Advertisement

ಮತ್ತೆ ಕುಂಟುತ್ತಾ ಸಾಗಿದ ಫ್ಲೈಓವರ್‌ ಕಾಮಗಾರಿ : ಮತ್ತೂಮ್ಮೆ ಹೊಸ ಗಡುವು ನಿರೀಕ್ಷೆ!

02:37 AM Apr 13, 2021 | Team Udayavani |

ಕುಂದಾಪುರ: ದಶಕದಿಂದ ಕುಂಟುತ್ತಾ ಸಾಗಿದ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‌ ಕಾಮಗಾರಿ ಈ ಬಾರಿ ಕೊಟ್ಟ ದಿನಾಂಕದಂದೂ ಮುಗಿಯುವುದು ಅನುಮಾನ ಎನಿಸಿದೆ. 10 ದಿನಗಳ ಅವಧಿಯಲ್ಲಿ ಮುಗಿಸಲಾಗುವುದು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಎ. 1ರಂದು ನಡೆಯಬೇಕಿದ್ದ ಭಜನೆ, ಪ್ರತಿಭಟನೆಯನ್ನು ಕೈ ಬಿಡಲಾಗಿತ್ತು. ಆಗ ನೀಡಿದ್ದ ಕಾರಣ ಜಲ್ಲಿ ಕೊರತೆ. ಈಗ 10 ದಿನಗಳು ಕಳೆದಿದ್ದು, ಪುರಸಭೆ ಸಾಮಾನ್ಯ ಸಭೆಯಲ್ಲಿ ಎ. 15-20ರ ವೇಳೆಗೆ ಮುಕ್ತಾಯವಾಗಲಿದೆ ಎಂದು ಹೊಸ ದಿನಾಂಕ ನೀಡಲಾಗಿತ್ತು. ಮುಂದಿನ ಹೊಸ ದಿನಾಂಕಕ್ಕಾಗಿ ಕಾಯಲಾಗುತ್ತಿದೆ!

Advertisement

ಸಾಮಗ್ರಿ ಕೊರತೆ
ಫ್ಲೈಓವರ್‌ ಕಾಮಗಾರಿ ಪರಿಪೂರ್ಣವಾಗದೇ ಇದ್ದರೂ ಅಂತಿಮ ಹಂತದಲ್ಲಿದೆ. ವಿನಾಯಕ ಥಿಯೇಟರ್‌ ಬಳಿ ಡಾಮರು ಕಾಮ ಗಾರಿ ಆಗಿರಲಿಲ್ಲ. ಈಗ ಒಂದು ಬದಿಗೆ ಡಾಮರು ಹಾಕಲಾಗಿದೆ. ಬೀದಿ ದೀಪ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ಬದಿಯಷ್ಟೇ ಆಗಿದ್ದು ಇನ್ನೊಂದು ಬದಿ ಆರಂಭವೇ ಆಗಿಲ್ಲ. ಒಂದು ಮಾಹಿತಿ ಪ್ರಕಾರ ಸುಮಾರು 50 ಲಕ್ಷ ರೂ.ಗಳ ಸಾಮಗ್ರಿ ಬೇಕಿದ್ದು ಅದರ ಕೊರತೆ ಉಂಟಾಗಿದೆ. ಸಾಮಗ್ರಿ ಪೂರೈಸುವವರು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕಾಮಗಾರಿ ವಿಳಂಬವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಗುತ್ತಿಗೆದಾರ ಸಂಸ್ಥೆಯವರು ಸಮರ್ಪಕವಾಗಿ ಉತ್ತರಿಸುತ್ತಿಲ್ಲ.

ಸರ್ವೀಸ್‌ ರಸ್ತೆ ಅಗೆತ
ಫ್ಲೈಓವರ್‌ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಸರ್ವೀಸ್‌ ರಸ್ತೆಯೇ ಹೆದ್ದಾರಿಯಾಗಿ ಬಳಸ ಲ್ಪಡುತ್ತಿದೆ. ಈ ಇಕ್ಕಟ್ಟಾದ ಸರ್ವಿಸ್‌ ರಸ್ತೆಯಲ್ಲಿ ಈಗ ಚರಂಡಿಗಾಗಿ ಅಗೆದು ಮತ್ತೂ ಕಿರಿ ದಾಗಿಸಲಾಗಿದೆ. ಅಷ್ಟಲ್ಲದೇ ಅರೆಬರೆ ಕಾಮಗಾರಿ ಮಾಡಿ
ಅಗೆದು ಬಿಟ್ಟ ಚರಂಡಿಯನ್ನು ತಿಂಗಳಾದರೂ ಮುಟ್ಟುತ್ತಿಲ್ಲ. ಶೆಲೋಮ್‌ ಹೊಟೇಲ್‌ನಿಂದ ಶ್ರೀದೇವಿ ನರ್ಸಿಂಗ್‌ ಹೋ ರಸ್ತೆಯ ತನಕ ಚರಂಡಿಗಾಗಿ 1 ತಿಂಗಳ ಹಿಂದೆ ಹೊಂಡ ತೆಗೆಯಲಾಗಿದೆ. ಇನ್ನೂ ಇದರಲ್ಲಿ ಕಾಂಕ್ರೀಟ್‌ ಹಾಕಿ ಚರಂಡಿ ಗೋಡೆ ಮಾಡದ ಕಾರಣ ರಾತ್ರಿ ವೇಳೆ ಜನರು ಹಾಗೂ ದ್ವಿಚಕ್ರ ವಾಹನಗಳಿಗೆ ಅಪಾಯ ಸಂಭವಿಸುತ್ತಿದೆ. ದಿವ್ಯ ದರ್ಶಿನಿ ಹೊಟೇಲ್‌ ಬಳಿ ಆಳ ಹೊಂಡ ಮಾಡಲಾಗಿದೆ.

ಕೇಬಲ್‌ ಲೈನ್‌ ಇದೆ, ಪುರಸಭೆಯ ನೀರಿನ ಪೈಪ್‌ಲೈನ್‌ ಇದೆ ಎಂಬ ನೆಪದಲ್ಲಿ ಕಾಮಗಾರಿ ಬಾಕಿ ಇಡ ಲಾಗಿದೆ. ಮತ್ತೂಂದಷ್ಟು ಕಡೆ ಕಾಮಗಾರಿ ಮಾಡಲಾಗಿದೆ. ನವಯುಗ ಸಂಸ್ಥೆಯವರು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿದ ಪ್ರಕಾರ, ಫ್ಲೈಓವರ್‌ ಕಾಮಗಾರಿ ಪೂರ್ಣವಾದ ಬಳಿವೇ ಸರ್ವೀಸ್‌ ರಸ್ತೆಯ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಎಲ್ಲ ಬೇಡಿಕೆಗಳನ್ನೂ ಈಡೇರಿಸಲಾಗುತ್ತದೆ ಎಂದು. ಆದರೆ ಇತ್ತ ಫ್ಲೈಓವರ್‌ ಕೆಲಸವೂ ಆಗಿಲ್ಲ, ಸರ್ವೀಸ್‌ ರಸ್ತೆ ಕೆಲಸಗಳೂ ಆಗಿಲ್ಲ ಎಂಬಂತಾಗಿದೆ. ಫ್ಲೈ ಓವರ್‌ ಕೆಲಸ ಮುಗಿಯುವಾಗ ಮಳೆ ಬರಲಾರಂಭಿಸಿದರೆ ಇತರ ಕೆಲಸಗಳಿಗೆ ಮಳೆಗಾಲ ಮುಗಿಯಲು ಕಾಯಬೇಕು. ಆಮೇಲೆ ಆದರೆ ಆಯಿತು, ಇಲ್ಲದಿದ್ದರೆ ಹೋಯಿತು ಎಂಬಂತಾಗಲಿದೆ.

Advertisement

ಆಮೆ ವೇಗ

ಮಾರ್ಚ್‌ ತಿಂಗಳಲ್ಲಿ ವೇಗವಾಗಿ ನಡೆಯುತ್ತಿದ್ದ ಕಾಮಗಾರಿ ಈಗ ಆಮೆ ಗತಿ ಯಲ್ಲಿ ನಡೆಯುತ್ತಿದೆ. ಹೀಗೇ ಮುಂದುವರಿದರೆ ಮಳೆಗಾಲದಲ್ಲಾದರೂ ಪೂರ್ಣವಾಗುವುದು ಅನುಮಾನ ಎಂಬಂತಾಗಿದೆ. ಈಗಲೇ ಜನ ಮಾರ್ಚ್‌ ಕೊನೆಗೆ ಮುಕ್ತಾಯ ಎಂಬ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಈ ವರ್ಷವೂ ಹಿಂದಿನ ವರ್ಷಗಳಂತೆ ಎಪ್ರಿಲ್‌ ಫ‌ೂಲ್‌ ಮಾಡಿದೆ ಎಂದು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿದ್ದರು. ಅದನ್ನು ಗುತ್ತಿಗೆದಾರ ಸಂಸ್ಥೆಯೂ ನಿಜ ಮಾಡಿದೆ. ಈಗ ಯುಗಾದಿಗೂ ಸಿಹಿ ಬದಲು ಕಹಿಯನ್ನೇ ನೀಡುತ್ತಿದೆ.

ಅರೆಬರೆ ಕಾಮಗಾರಿ
ಚರಂಡಿಗಾಗಿ ರಸ್ತೆ ಅಗೆದಲ್ಲಿ ಮನೆಗಳಿಗೆ ಹೋಗಲು ಅನನುಕೂಲವಾಗುತ್ತಿದೆ. ವೃದ್ಧರು, ಮಕ್ಕಳು ಇರುವ ಮನೆಯ ಆವರಣಗೋಡೆ ಮುಂದೆ ಐದಾರು ಅಡಿ ಆಳದ ಗುಂಡಿ ತೆಗೆದಿಟ್ಟು ಸೂಕ್ತ ಓಡಾಟಕ್ಕೆ ಕಷ್ಟವಾಗುವಂತೆ ಮಾಡಿದ್ದಾರೆ. ಮಾ.16ರಂದು ಗುಂಡಿ ತೆಗೆದಿದ್ದು ಇನ್ನೂ ಅದರ ಕಾಮಗಾರಿ ಕುರಿತು ಗಮನ ಹರಿಸಿಲ್ಲ. ಕಾಮಗಾರಿ ಮಾಡಿದಲ್ಲೂ ಅರೆಬರೆಯಾಗಿದೆ. ಒಟ್ಟಿನಲ್ಲಿ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ.
-ಧೀರಜ್‌ ರಾವ್‌, ಕುಂದಾಪುರ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next