Advertisement

ಕುಂದಾಪುರ ಫ್ಲೈ ಓವರ್‌: ಮುಗಿಯದ ಗೋಳು

09:59 PM Feb 12, 2021 | Team Udayavani |

ಕುಂದಾಪುರ: ಅಂತೂ ಇಂತೂ ಒಂದು ಹಂತಕ್ಕೆ ಬಂದ ಫ್ಲೈಓವರ್‌ ಕಾಮಗಾರಿ ಈಗ ಊರ ಜನರಿಗೆ ಶಾಪವಾಗಿದೆ. ಫ್ಲೈಒವರ್‌ ನಿರ್ಮಾಣ ಹಾಗೂ ಅದಕ್ಕೂ ಮೊದಲು ಸಾರ್ವಜನಿಕರು ಇಟ್ಟ ಬೇಡಿಕೆಗಳು ಈಡೇರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜನಪ್ರತಿನಿಧಿಗಳು ಈ ಕುರಿತು ತಲೆಕೆಡಿಸಿಕೊಂಡಿಲ್ಲ. ಜನರ ದೂರಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಕೆಲವು ಬಾರಿ ಬಂದು ಭರವಸೆ ನೀಡಿದ್ದರೂ ಅದನ್ನು ಈಡೇರಿಸಲಾಗುತ್ತಿಲ್ಲ. ಇದೆಲ್ಲದರಿಂದಾಗಿ ಸಾರ್ವಜನಿಕರು, ವಾಹನ ಚಾಲಕರು ಅಸಹಾಯಕರಾಗಿದ್ದಾರೆ.

Advertisement

ಕಾಮಗಾರಿ :

ಕಳೆದ ಕೆಲ ತಿಂಗಳಿನಿಂದ ಫ್ಲೈಓವರ್‌ ಕಾಮಗಾರಿ ತುಸು ವೇಗದಿಂದ ನಡೆಯುತ್ತಿದೆ. ಪ್ಲೆ„ಓವರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯೂ ಮುಕ್ತಾಯದ ಹಂತ ಬಂದಿದೆ. ಇದೇ ವೇಗ ಅಥವಾ ಇದಕ್ಕಿಂತ ತುಸು ವೇಗದಲ್ಲಿ  ನಡೆದರೂ ಮೇ ಅಥವಾ ಎಪ್ರಿಲ್‌ನಲ್ಲಿಯೇ ಓಡಾಟಕ್ಕೆ ಬಿಟ್ಟುಕೊಡಬಹುದು ಎಂದು ಅಂದಾಜಿಸಲಾಗಿದೆ.

ತೆರೆದಿಲ್ಲ :

ಬಸ್ರೂರು ಮೂರುಕೈ ಅಂಡರ್‌ಪಾಸ್‌ ಕಾಮಗಾರಿ ಪೂರ್ಣವಾಗಿದೆ. ಆದರೆ ವಾಹನಗಳ ಓಡಾಟಕ್ಕೆ ಬಿಟ್ಟುಕೊಟ್ಟಿಲ್ಲ. ಇದಕ್ಕೆ ಕಾರಣ ಫ್ಲೈಓವರ್‌ ಮೇಲೆ ವಾಹನಗಳ ಓಡಾಟ ಆರಂಭವಾಗದೇ ಅಂಡರ್‌ಪಾಸ್‌ ಮೂಲಕ ಬಸ್ರೂರು ಕಡೆಯಿಂದ ಬರುವ ವಾಹನಗಳಿಗೆ ಪ್ರವೇಶ ನೀಡಿದರೆ ವಿನಾಯಕ ಕಡೆಯಿಂದ ಬರುವ ವಾಹನಗಳಿಂದಾಗಿ ಸಂಚಾರ ದಟ್ಟಣೆಯಾಗುತ್ತದೆ. ಈಗ ಸರ್ವಿಸ್‌ ರಸ್ತೆಯೇ ಹೆದ್ದಾರಿಯಾದ ಕಾರಣ ಇಕ್ಕಟ್ಟಾದ ರಸ್ತೆಯಲ್ಲಿ ಲಾರಿ, ಖಾಸಗಿ, ಸರಕಾರಿ ಬಸ್‌ಗಳ್ಳೋ ಅಥವಾ ಇನ್ನಾವುದೋ ವಾಹನ ಹಾಳಾದರೆ, ಅಪಘಾತಕ್ಕೀಡಾದರೆ ಸಂಚಾರ ಅಸಮರ್ಪಕ ಖಚಿತ ಎಂಬಂತಾಗಿದೆ.

Advertisement

ಅವಕಾಶ ಇಲ್ಲ :

ಬಸ್ರೂರು ಮೂರುಕೈ ಅಂಡರ್‌ಪಾಸ್‌, ಟಿಟಿ ರೋಡ್‌ ಪಾದಚಾರಿ ಮಾರ್ಗ ವಾಹನ ಓಡಾಟಕ್ಕೆ ಬಿಟ್ಟಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ ಸ್ಟಾಂಡ್‌ ಬಳಿ ಕ್ಯಾಟಲ್‌ ಪಾಸ್‌ನಲ್ಲಿ ಸಣ್ಣ ವಾಹನಗಳು ಓಡಾಡುತ್ತಿವೆ. ಎಲ್‌ಐಸಿ ಕಚೇರಿ ಎದುರು ರಸ್ತೆ ದಾಟಲು ತಡೆ ಒಡ್ಡಲಾಗಿದೆ. ಇದೆಲ್ಲದರ ಪರಿಣಾಮ ವಿನಾಯಕ ಬಳಿ ಸರ್ವಿಸ್‌ ರಸ್ತೆಗೆ ಹೊಕ್ಕರೆ ಶಾಸ್ತ್ರಿ ಸರ್ಕಲ್‌ ಬಳಿಯೇ ತಿರುವು ಪಡೆಯಬೇಕು. ಎಪಿಎಂಸಿ ಬಳಿ ತಿರುವು ಪಡೆದರೆ ಶಾಸ್ತ್ರಿ ಸರ್ಕಲ್‌ವರೆಗೆ ಬರಲೇಬೇಕು. ಉಳಿದಂತೆ ಎಲ್ಲಿಯೂ ಇನ್ನೊಂದು ಮಗ್ಗುಲಿಗೆ ತೆರಳಲು ಅವಕಾಶ ಇಲ್ಲ.

ಬೇಡಿಕೆ ಈಡೇರಿಲ್ಲ :

ಟಿಟಿ ರೋಡ್‌ ಬದಲು ಬೊಬ್ಬರ್ಯನಕಟ್ಟೆ ಬಳಿ  ಸಣ್ಣ ವಾಹನ ಓಡಾಡುವಂತೆ ಪಾದಚಾರಿ ಮಾರ್ಗವನ್ನು ನೀಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಬೇಡಿಕೆ ಇತ್ತು. ಬಸ್ರೂರು ಮೂರುಕೈ ಅಂಡರ್‌ಪಾಸ್‌ ಬೇಡಿಕೆ ಕೂಡ ಅನಂತರ ಮಂಜೂರಾದುದು. ಅಸಲಿಗೆ ಶಾಸ್ತ್ರಿ ಸರ್ಕಲ್‌ ಬಳಿ ಫ್ಲೈಓವರ್‌ ಇರಲಿಲ್ಲ. ಇಲ್ಲಿ ಬ್ರಹ್ಮಾವರ, ಅಂಬಾಗಿಲು, ಪಡುಬಿದ್ರೆಯಲ್ಲಿ ಮಾಡಿದಂತೆ ಹೆದ್ದಾರಿ ಅಗಲ ಮಾಡಿಕೊಟ್ಟಿದ್ದರೆ ಅನುಕೂಲ ಎಂದೇ ಇತ್ತು. ಆದರೆ ಫ್ಲೈಓವರ್‌ ಏನೋ ಮಂಜೂರಾಯಿತು. ಆ ಕಾರಣದಿಂದಾಗಿಯೇ ಕಾಮಗಾರಿ ವರ್ಷಾನುಗಟ್ಟಲೆ ವಿಳಂಬವಾಯಿತು. ಒಮ್ಮೆ ವಿನಾಯಕ ಬಳಿ ಫ್ಲೈಓವರ್‌ ಏರಿದರೆ ಅನಂತರ ಇಳಿಯುವುದು ಎಪಿಎಂಸಿ ಬಳಿಯೇ. ಈ ಫ್ಲೈಓವರ್‌ ಕುಂದಾಪುರ ನಗರದ ಸಂಪರ್ಕವನ್ನೇ ತಪ್ಪಿಸುವ ಕಾರಣ ಇಲ್ಲಿನ ಜನತೆಗೆ ವರವಾಗುವ ಬದಲಿಗೆ ಶಾಪವಾಗಿದೆ.

ಸುತ್ತು ಬಳಸು ದಾರಿ :

ವಿನಾಯಕ ಬಳಿ ಕೋಡಿಗೆ ಹೋಗುವಲ್ಲಿ ಪ್ರವೇಶಿಕೆ ಇಲ್ಲ. ಇದು ಸಾರ್ವಜನಿಕರ ಬೇಡಿಕೆಯಾಗಿದ್ದು ಅದನ್ನು ಅನುಷ್ಠಾನ ಮಾಡಲಾಗುತ್ತಿಲ್ಲ. ದುರ್ಗಾಂಬಾ ಬಳಿ ಸರ್ವಿಸ್‌ ರಸ್ತೆಗೆ ಹೋಗಲು ಅವಕಾಶ ಇದ್ದು ಸಾಧ್ಯವಾದಷ್ಟಾದರೂ ಅದನ್ನು ವಿನಾಯಕ ಬಳಿಯಲ್ಲಿ ಅಳವಡಿಸಬೇಕೆಂದು ಬೇಡಿಕೆ ಇದೆ. ಕೆಎಸ್‌ಆರ್‌ಸಿಟಿ ಬಳಿಯೂ ಇಂತಹ ಬೇಡಿಕೆ ಇದೆ. ಏಕೆಂದರೆ ಎರಡೂ ಕಡೆ ಹೀಗೆ ದೂರವಾದರೆ ಅನವಶ್ಯವಾಗಿ ವಾಹನಗಳು 4-5 ಕಿ.ಮೀ. ಸುತ್ತಬೇಕಾಗುತ್ತದೆ. ಬಸ್‌ ನಿಲ್ದಾಣಕ್ಕೆ ಹೋಗಬೇಕಾದ ಅನಿವಾರ್ಯ  ಇರುವ ಕಾರಣ ಕೆಎಸ್‌ಆರ್‌ಟಿಸಿ ಪ್ರತಿ ಬಸ್ಸು 1 ಲೀ. ಡೀಸೆಲ್‌ 1 ಸುತ್ತಾಟಕ್ಕಾಗಿ ಈ ಬೆಲೆಯೇರಿದ ಸಮಯದಲ್ಲೂ  ವ್ಯಯಿಸಬೇಕಾಗುತ್ತದೆ. ನಿಗಮಕ್ಕೆ ಲಕ್ಷಾಂತರ  ರೂ. ನಷ್ಟ. ಸುತ್ತಾಟ ಹೆಚ್ಚಿದಂತೆ ರಿಕ್ಷಾ ಬಾಡಿಗೆ ಏರುತ್ತದೆ. ಖಾಸಗಿ ವಾಹನಗಳಿಗೂ  ಸುತ್ತಾಟಕ್ಕೆ ಇಂಧನ ವ್ಯಯವಾಗುತ್ತದೆ.

ನಿರ್ಲಕ್ಷ್ಯ :

ಫ್ಲೈಓವರ್‌ ಕಾಮಗಾರಿ ಕುರಿತು ಕಾಳಜಿ ವಹಿಸ ಬೇಕಾದ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿ ದ್ದಾರೆ ಎಂಬ   ಆರೋಪ ಸಾರ್ವತ್ರಿಕವಾಗಿ  ಕೇಳಿ ಬರುತ್ತಿದೆ.  ಗೆದ್ದರೆ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಬರುತ್ತೇನೆ  ಎಂದವರು ಫ್ಲೈಓವರ್‌ ಕುರಿತು ಪ್ರಶ್ನೆ ಹಾಕಿದಾಗ  ಮುಖ ಕೆಂಪು ಮಾಡುತ್ತಾರೆ. ಕಾಮಗಾರಿಗೆ ವೇಗ  ನೀಡುವ ಮಾತು ದೂರವೇ ಇದೆ. ಹೋರಾಟ  ಗಾರರು  ಅನೇಕ ಪ್ರತಿಭಟನೆ  ಮಾಡಿದ್ದಾರೆ; ಮನವಿ ನೀಡಿದ್ದಾರೆ. ಸ್ಥಳೀಯವಾಗಿ ಅಲ್ಲಲ್ಲಿ ಫ‌ಲಕಗಳನ್ನು ಹಾಕಿ ಫ್ಲೈಒವರ್‌ ಕಾಮಗಾರಿಯ ಕುರಿತು ಅಣಕ ಮಾಡಲಾಗುತ್ತಿದೆ. ಹಾಗಿದ್ದರೂ ಯಾವುದೇ ಜನಪ್ರತಿನಿಧಿಗೆ ಇದರ ಬಿಸಿ ತಟ್ಟಲೇ ಇಲ್ಲ. ಎಲ್ಲ ಬಿಸಿಯೂ ಜನಸಾಮಾನ್ಯರ ಪಾಲಿಗೆ ಮೀಸಲಾಗಿದೆ.

ಫ್ಲೈಓವರ್‌ಗೆ ಹತ್ತುವಲ್ಲಿ ಹಾಗೂ ಇಳಿಯುವಲ್ಲಿ  ಸರ್ವಿಸ್‌ ರಸ್ತೆಗೆ ಹೋಗುವಂತೆ ಸಂಪರ್ಕ ಕಲ್ಪಿಸುವುದು ತಾಂತ್ರಿಕವಾಗಿ ಸಮಸ್ಯೆಯಾಗುತ್ತದೆ. ಆದ್ದರಿಂದ ಸಾರ್ವಜನಿಕರಿಗೂ ತೊಂದರೆಯಾಗದಂತೆ, ವಾಹನಗಳ ಓಡಾಟಕ್ಕೂ ತೊಂದರೆಯಾಗದಂತೆ, ಅಪಘಾತಗಳೂ ಆಗದಂತೆ ಕ್ರಮ ಕೈಗೊಳ್ಳಬೇಕಿದೆ. ಈ ಕುರಿತು ಸಮಾಲೋಚಿಸಲಾಗುವುದು.ಕೆ. ರಾಜು,  ಸಹಾಯಕ ಕಮಿಷನರ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next