ ಹೋರಾಟದಲ್ಲಿ ಭಾಗಿಯಾದ ದಾಖಲೆಗಳಿವೆ. ಇವರಲ್ಲದೇ ಸಾವಿರಾರು ಮಂದಿ ಹೋರಾಟದ ಕಿಚ್ಚು ಹಚ್ಚಿಕೊಂಡವರಿದ್ದರು. ಇವರೆಲ್ಲರ ನೆನಪಿಗಾಗಿ ಸ್ವಾತಂತ್ರ್ಯ ಯೋಧರ ಸ್ಮಾರಕ ನಿರ್ಮಾಣ ಆಗಬೇಕು ಎಂಬ ಕೂಗು ಎದ್ದಿದೆ.

Advertisement

ಸ್ಮರಿಸುವ ಕಾರ್ಯವಾಗಲಿ

ಕುಂದಾಪುರದ ಜಮೀನುದಾರರು, ಕೃಷಿಕರು, ವ್ಯಾಪಾರಿಗಳು, ಜನಸಾಮಾನ್ಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಕೆಲವರು ತಮ್ಮ ಕುಟುಂಬ, ಆಸ್ತಿ, ವ್ಯವಹಾರ, ಆರೋಗ್ಯ ಕಡೆಗಣಿಸಿ ಹೋರಾಟ ಮಾಡಿ ಹಲವು ತಿಂಗಳು, ವರ್ಷ ಜೈಲು ಸೇರಿದ್ದರು. ಅಮೃತ ಮಹೋತ್ಸ ಸಂದರ್ಭ ಅನೇಕ ಹೋರಾಟಗರಾರರ ಕುರಿತು ಕೇಂದ್ರ ಸರಕಾರ, ಸಾಮಾಜಿಕ ಕಳಕಳಿ ಉಳ್ಳವರು ಅನೇಕ ಹೋರಾಟಗಾರರ ಕುರಿತು ಮಾಹಿತಿ ಹಂಚಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುಸ್ತಕಗಳನ್ನು ಪ್ರಕಟಿಸಿತ್ತು. ಕೇಂದ್ರದಿಂದ ರಾಜ್ಯದ ಸಹಯೋಗದಲ್ಲಿ ಎಲ್ಲ ಪಂಚಾಯತ್‌ಗಳಲ್ಲಿ ಯೋಧ ಸ್ಮಾರಕ, ಅಮೃತ ಉದ್ಯಾನ, ಅಮೃತ ಸರೋವರ ಮೊದಲಾದ ಯೋಜನೆಗಳಾಗಿದ್ದವು. ಸ್ಥಳೀಯವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಶಾಶ್ವತವಾಗಿ ಸ್ಮರಿಸುವ ಕಾರ್ಯ ನಡೆಯಲಿಲ್ಲ.

ತಾಲೂಕು ಕೇಂದ್ರದಲ್ಲಿ ಇರಲಿ

ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಭವನ ತಾಲೂಕು ಕೇಂದ್ರಗಳಲ್ಲಿ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಇದೆ. ಕುಂದಾಪುರ ತಾಲೂಕಿನಲ್ಲಿ ಸ್ಮರಿಸಲೇಬೇಕಾದ 40ಕ್ಕೂ ಹೆಚ್ಚು ಹೋರಾಟಗಾರರು ಇದ್ದಾರೆ. ಕೆಲವರ ಬಗ್ಗೆ ಪುಸ್ತಕ ಪ್ರಕಟವಾಗಿದ್ದರೂ ಎಲ್ಲರ ಕುರಿತಾದ ಸಮಗ್ರ ಮಾಹಿತಿ ಸಾರ್ವಜನಿಕರಿಗೆ ತಿಳಿಸುವ ಕಾರ್ಯವಾಗಬೇಕಿದೆ. ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸ್ಮಾರಕ ಅಥವಾ ಸಭಾಭವನದ ನಿರ್ಮಾಣವಾಗಬೇಕಿದೆ. ಕಂದಾಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಮುಂದಡಿ ಇಡಬೇಕಿದೆ. ಕುಂದಾಪುರದ ಹಳೆಯ ತಾಲೂಕು ಕಚೇರಿ ಕಟ್ಟಡ ಇದ್ದ ಸ್ಥಳದಲ್ಲಿ ಈ ಯೋಜನೆ ಕಾರ್ಯಗತಗೊಳಿಸುವ ಪ್ರಯತ್ನ ನಡೆಸಬಹುದು. ಸ್ಮಾರಕ ಭವನ ನಿರ್ಮಾಣ ಮಾಡುವ ಬಗ್ಗೆ ಶಾಸಕರು, ಸಂಸದರು, ಸ್ಥಳೀಯ ನಾಯಕರು ಸರಕಾರವನ್ನು ಒತ್ತಾಯಿಸಬೇಕಾಗಿದೆ. ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರ ಅಜ್ಜ ಕೃಷ್ಣರಾಯ ಕೊಡ್ಗಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ತಂದೆ ಮೋನಪ್ಪ ಶೆಟ್ಟಿ ಅವರೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

Advertisement

ನಾಮಫಲಕ

ಇತಿಹಾಸ ಸಂಶೋಧಕ ಪ್ರದೀಪ್‌ ಬಸ್ರೂರು ಅವರು ಉತ್ತರಕನ್ನಡ, ಉಡುಪಿ, ದ.ಕ. ಜಿಲ್ಲೆಯ 14,800 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲಾಡಳಿತಗಳು ಆರ್‌ಟಿಐ ಪ್ರಕಾರ ನೀಡಿದ ಅಂಕಿ ಅಂಶ ಬೆರಳೆಣಿಕೆಯಲ್ಲಿದೆ. ಉಡುಪಿ ಜಿಲ್ಲೆಯಲ್ಲಿ 250, ಕುಂದಾಪುರದಲ್ಲಿ 60ಕ್ಕೂ ಅಧಿಕ ಮಂದಿ ಇದ್ದು ಸತತ ಅಧ್ಯಯನ, ಸಂಶೋಧನೆ ಮೂಲಕ ಇಷ್ಟು ಮಂದಿಯ ಮಾಹಿತಿ ಸಂಗ್ರಹಿಸಲಾಗಿದೆ. ಈ ಪೈಕಿ ಸ್ವರಾಜ್ಯ 75 ಎಂಬ ಅಭಿಯಾನದ ಮೂಲಕ 30ಕ್ಕೂ ಅಧಿಕ ಮಂದಿಯ ಮನೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎಂದು ನಾಮಫಲಕ ಅನಾವರಣ ಮಾಡಲಾಗಿದೆ.

ಕುಂದಾಪುರದ ಸ್ವಾತಂತ್ರ್ಯ ಹೋರಾಟಗಾರರು

ಅಮಾಸೆಬೈಲು ಕೃಷ್ಣರಾಯ ಕೊಡ್ಗಿ, ಹಾಲಾಡಿ ಮೋನಪ್ಪ ಶೆಟ್ಟಿ, ಹಾಲಾಡಿ ಮಹಾಬಲ ಶೆಟ್ಟಿ, ಕೋಣಿ ಅಣ್ಣಪ್ಪ ಕಾರಂತ, ಉಮಾಬಾಯಿ ಕುಂದಾಪುರ, ಕುಂದಾಪುರ ರಾಘವೇಂದ್ರ ಶೆಣೈ, ಕುಂದಾಪುರ ವಿಟ್ಠಲ ಪೈ, ಕೊಳ್ಕೆಬೈಲು ಮಹಾಬಲ ಶೆಟ್ಟಿ, ಬಿ.ಎಸ್‌.ಸೂರಪ್ಪ ಶೆಟ್ಟಿ, ಕೆ. ಎನ್‌. ರಾವ್‌, ತೆಕ್ಕಟ್ಟೆ ವಿಟ್ಠಲ ಶೆಟ್ಟಿ, ಹಲ್ಸನಾಡು ಸೂರಪ್ಪಯ್ಯ, ಚೇರ್ಕಾಡಿ ರಾಜಗೋಪಾಲ ಶೆಟ್ಟಿ, ಕಳಂಜಿ ರಾಮಕೃಷ್ಣ ಭಟ್‌, ಬಿ.ಸಿ.ಮಂಜಯ್ಯ ಶೆಟ್ಟಿ, ಬನ್ನೂರು ಸುಬ್ಬಣ್ಣ ಶೆಟ್ಟಿ, ತೆಕ್ಕಟ್ಟೆ ಮರ್ತಪ್ಪ ಗಣಪಯ್ಯ ಕಾಮತ್‌, ಕೊಟ್ಟಕ್ಕಿ ಕೃಷ್ಣಯ್ಯ ಶೆಟ್ಟಿ, ಮೊಳಹಳ್ಳಿ ಮಹಾಬಲ ಶೆಟ್ಟಿ, ಬಳ್ಕೂರು ಗಾಂಧಿ ರಾಮಣ್ಣ ಶೆಟ್ಟಿ, ಕೋಟ ಪದ್ಮನಾಭ ಕಿಣಿ, ಬಸ್ರೂರು ಗೋಪಾಲಕೃಷ್ಣ ಶೆಣೈ, ಹೇರಂಜಾಲು ಕುಪ್ಪಯ್ಯ ಹೆಬ್ಟಾರ್‌, ಕಳಂಜೆ ರಾಮಕೃಷ್ಣ ಭಟ್‌, ಹಕ್ಲಾಡಿ ಮಂಕಿ ರಾಮಣ್ಣ, ಉಪ್ಪುಂದ ಗೋವಿಂದ ಖಾರ್ವಿ, ಸೌಕೂರು ಕೊಳ್ಕೆಬೈಲು ಮಹಾಬಲ ಶೆಟ್ಟಿ, ಖಂಬದಕೋಣೆ ಸಂಜೀವ ರಾವ್‌, ಬಾಡಾ ಮಂಜುನಾಥ್‌ ಜೋಷಿ, ವಕ್ವಾಡಿ ಕೃಷ್ಣ ಐತಾಳ್‌, ತ್ರಾಸಿ ಪರಮೇಶ್ವರ ಹೆಬ್ಟಾರ್‌, ಮಾಲಾಡಿ ಗಣಪತಿ ವೆಂಕಟೇಶ್‌ ಶ್ಯಾನುಭೋಗ, ಬಂಟಕಲ್ಲು ಲಕ್ಷ್ಮೀ ನಾರಾಯಣ ಶರ್ಮಾ, ಪಾರಂಪಳ್ಳಿ ಜನಾರ್ದನ ಮಧ್ಯಸ್ಥ, ನೇರಂಬಳ್ಳಿ ಶೇಷಗಿರಿ ರಾವ್‌, ಹಂದಾಡಿ ಬೆಣ್ಣೆಕುದ್ರು ಸಂಜೀವ ಶೆಟ್ಟಿ, ತಲ್ಲೂರು ಸುಬ್ಬಣ್ಣ ಗುಪ್ತ, ಕಡ್ತಲ ಕಾಂತಪ್ಪ ಪೂಜಾರಿ, ಕೊರ್ಗಿ ಹೊಸಮಠ ಸಿ. ರಾಜಗೋಪಾಲ ಶೆಟ್ಟಿ, ಭದ್ರಾವತಿ ಎಂ. ನಾಗಪ್ಪ, ಉಡುಪಿ ದಾಸ್‌ ಸೇರೆಗಾರ್‌, ಕೋಟ ಶಿವರಾಮ ಕಾರಂತ, ಕಂದಾವರ ಬಿ.ಎಸ್‌. ಸೂರಪ್ಪ ಶೆಟ್ಟಿ

ಸಭಾಂಗಣ, ಮ್ಯೂಸಿಯಂ ಆಗಲಿ

ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವಂತಹ ಸ್ಮಾರಕ ಇಲ್ಲ. ಪ್ರಮುಖ ರಸ್ತೆಗಳಿಗೂ ಹೆಸರು ಹಾಕಲಿಲ್ಲ. ಸ್ಥಳೀಯ ಹೋರಾಟಗಾರರ ಹೆಸರೇ ಹೆಚ್ಚಿನವರಿಗೆ ತಿಳಿದಿಲ್ಲ. ಸ್ಮಾರಕ ಭವನ ಅಥವಾ ಬಹು ಚಟುವಟಿಕೆಗಳಿಗೆ ಅನುಕೂಲವಾದ ಸಭಾಂಗಣ, ಮ್ಯೂಸಿಯಂ ಸ್ಥಾಪಿಸುವ ಪ್ರಯತ್ನ ನಡೆಸಬೇಕಿದೆ.
-ಜಯವಂತ ಪೈ, ಕುಂದಾಪುರ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next