Advertisement
ಕುಂದಾಪುರ-ಬೈಂದೂರು ಹೆದ್ದಾರಿ ಕಾಮಗಾರಿ ಹಾಗೂ ರಾಜಾಡಿ ಸಮೀಪ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭವಾದ ಬಳಿಕ ತಲ್ಲೂರು ಗ್ರಾಮದ ಚಿತ್ತೇರಿಮಕ್ಕಿ ಹಾಗೂ ಕಲ್ಕೇರಿ ಭಾಗದ ಗದ್ದೆಗಳಿಗೆ ಉಪ್ಪು ನೀರು ನುಗ್ಗಲು ಆರಂಭಿಸಿದೆ. ಇದರಿಂದ ಗದ್ದೆಗಳಲ್ಲಿ ಭತ್ತದ ಬೇಸಾಯ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದು ಈ ಭಾಗದ 20ಕ್ಕೂ ಹೆಚ್ಚು ಮಂದಿ ರೈತರು ಗದ್ದೆಗಳನ್ನು ಹಡಿಲು ಬಿಟ್ಟಿದ್ದಾರೆ. ಕಳೆದ 3 ವರ್ಷಗಳಿಂದ 3-4 ಎಕರೆ ಪ್ರದೇಶದಲ್ಲಿರುವ ಗದ್ದೆಗಳಲ್ಲಿ ಯಾವುದೇ ಬೆಳೆಯನ್ನು ಬೆಳೆಯದೇ ಹಡಿಲು ಬಿಡುವಂತಾಗಿದೆ.
ಹೆಚ್ಚಿನ ಕಡೆಗಳಲ್ಲಿ ವರ್ಷದಲ್ಲಿ ಎರಡು ಭತ್ತದ ಬೆಳೆಯನ್ನು ಮಾಡಿದರೆ, ಕಡಲ ತೀರದ ರೈತರು ಸಾಮಾನ್ಯವಾಗಿ ಮುಂಗಾರು ಹಂಗಾಮಿನ ಬೆಳೆಯನ್ನು ಮಾತ್ರ ಮಾಡುತ್ತಾರೆ. ಡಿಸೆಂಬರ್ – ಜನವರಿ ಸಮಯದಲ್ಲಿ ಉಪ್ಪು ನೀರಿನ ಸಮಸ್ಯೆಯಿಂದಾಗಿ ಹಿಂಗಾರು ಹಂಗಾಮಿನ ಭತ್ತದ ಬೆಳೆಯಲು ಸಾಧ್ಯವಾಗುವುದಿಲ್ಲ. ಆದರೆ ಚಿತ್ತೇರಿಮಕ್ಕಿ ಹಾಗೂ ಕಲ್ಕೇರಿ ಪರಿಸರದ ರೈತರು ಕಳೆದ 3 ವರ್ಷಗಳಿಂದ ವರ್ಷದಲ್ಲಿ ಒಂದು ಬೆಳೆಯನ್ನು ಕೂಡ ಬೆಳೆಯಲು ಸಾಧ್ಯವಾಗಿಲ್ಲ. ಬಾವಿ ನೀರು ಉಪ್ಪು
ಕಲ್ಕೇರಿ, ಚಿತ್ತೇರಿಮಕ್ಕಿ ಪರಿಸರದ ಗದ್ದೆಗಳಿಗೆ ಮಾತ್ರವಲ್ಲ ಅಲ್ಲಿನ ಸುಮಾರು 25-30 ಮನೆಗಳ ಬಾವಿ ನೀರು ಕೂಡ ಬೇಸಗೆಯಲ್ಲಿ ಉಪ್ಪು ನೀರಾಗಿರುತ್ತದೆ. ಇದರಿಂದ ವೈಶಾಖದಲ್ಲಿ ಭಾರೀ ಸಮಸ್ಯೆ ಅನುಭವಿಸುವಂತಾಗಿದೆ. ಇದಕ್ಕೆ ಕಲ್ಕೇರಿ, ಚಿತ್ತೇರಿಮಕ್ಕಿಯಿಂದ ಆರಂಭಗೊಂಡು, ಈಗ ನಿರ್ಮಾಣವಾಗಿರುವ ರಾಜಾಡಿ ಕಿಂಡಿ ಅಣೆಕಟ್ಟಿನವರೆಗೆ ನದಿ ದಂಡೆ ನಿರ್ಮಾಣವಾದರೆ ಈ ಸಮಸ್ಯೆ ಪರಿಹಾರವಾಗಬಹುದು ಎನ್ನುವುದು ಸ್ಥಳೀಯರಾದ ಸಂದೀಪ್ ಅವರ ಅಭಿಪ್ರಾಯ.
Related Articles
ಇಲ್ಲಿನ ಗದ್ದೆಗಳು ಹಡಿಲು ಬೀಳಲು ಹಾಗೂ ಗದ್ದೆಗಳಿಗೆ ಉಪ್ಪು ನೀರು ಬರುವಂತಾಗಲು ಎರಡು ಪ್ರಮುಖ ಕಾರಣಗಳಿವೆ. ಮೊದಲಿಗೆ ಕುಂದಾಪುರ – ಬೈಂದೂರು ಹೆದ್ದಾರಿ ಕಾಮಗಾರಿ ವೇಳೆ ರಾಶಿ ಹಾಕಲಾದ ಭಾರೀ ಪ್ರಮಾಣದ ಮಣ್ಣು ಕೊಚ್ಚಿಕೊಂಡು ಕಲ್ಕೇರಿ – ಚಿತ್ತೇರಿಮಕ್ಕಿ ಭಾಗದ ಗದ್ದೆಗಳಿಗೆ ಬಂದಿದೆ. ಆ ಬಳಿಕ ಇದನ್ನು ಐಆರ್‌ಬಿಯವರು ತೆರವು ಮಾಡಿದರೂ, ಅದಿನ್ನು ಪೂರ್ತಿಯಾಗಿ ಪರಿಹಾರವಾದಂತಿಲ್ಲ. ಇದಲ್ಲದೆ ರಾಜಾಡಿ ವ್ಯಾಪ್ತಿಗೆ ಅನುಕೂಲವಾಗುವಂತೆ 4.44 ಕೋ. ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದ್ದು, ಅದರ ಕಾಮಗಾರಿ ವೇಳೆ ತೆಗೆಯಲಾದ ಮಣ್ಣು ರಾಶಿ ಹಾಕಲಾಗಿದ್ದು, ಇದು ತಡೆಗೋಡೆ ನಿರ್ಮಾಣ ಮಾಡಿದಂತಾಗಿತ್ತು. ಇದರಿಂದ ಉಬ್ಬರದ ಸಮಯದಲ್ಲಿ ಆ ಗದ್ದೆಗಳಿಗೆ ಉಪ್ಪು ನೀರು ಪ್ರವೇಶಿಸುತ್ತದೆ. ಇದಕ್ಕೆ ತಡೆಗೋಡೆ, ನದಿದಂಡೆ ಅಥವಾ ಬಂಡ್ ನಿರ್ಮಿಸಿದರೆ ಈ ಸಮಸ್ಯೆ ಪರಿಹಾರವಾಗಬಹುದು ಎನ್ನುವುದು ಈ ಭಾಗದ ರೈತರ ಅಭಿಪ್ರಾಯವಾಗಿದೆ.
Advertisement
ಕೇಳುವವರೇ ಇಲ್ಲಉಪ್ಪು ನೀರಿನ ಸಮಸ್ಯೆ ಬಗ್ಗೆ ಅನೇಕ ಬಾರಿ ಶಾಸಕರಿಂದ ಹಿಡಿದು ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಕೊಟ್ಟಿದ್ದೇವೆ. ಆದರೆ ಯಾವುದೇ ಸ್ಪಂದನೆ ಇಲ್ಲ. ಓಟು ಕೇಳಲು ಮಾತ್ರ ಮನೆ ಕಡೆಗೆ ಬರುತ್ತಾರೆ. ಸಂಕಷ್ಟ ಕೇಳಲು ಯಾರೂ ಇಲ್ಲ. ಗದ್ದೆ ವ್ಯವಸಾಯ ಮಾಡಲು ಆಗುತ್ತಿಲ್ಲ. ಬೇಸಗೆಯಲ್ಲಿ ಬಾವಿ ನೀರು ಎಲ್ಲ ಉಪ್ಪು. ಈ ವರ್ಷವಾದರೂ ನದಿ ದಂಡೆ ನಿರ್ಮಿಸಿಕೊಡಲಿ.
– ಸುರೇಶ್ ಗಾಣಿಗ ಕಲ್ಕೇರಿ, ಸ್ಥಳೀಯರು ನದಿ ದಂಡೆ ನಿರ್ಮಾಣಕ್ಕೆ ಪ್ರಯತ್ನ
ತಲ್ಲೂರು ಗ್ರಾಮದ ಕಲ್ಕೇರಿ, ಚಿತ್ತೇರಿಮಕ್ಕಿ ಪರಿಸರದಲ್ಲಿ ಕೃಷಿಗೆ ಅನುಕೂಲವಾಗುವಂತೆ ನದಿದಂಡೆ ಬೇಡಿಕೆ ಬಗ್ಗೆ ಗಮನದಲ್ಲಿದೆ. ರಾಜಾಡಿಯಲ್ಲಿ ಈಗಾಗಲೇ 4.44 ಕೋ.ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, ಇದರಿಂದ ರಾಜಾಡಿ ಭಾಗದ ಅನೇಕ ಮಂದಿ ರೈತರ ಉಪ್ಪು ನೀರಿನ ಸಮಸ್ಯೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ನದಿ ದಂಡೆ ನಿರ್ಮಾಣಕ್ಕೆ ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು.
– ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು ಪ್ರಶಾಂತ್ ಪಾದೆ