ಕುಂದಾಪುರ: ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿ ಭಾನುವಾರ(ಆ.18) ಸಂಜೆ ಗಾಂಜಾ ನಶೆಯಲ್ಲಿದ್ದ ಎನ್ನಲಾದ ಯುವಕರ ತಂಡವೊಂದು ತಲ್ವಾರ್, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಪರಿಣಾಮ ನಾಲ್ಕೈದು ಜನರು ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಘಟನೆಯ ವಿವರ:
ದೂರುದಾರರಾದ ಅಶೋಕ(44ವರ್ಷ) ವಕ್ವಾಡಿ ಎಂಬವರು ತಮ್ಮ ಸ್ನೇಹಿತರಾದ ಚಂದ್ರಶೇಖರ, ಸುಧಾಕರ ಮತ್ತು ವಿಜಯ ಅವರೊಂದಿಗೆ ಭಾನುವಾರ ಮಧ್ಯಾಹ್ನ ವಕ್ವಾಡಿಯ ಬಾರ್ ನಲ್ಲಿ ಊಟ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಪಕ್ಕದ ಕ್ಯಾಬಿನ್ ನಲ್ಲಿ ಗಣೇಶ ಕುಂಭಾಶಿ, ಎಡ್ವರ್ಡ್, ಆದರ್ಶ, ಇಲಿಯಾಸ್, ಗೋವರ್ಧನ, ಪುನಿತ್ ಹಾಗೂ ಇತರರು ಊಟ ಮಾಡುತ್ತಿದ್ದರು.
ದೂರುದಾರ ಅಶೋಕ್ ಬಾರ್ ಹೊರಗೆ ಬರುತ್ತಿರುವಾಗ ಚಂದ್ರಶೇಖರ್ ಮತ್ತು ಎಡ್ವರ್ಡ್ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಸಂಜೆ 6ಗಂಟೆಗೆ ಸುಧಾಕರನಿಗೆ ಆದರ್ಶ ಎಂಬಾತ ಕರೆ ಮಾಡಿ ನೀವು ಎಲ್ಲಿದ್ದೀರಿ, ಅಲ್ಲಿಗೆ ಬಂದು ಮಾತನಾಡುತ್ತೇವೆ ಎಂದು ಹೇಳಿದ್ದ. ಅದಕ್ಕೆ ಸುಧಾಕರ ವಕ್ವಾಡಿಯ ಗುರುಕುಲ ಶಾಲೆಯ ಸೇತುವೆ ಸಮೀಪ ಇರುವುದಾಗಿ ತಿಳಿಸಿದ್ದ.
ವಿಷಯ ತಿಳಿದ ಆರೋಪಿತರಾದ ಎಡ್ವರ್ಡ್, ಗಣೇಶ ಕುಂಭಾಶಿ, ಆದರ್ಶ, ಶಶಿಕಾಂತ, ಇಲಿಯಾಸ್, ಗೋವರ್ಧನ, ಪುನೀತ, ತರುಣ, ಸುಶಾಂತ್, ಹರ್ಷ, ವಿಘ್ವೇಶ್ ನಾಲ್ಕೈದು ಬೈಕ್ ನಲ್ಲಿ ಬಂದು, ಎಡ್ವರ್ಡ್ ತಲ್ವಾರ್ ನಿಂದ ಯದ್ವಾತದ್ವಾ ದಾಳಿ ನಡೆಸಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಉಳಿದ ಆರೋಪಿತರು ಬಿಯರ್ ಬಾಟಲಿ, ಬ್ಯಾಟ್, ವಿಕೆಟ್ ನಿಂದ ಹಲ್ಲೆ ನಡೆಸಿದ್ದರು. ಇದರಿಂದಾಗಿ ವಕ್ವಾಡಿಯ ಚಂದ್ರಶೇಖರ್, ಅಶೋಕ್ ದೇವಾಡಿಗ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ಆಟೋ ರಿಕ್ಷಾದ ಮೇಲೂ ಎಡ್ವರ್ಡ್ ತಲ್ವಾರ್ ನಿಂದ ಹೊಡೆದು ಪುಡಿ ಮಾಡಿದ್ದು, ಉಮೇಶ್ ಎಂಬವರ ಬೈಕ್ ಗೂ ಹೊಡೆದು ಜಖಂಗೊಳಿಸಿರುವುದಾಗಿ ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಕ್ವಾಡಿ, ಗೋಪಾಡಿ ಭಾಗದಲ್ಲಿ ಗಾಂಜಾ, ಡ್ರಗ್ಸ್ ದಂಧೆ ವಿಪರೀತವಾಗಿದ್ದು, ಅಪರಾಧ ಚಟುವಟಿಕೆ ಹೆಚ್ಚಳವಾಗಿದೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರೂ ಕೂಡಾ ಇಲಾಖೆ ಸಮರ್ಪಕ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರಯ ಆರೋಪಿಸಿದ್ದಾರೆ.