ಕುಂದಾಪುರ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಬೇಕಾದ ಬಸ್‌ಗಳು ಶಾಸ್ತ್ರಿ ಸರ್ಕಲ್‌ನ ಫ್ಲೈ ಓವರ್‌ಗೆ ಸುತ್ತು ಹಾಕಬೇಕಾದ್ದು ಅನಿವಾರ್ಯ ಎಂಬ ಸ್ಥಿತಿ ಬಂದಿದೆ.
ಫ್ಲೈ ಓವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದರ ಜತೆಗೆ ಅಂಡರ್‌ಪಾಸ್, ಸಂಪರ್ಕ ಕೂಡು ರಸ್ತೆ ಇತ್ಯಾದಿ ಕಾಮಗಾರಿಗಳೂ ನಡೆಯುತ್ತಿವೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶಿಕೆ ಸ್ಥಳದಲ್ಲಿಯೇ ಫ್ಲೈ ಓವರ್‌ನ ಇಳಿರಸ್ತೆ ಮುಕ್ತಾಯವಾಗುವ ಕಾರಣ ಅಲ್ಲಿ ಇನ್ನೊಂದು ರಸ್ತೆಯ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪ್ರವೇಶಕ್ಕೆ ಮೈಲಾರ ಸುತ್ತಿ ಕೊಂಕಣಕ್ಕೆ ಬಂದಂತೆ ಆಗುತ್ತದೆ.
ಮಂಗಳೂರು, ಉಡುಪಿ ಕಡೆಯಿಂದ ಬರುವ ಬಸ್‌ಗಳು ಎಪಿಎಂಸಿವರೆಗೆ ಹೋಗಿ ಅಲ್ಲಿ ಸುತ್ತು ಹಾಕಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಪ್ರವೇಶಿಸಬೇಕು. ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಬೈಂದೂರು, ಕಾರವಾರ, ಹುಬ್ಬಳ್ಳಿ ಕಡೆಗೆ ಹೋಗುವ ಬಸ್‌ಗಳು ಮತ್ತೆ ಕುಂದಾಪುರ ನಗರದ ಕಡೆಗೆ ಬಂದು ಶಾಸ್ತ್ರಿ ಸರ್ಕಲ್ ವರೆಗೆ ಬಂದು ಅಲ್ಲಿ ಫ್ಲೈ ಓವರ್ ಅಡಿಯಿಂದ ಸರ್ವಿಸ್ ರಸ್ತೆಯಲ್ಲಿ ಸಾಗಿ ಬೈಂದೂರು ಮಾರ್ಗವನ್ನು ಸೇರಿಕೊಳ್ಳಬೇಕು. ಇದರಿಂದಾಗಿ ಅನವಶ್ಯ ಸುತ್ತಾಟ ನಡೆಯುತ್ತಿದೆ. ಇದು ಸಮಯ, ಡೀಸೆಲ್ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.
ಎಪಿಎಂಸಿ ಬಳಿ ಈಗ ರಸ್ತೆ ಮುಕ್ತವಾಗಿದ್ದು ಮುಂದಿನ ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣವಾದಾಗ ಅಲ್ಲೂ ಬೇಲಿ ಹಾಕಿದರೆ ಸಂಗಂವರೆಗೆ ಹೋಗಿ ಬರಬೇಕಾಗುತ್ತದೆ. ಆಗ ಸಂಗಂನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಸುತ್ತಾಟ ಅನಿವಾರ್ಯ ಈ ಸಮಸ್ಯೆ ಕುರಿತು “ಉದಯವಾಣಿ’ ಈ ಹಿಂದೆಯೇ ಬೆಳಕು ಚೆಲ್ಲಿತ್ತು. ಪ್ರಸ್ತುತ ಸರ್ವಿಸ್ ರಸ್ತೆಯೇ ಮುಖ್ಯ ಹೆದ್ದಾರಿ ಆದ ಕಾರಣ ಏಕಮುಖ ಸಂಚಾರವಿದೆ. ಈ ಕಾರಣದಿಂದ ಸುತ್ತಾಟ ಅನಿವಾರ್ಯ. ಫ್ಲೈಓವರ್ ಕೆಲಸ ಆದ ಬಳಿಕ ಸರ್ವಿಸ್ ರಸ್ತೆಯಲ್ಲಿ ಏಕಮುಖ ಸಂಚಾರ ಕಾನೂನು ಇರುವುದಿಲ್ಲ. ಹಾಗಾಗಿ ಸಮಸ್ಯೆಯಾಗದು ಎನ್ನುವ ನಿರೀಕ್ಷೆ ಇಡಲಾಗಿದೆ.
ಬಸ್ ನಿಲ್ದಾಣದಿಂದ ಹೈವೇಗೆ ನೇರ ಸಂಪರ್ಕ ನೀಡಿದರೆ ಅಪಘಾತ ಆಗುವ ಸಂಭವ ಕೂಡ ಇದೆ. ಆದ್ದರಿಂದ ಈ ಕುರಿತಾಗಿ ಪರಿಣತರಿಂದ ವರದಿ ಸಿದ್ಧಪಡಿಸಿಯೇ ವ್ಯವಸ್ಥೆ ಸುಗಮ ಮಾಡಬೇಕಿದೆ. ಹೆದ್ದಾರಿ ಕಾಮಗಾರಿಯ ವೇಗ ಚುರುಕುಗೊಳಿಸಬೇಕಿದೆ. ಬಸ್ರೂರು ಮೂರುಕೈ, ವಿನಾಯಕ ಬಳಿ, ಗಾಂಧಿ ಮೈದಾನ ಬಳಿ, ಕೆಎಸ್‌ಆರ್‌ಟಿಸಿ ಬಳಿ ಕಾಮಗಾರಿ ಬಾಕಿಯಿದ್ದು ಇವಿಷ್ಟೂ ಕಡೆ ಏಕಕಾಲದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳದೇ ಇದ್ದರೆ ಗುತ್ತಿಗೆದಾರ ಕಂಪನಿ ಮಾರ್ಚ್‌ನಲ್ಲಿ ಮುಗಿಸುತ್ತೇವೆ ಎಂದು ನೀಡಿದ ಭರವಸೆ ಸುಳ್ಳಾಗಲಿದೆ. ಮತ್ತೂಮ್ಮೆ ಟ್ರೋಲ್ ಆಗುವ ಸಂಭವ ಇದೆ. ಯಾವ ಮಾರ್ಚ್ ಎಂದೇ ಹೇಳದ ಕಾರಣ ಭರವಸೆ ನೀಡಿದ ಸಂಸದರಂತೂ ಪಾರಾಗಬಹುದು.
ಸರಿಪಡಿಸಲಿ
ಬಸ್ ನಿಲ್ದಾಣದಿಂದ ಸರ್ವಿಸ್ ರಸ್ತೆ ಮೂಲಕ ಹೆದ್ದಾರಿಗೆ ಸಂಪರ್ಕ ಕೊಡಲಿ. ಸುತ್ತು ಬಳಸು ರಸ್ತೆ ಅನವಶ್ಯವಾಗಿದೆ.
– ಬಸಪ್ಪ ಲಮಾಣಿ, ಕೆಎಸ್‌ಆರ್‌ಟಿಸಿ ಚಾಲಕ