Advertisement

ಕುಂದಾಪುರ : ಫ್ಲೈಓವರ್‌ ಅಡಿ ಅಭಿವೃದ್ಧಿಗೆ ಕೂಡಿ ಬರದ ಕಾಲ

02:58 PM Feb 21, 2022 | Team Udayavani |

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯ ಫ್ಲೈ ಓವರ್‌ ಅಡಿಯಲ್ಲಿ ರಾಶಿ ಹಾಕಿದ ಹಳೆ ಸರಕುಗಳ ವಿಲೇವಾರಿ ಇನ್ನೂ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಸೆಪ್ಟೆಂಬರ್‌ ತಿಂಗಳಲ್ಲಿ ನಾಲ್ಕೇ ನಾಲ್ಕು ದಿನದ ಗಡುವು ಪಡೆದ ಗುತ್ತಿಗೆದಾರ ಕಂಪೆನಿ ತಿಂಗಳು ಐದಾ ದರೂ ವಿಲೇವಾರಿ ಮಾಡಿಲ್ಲ. ಆದ್ದರಿಂದ ಫ್ಲೈಓವರ್‌ ಅಡಿಯಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.

Advertisement

ಫ್ಲೈ ಓವರ್‌ ಕಾಮಗಾರಿ ಪೂರ್ತಿಯಾಗಿ ರಾಷ್ಟ್ರೀಯ ಹೆದ್ದಾರಿ ಎಂಬೋ ರಸ್ತೆ ಜನರ ಉಪಯೋಗಕ್ಕೆ ದೊರೆಯಲು ಕಂಪೆನಿ ತೆಗೆದುಕೊಂಡ ಸಮಯ ಬರೋಬ್ಬರಿ ಹತ್ತು ವರ್ಷ. ಇದಕ್ಕಾಗಿ ನಡೆದ ಪ್ರತಿಭಟನೆ, ಮನವಿ ಅದೆಷ್ಟೋ. ಈ ಹಿಂದೆ ಸಹಾಯಕ ಕಮಿಷನರ್‌ ಆಗಿದ್ದ ಭೂಬಾಲನ್‌ ಅವರು ಸೆಕ್ಷನ್‌ 133 ಅಡಿ ಕೇಸು ದಾಖಲಿಸಿ ತೀರ್ಪು ನೀಡಿದಾಗ ಸಂಸ್ಥೆ ಎಚ್ಚೆತ್ತುಕೊಂಡಿತು. ಈ ಹಿಂದೆ ಡಿಸಿಗಳಾಗಿದ್ದ ಪ್ರಿಯಾಂಕಾ ಮೇರಿ ಜೋಸೆಫ್‌, ಜಿ. ಜಗದೀಶ್‌ ಅವರು ಕೂಡ ಕಾಮಗಾರಿ ಬೇಗ ಮುಗಿಸುವಲ್ಲಿ ಬೆವರು ಸುರಿಸಿದ್ದರು!

ಬಾಕಿ
ಹೆದ್ದಾರಿ ಅಂತೂ ಇಂತೂ ಕಳೆದ ವರ್ಷ ಎಪ್ರಿಲ್‌ ವೇಳೆಗೆ ಸಂಚಾರಕ್ಕೆ ಮುಕ್ತವಾಯಿತು. ಆದರೆ ಅರೆಬರೆ ಕಾಮಗಾರಿ ಅಲ್ಲಿಗೇ ಸ್ಥಾಗಿತ್ಯವಾದುದು ಇನ್ನೂ ಮೇಲೇಳಲೇ ಇಲ್ಲ. ಫ್ಲೈ ಓವರ್‌ ಮೇಲೆ ಬೆಳಕೇ ಇಲ್ಲ. ಬೀದಿ ದೀಪಗಳನ್ನು ಅಳವಡಿಸಿಲ್ಲ. ಕಂಬಗಳನ್ನಷ್ಟೇ ನೆಡಲಾಗಿದೆ. ಸಂಪರ್ಕ ನೀಡುವ ವ್ಯವಸ್ಥೆ ಆಗಿಲ್ಲ. ಅತ್ತ ಬೈಂದೂರು ಹೆದ್ದಾರಿ ಕಾಮಗಾರಿ ಬಳಿಕ ನಡೆದರೂ ಬೀದಿದೀಪಗಳನ್ನು ಹಾಕಲಾಗಿದೆ. ಶಿರೂರು, ಬೈಂದೂರು ಹೆದ್ದಾರಿಯಲ್ಲಿ ರಾತ್ರಿ ವೇಳೆ ದೀಪಗಳು ಬೆಳಗುತ್ತವೆ. ಆದರೆ ಕುಂದಾಪುರದ ಪಾಲಿಗೆ ಯಾಕೆ ಕತ್ತಲೆ? ಯಾಕಿಷ್ಟು ಅನಾದರ? ಗೊತ್ತಿಲ್ಲ. ಶಾಸ್ತ್ರಿ ಸರ್ಕಲ್‌ನಲ್ಲಿ ದೀಪಸ್ತಂಭ ಅಳವಡಿಸಿದ್ದರೂ ಅದಕ್ಕೆ ದೀಪ ಹಾಕಿದ್ದು ಪುರಸಭೆ. ಬಿಲ್‌ ಕಟ್ಟಿದ್ದು ಪುರಸಭೆ. ಹೆದ್ದಾರಿ ಹೆಸರಲ್ಲಿ ಟೋಲ್‌ ವಸೂಲಿ ಮಾಡಿದ್ದು ನವಯುಗದ ಸಾಧನೆ.

ದುರಸ್ತಿ
ಸರ್ವಿಸ್‌ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಸರ್ವಿಸ್‌ ರಸ್ತೆಗಳಿಂದ ನಗರದ ಕೂಡುರಸ್ತೆಗಳಿಗೆ ಸಂಪರ್ಕ ಸರಿಪಡಿಸಿಲ್ಲ. ಹೆದ್ದಾರಿ ಬದಿಯ ಚರಂಡಿ ಅವಸ್ಥೆಗೆ ಕಣ್ಣು ಹಾಯಿಸಿಲ್ಲ. ಸ್ವತಃ ಬಿಜೆಪಿ ಅಧ್ಯಕ್ಷರೇ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದಾಗ ಎಚ್ಚೆತ್ತ ಕಂಪೆನಿ ಡಾಮರು ಹಾಕಿದಂತೆ ಮಾಡಿತು. ಪೂರ್ಣ ಹಾಕಲೇ ಇಲ್ಲ. ಸರ್ವಿಸ್‌ ರಸ್ತೆ ಗುಂಡಿಗಳಿಗೆ ಮುಕ್ತಿ ದೊರೆಯಲೇ ಇಲ್ಲ. ಹಾಗಾದರೆ ಪ್ರತೀ ಕೆಲಸಕ್ಕೂ ಪ್ರತಿಭಟನೆಯೇ ಅಸ್ತ್ರವೇ? ಸರಕಾರದಿಂದ ಹಣ ಪಡೆಯುವ, ಟೋಲ್‌ ಮೂಲಕ ವಸೂಲಿ ಮಾಡುವ ಸಂಸ್ಥೆಗೆ ಏನೂ ಬದ್ದತೆ ಇಲ್ಲವೇ? ಶರತ್ತು, ನಿಯಮಗಳು ವಾಹನ ಸವಾರರು ಹಾಗೂ ಸಾರ್ವಜನಕರಿಗೆ ಮಾತ್ರವೇ? ಕೋಟಿಗಟ್ಟಲೆಯ ಕಾಮಗಾರಿ ನಿರ್ವಹಿಸುವ ಕಂಪನಿಗೆ ಇಲ್ಲವೇ? ಈ ಹಿಂದೆ ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆ ನಿರ್ಮಿಸಿದ ಫ್ಲೈ ಓವರ್‌ ಬೆಂಗಳೂರಿನಲ್ಲಿ ಕಳಪೆ ಎಂದು ಚರ್ಚೆಗೆ ಈಡಾಗಿದೆ. ಇಲ್ಲಿ ಅದೇ ಸಂಸ್ಥೆ ಮಾಡಿದ ಕಾಮಗಾರಿ ಕುರಿತು ಇಷ್ಟೆಲ್ಲ ಆಕ್ಷೇಪ ಇದ್ದರೂ ಯಾರೂ ಮಾತಾಡುತ್ತಿಲ್ಲ ಯಾಕೆ?

ಇದನ್ನೂ ಓದಿ : ಕಾರ್ಕಳ: ಅತ್ತೂರು ಜಾತ್ರೆಗೆ ಚಾಲನೆ : ಮರಳಿದ ಜಾತ್ರೆ ವೈಭವ, 400 ಸಂತೆ ಮಾರುಕಟ್ಟೆ ಮಳಿಗೆ

Advertisement

ತ್ಯಾಜ್ಯ
ಏನೇ ಅಭಿವೃದ್ಧಿ ಮಾಡಬೇಕಿದ್ದರೂ ಫ್ಲೈಓವರ್‌ ಅಡಿ ರಾಶಿ ಹಾಕಿದ ತ್ಯಾಜ್ಯ ವಿಲೇ ಆಗಬೇಕು. ನಾಲ್ಕು ದಿನದ ಅವಧಿಯಲ್ಲಿ ತೆರವುಗೊಳಿಸುವ ಭರವಸೆ ನೀಡಿದ ಸಂಸ್ಥೆ ಒಂದಷ್ಟು ತ್ಯಾಜ್ಯ ತೆಗೆದಿದ್ದರೂ ಇನ್ನೂ ಹಳೆವಾಹನ, ಪೈಪ್‌ ಮೊದಲಾದವನ್ನು ಬಾಕಿ ಇಟ್ಟಿದೆ. ಇದನ್ನು ಯಾವಾಗ ತೆರವು ಮಾಡಲಿದೆ ಎನ್ನುವುದು ಸದ್ಯದ ಪ್ರಶ್ನೆ.

ಸದನದಲ್ಲಿ ಪ್ರಶ್ನೆ
ವಿಧಾನಪರಿಷತ್‌ನಲ್ಲಿ ಸದಸ್ಯರಾಗಿದ್ದ ಪ್ರತಾಪಚಂದ್ರ ಶೆಟ್ಟಿ ಅವರು ಫ್ಲೈ ಓವರ್‌ ಅಡಿಯ ತ್ಯಾಜ್ಯ ತೆರವಿನ ಕುರಿತು, ಅಸಮರ್ಪಕ ಕಾಮಗಾರಿ ಕುರಿತು ಪ್ರಶ್ನೆ ಕೇಳಿದ್ದರು. ಇದಕ್ಕೆ ಲೋಕೋಪಯೋಗಿ ಇಲಾಖೆ ಸುಳ್ಳು ಉತ್ತರ ನೀಡಿತ್ತು.

ಎಂಜಿನಿಯರ್‌ ನಿಯೋಗ
ಫ್ಲೈಓವರ್‌ ಅಡಿಯಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂದು ಪುರಸಭೆ ಯೋಚಿಸಿದೆ. ಎಂಜಿನಿಯರ್‌ ಅಸೋಸಿಯೇಶನ್‌ ನಿಯೋಗ ಅಭಿವೃದ್ಧಿ ಯೋಜನೆಯೊಂದನ್ನು ರೂಪಿಸಿ ಜಿಲ್ಲಾಧಿಕಾರಿಗೆ ನೀಡಿದೆ. ಈಗಿನ ಸಹಾಯಕ ಕಮಿಷನರ್‌ ಕೆ. ರಾಜು ಅವರು ಕೂಡ ಫ್ಲೈ ಓವರ್‌ ಅಡಿ ಹೇಗೆ ಜನೋಪಯೋಗಿ ಆಗಿಸಬಹುದು ಎಂಬ ಚಿಂತನೆ ನಡೆಸಿದ್ದಾರೆ. ಡಿವೈಎಸ್‌ಪಿ ಕೆ. ಶ್ರೀಕಾಂತ್‌ ಅವರು ಪಾರ್ಕಿಂಗ್‌ ಮಾಡಲು ಯೋಜಿಸಿದ್ದಾರೆ. ಕಂಬಗಳಿಗೆ ಸುಣ್ಣ ಬಣ್ಣ ಬಳಿದು ಜಾಗೃತಿ ಮಾಹಿತಿ ವಿವರಿಸುವುದು, ಪಾರ್ಕಿಂಗ್‌ಗೆ ಸಜ್ಜುಗೊಳಿಸುವುದು, ಪಾರ್ಕ್‌ ನಿರ್ಮಾಣ ಮಾಡುವುದು ಸೇರಿದಂತೆ ಅನೇಕ ಯೋಜನೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next