Advertisement

ಹೆದ್ದಾರಿಯಿಂದ ನಗರಕ್ಕೆ ಪ್ರವೇಶ: ಸಮಿತಿ ರಚನೆ

07:35 PM Oct 21, 2021 | Team Udayavani |

ಕುಂದಾಪುರ: ಇಲ್ಲಿನ ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶಿಸಿಲು ಒಂದೇ ಒಂದು ಪ್ರವೇಶ ಅವಕಾಶ ನೀಡದ ಕುರಿತು ಸತತ ಬೇಡಿಕೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜನಪ್ರತಿನಿಧಿಗಳು, ಸಾರ್ವಜನಿಕರ ಸತತ ಬೇಡಿಕೆಯನ್ನು ನಿರ್ಲಕ್ಷಿಸುತ್ತಿದ್ದ ಹೆದ್ದಾರಿ ಇಲಾಖೆಗೆ ಈ ಮೂಲಕ ಜಿಲ್ಲಾಧಿಕಾರಿಗಳು ಕಠಿನ ನಿಲುವು ತಳೆದು ಜನಪರ ಕಾಳಜಿ ಮೆರೆದಿದ್ದಾರೆ.

Advertisement

ಆದೇಶ:

ಅ.21ರಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಅವರು ಹೊರಡಿಸಿದ ಆದೇಶದಲ್ಲಿ, ಕುಂದಾಪುರ ಫ್ಲೈಓವರ್‌ಗೆ ಪ್ರವೇಶ ನಿರ್ಗಮನಕ್ಕೆ ಅವಕಾಶ ನೀಡುವ ಬಗ್ಗೆ ವಿವಿಧ ಜನಪ್ರತಿನಿಧಿ ಗಳಿಂದ, ಸಾರ್ವಜನಿಕರಿಂದ ಅಹವಾಲು ಸ್ವೀಕೃತವಾಗುತ್ತಿದ್ದು ಈ ಬಗ್ಗೆ ಪತ್ರಿಕೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಗಳು ಕೇಳಿ ಬರುತ್ತಿವೆ. ಅ.15ರಂದು ಸ್ಥಳ ತನಿಖೆ ನಡೆಸಿದಾಗ, ಸಾರ್ವಜನಿಕರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ಪೇಟೆಗೆ ಸಂಪರ್ಕವಿಲ್ಲದೇ ತೊಂದರೆ ಯಾಗುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳು ಪರಸ್ಪರ ಸಂಪರ್ಕ ಸಾಧಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಸಮಸ್ಯೆ ಯನ್ನು ಬಗೆಹರಿಸಿ ಹೆದ್ದಾರಿಯಿಂದ ಕುಂದಾಪುರ ಪೇಟೆಗೆ ಸಂಪರ್ಕ ಕಲ್ಪಿಸಲು ಸಮಿತಿ ರಚಿಸಲಾಗಿದೆ.

ಈ ಸಮಿತಿ ಸ್ಥಳ ಪರಿಶೀಲನೆ ನಡೆಸಿ, ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ, ಸಭೆ ನಡೆಸಿ, ಜನ ಪ್ರತಿನಿಧಿ ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆದ್ದಾರಿಯಿಂದ ನಗರ ಪ್ರವೇಶಕ್ಕೆ ಸಂಪರ್ಕ ಕಲ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅ.30ರ ಒಳಗೆ ಸೂಕ್ತ ವರದಿ ಸಲ್ಲಿಸಬೇಕು ಎಂದು ವಿವರಿಸಲಾಗಿದೆ.

ಮನವಿ:

Advertisement

ಪುರಸಭೆ ಅಧ್ಯಕ್ಷರು, ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಪ್ರವೇಶಾವಕಾಶ ನೀಡಬೇಕೆಂದು ಕೇಳಿದ್ದರು. ಸಾರ್ವಜನಿಕರು ಪುರಸಭೆ ಹಾಗೂ ಜಿಲ್ಲಾಧಿಕಾರಿಗಳ ಬಳಿ ಒತ್ತಾಯಿ ಸಿದ್ದರು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾತ್ರ ಇದೆಲ್ಲ ಮನವಿಗಳಿಗೆ ಬೆಲೆಯೇ ನೀಡಿರಲಿಲ್ಲ.

ದೂರ ಮಿತಿ:

ಬಸ್ರೂರು ಮೂರುಕೈಯಿಂದ ಉಡುಪಿ ಕಡೆಗೆ ಹೋಗುವಾಗ ಬಾಷಾ ಟ್ರಾನ್ಸ್‌ಪೊàರ್ಟ್‌ ಬಳಿ ಹೆದ್ದಾರಿಗೆ ಸರ್ವಿಸ್‌ ರಸ್ತೆಯಿಂದ ಸಂಪರ್ಕ ಕಲ್ಪಿಸಲಾಗಿದೆ. ಫ್ಲೈಓವರ್‌ ಮುಗಿದು ಹೆಚ್ಚು ಅಂತರ ಇಲ್ಲದೇ ಈ ಅವಕಾಶ ನೀಡಲಾಗಿದೆ. ಇಲ್ಲಿ ಈವರೆಗೆ ಯಾವುದೇ  ಅಪಘಾತಗಳು ಸಂಭವಿಸಿಲ್ಲ. ಇದೇ ಮಾದರಿಯಲ್ಲಿ ಎಲ್‌ಐಸಿ ರಸ್ತೆ ಬಳಿಯೂ ಅವಕಾಶ ನೀಡಬೇಕು ಎನ್ನುವುದು ಬೇಡಿಕೆ. ಫ್ಲೈಓವರ್‌ ಹಾಗೂ ಅಂಡರ್‌ಪಾಸ್‌ ಮಧ್ಯೆ ಇಲ್ಲಿ ಸಾಕಷ್ಟು ಅಂತರ ಇದ್ದು ಏಕಮುಖ ಸಂಚಾರಕ್ಕೆ ಅವಕಾಶ ನೀಡಿದರೆ ಸಮಸ್ಯೆಯಾಗದು ಎನ್ನುವುದು ಅನುಭವಿಗಳ ಅಭಿಮತ.

ಸುದಿನ ವರದಿ :

ಶಾಸ್ತ್ರಿ ಸರ್ಕಲ್‌ ಬಳಿ ಕಾಲೇಜುಗಳು, ವಡೇರಹೋಬಳಿಯಲ್ಲಿ 15ರಷ್ಟು ಸರಕಾರಿ ಕಚೇರಿಗಳು, ಶಾಲೆಗಳು, ಕಲ್ಯಾಣ ಮಂಟಪಗಳು ಇದ್ದು ನಗರದೊಳಗೆ ಪ್ರವೇಶಕ್ಕೆ ಇರುವ ಏಕೈಕ ಅವಕಾಶ ಎಲ್‌ಐಸಿ ಬಳಿ ಹೆದ್ದಾರಿಯನ್ನು ತೆರೆಯುವುದು. ಅಪಘಾತಗಳು ಆಗದ ರೀತಿಯಲ್ಲಿ ಸಜ್ಜುಗೊಳಿಸಬೇಕು. ಅದಿಲ್ಲವಾದರೆ ಹಂಗಳೂರು ಪಂ. ವ್ಯಾಪ್ತಿಯಲ್ಲಿ ನೀಡಿದ ಪ್ರವೇಶಿಕೆಯಿಂದ ಕುಂದಾಪುರಕ್ಕೆ ಬರಬೇಕಾಗುತ್ತದೆ. ಅಲ್ಲಿ ತಿರುವು ತಪ್ಪಿದರೆ ಎಪಿಎಂಸಿ ಬಳಿ ಹೆದ್ದಾರಿಯಿಂದ ಇಳಿಯ ಬೇಕಾಗುತ್ತದೆ. ಆಗ ನಗರ ಪ್ರವೇಶಕ್ಕೆ ಗೊಂದಲ ಆಗುತ್ತದೆ. ಇದರಿಂದ ಕುಂದಾಪುರ ನಗರದೆಡೆಗೆ ಬರುವ ಜನರ ಸಂಖ್ಯೆಯಲ್ಲಿ ಇಳಿತವಾಗಿ ವ್ಯಾಪಾರ, ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ ಎಂದು “ಉದಯವಾಣಿ’ “ಸುದಿನ’ ಸತತ ವರದಿ ಮಾಡಿತ್ತು.

ಸಮಿತಿ : ಸಹಾಯಕ ಕಮಿಷನರ್‌ ಅಧ್ಯಕ್ಷರಾಗಿ, ಪೊಲೀಸ್‌ ಉಪಾಧೀಕ್ಷಕರು, ಯೋಜನಾ ನಿರ್ದೇಶಕರು, ಪ್ರಾದೇಶಿಕ ಸಾರಿಗೆ ಅಧಿಕಾರಿ, ತಹಶೀಲ್ದಾರ್‌ ಸದಸ್ಯರಾಗಿ, ಪುರಸಭೆ ಮುಖ್ಯಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಪತ್ರದ ಜತೆಗೆ ಸಚಿವೆ ಶೋಭಾ ಕರಂದ್ಲಾಜೆಯವರು ಹೆದ್ದಾರಿಯಿಂದ ನಗರಕ್ಕೆ ಪ್ರವೇಶ ಕಲ್ಪಿಸಬೇಕೆಂದು ಬರೆದ ಪತ್ರದ ಪ್ರತಿಯನ್ನೂ ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next