ಉಡುಪಿ: ಕುಂದಾಪುರ ಕನ್ನಡ ಮಾತನಾಡಲು ಅಹಂ ಬಿಡಬೇಕು. ಇದು ಬದುಕಿನ ಭಾಷೆ, ಉದ್ಯಮದ ಭಾಷೆಯಲ್ಲ. ಇದೇ ಕಾರಣದಿಂದ ಇದು ಇಂದಿಗೂ ಜೀವಂತವಾಗಿದೆ ಎಂದು ಎಂಜಿಎಂ ಕಾಲೇಜಿನ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ತಿಳಿಸಿದ್ದಾರೆ.
ಅವರು ಗುರುವಾರ ಎಂಜಿಎಂ ಕಾಲೇಜಿನ ಕನ್ನಡ ವಿಭಾಗ ಹಾಗೂ ಪತ್ರಿಕೋದ್ಯಮ ವಿಭಾಗದ ಜಂಟಿ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಆಟಿ ಅಮಾವಾಸ್ಯೆಯಾದ ಕಾರಣ ಹಾಲೆ ಮರದ ಕೆತ್ತೆ ಗುದ್ದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆ ಮೇಲಿದ್ದ ಗಣ್ಯರಿಗೆ ಮುಟ್ಟಾಳೆ ವಿತರಿಸುವ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.
ಕನ್ನಡದ ಉಳಿವಿಗೆ ಕುಂದಾಪುರ ಕನ್ನಡದ ಕೊಡುಗೆ ಅಪಾರ. ಇದು ಕನ್ನಡದ ಸಮೃದ್ಧ ಭಾಷೆ. ಈ ಮಣ್ಣಿನಲ್ಲಿ ವಿಶೇಷ ಗುಣವಿರುವುದರಿಂದಲೇ ಡಾ| ಶಿವರಾಮ ಕಾರಂತರ ಮೂಕಜ್ಜಿ ಕನಸ್ಸಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಈ ಭಾಷೆಯನ್ನು ಉಳಿಸಿಕೊಂಡ ಹೋಗಬೇಕಾದ ಅವಶ್ಯವಿದೆ ಎಂದರು.
ಭಾಷೆಯ ಬೆಳವಣಿಗೆಗೆ ಅಕಾಡೆಮಿ ಅನಿವಾರ್ಯವಲ್ಲ. ತುಳು ಸೇರಿದಂತೆ ಇತರೆ ಭಾಷೆ ಹಾಗೂ ಕಲೆಗಳಿಗೆ ಅಕಾಡೆಮಿ ಸ್ಥಾಪನೆ ಮಾಡಿದ್ದರೂ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ. ಅದಕ್ಕಾಗಿ ನಮ್ಮ ಮಕ್ಕಳಿಗೆ ಮೊದಲು ಭಾಷೆ ಕಲಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂಜಿಎಂ ಕಾಲೇಜಿನ ಪ್ರಾಂಶು ಪಾಲ ಡಾ| ಎಂ.ಜಿ. ವಿಜಯ ಮಾತನಾಡಿ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಮಾತೃ ಭಾಷೆ ಮರೆಯಬಾರದು. ಭಾಷೆಯ ಮಹತ್ವ ತಿಳಿದುಕೊಂಡು ಪ್ರತಿಯೊಬ್ಬರೂ ವ್ಯವಹರಿಸಬೇಕೆಂದು ಸಲಹೆ ನೀಡಿದರು.
ಕನ್ನಡ ವಿಭಾಗ ಮುಖ್ಯಸ್ಥ ಡಾ| ಪುತ್ತಿ ವಸಂತ ಕುಮಾರ್, ಪತ್ರಿಕೋದ್ಯಮ ವಿಭಾಗ ಉಪನ್ಯಾಸಕರಾದ ಮಂಜುನಾಥ್ ಕಾಮತ್, ಸುಚೇತ್ ಕೋಟ್ಯಾನ್ ಉಪಸ್ಥಿತರಿದ್ದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಲಕ್ಷ್ಮೀನಾರಾಯಣ ಕಾರಂತ ಪ್ರಾಸ್ತಾವಿಸಿದರು. ವಿದ್ಯಾರ್ಥಿಗಳಾದ ವೈಭವ್ ವಂದಿಸಿದರು. ನವ್ಯಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.