ಹೊಸೂರಿನಿಂದ ಹಡವಲಗದ್ದೆ, ಇಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಡೆಗೆ ಸಂಪರ್ಕಿಸುವ ರಸ್ತೆ ಇದಾಗಿದೆ. ಸುತ್ತಮುತ್ತಲಿನ ಬಹುತೇಕ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಿದ್ದರೂ, ಈ ರಸ್ತೆಯ ಸುಮಾರು 2 ಕಿ.ಮೀ. ದೂರದವರೆಗೆ ಕಾಂಕ್ರೀಟೀಕರಣಕ್ಕೆ ಮಾತ್ರ ಮೀನಮೇಷ ಎಣಿಸಲಾಗುತ್ತಿದೆ.
Advertisement
ಯಾವೆಲ್ಲ ಊರುಗಳು?ಹೊಸೂರು ಗ್ರಾಮದ ಈ ರಸ್ತೆಯು ಹಡವಲಗದ್ದೆ ಹಕ್ಲು, ಬರದಕಲ್ಲು, ಹಕ್ಲುಮನೆ, ಹೊಸಿಮನೆ, ಹುಬ್ಬಳಗಡಿ, ಜಕ್ಕನಕಟ್ಟು, ಪುಸ್ಕೇರಿ ಸುಣ್ಣದ ಗುಂಡಿ ಮಾರ್ಗವಾಗಿ ಇಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳನ್ನು ಸಂಪರ್ಕಿಸುತ್ತದೆ. 30ಕ್ಕೂ ಮಿಕ್ಕಿ ಮನೆಗಳು ಇಲ್ಲಿದ್ದು, ಅಂದಾಜು 200ರಷ್ಟು ಜನರಿದ್ದು, ಅವರೆಲ್ಲ ನಿತ್ಯ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಎಸ್ಸಿ-ಎಸ್ಟಿ ಮನೆಗಳು ಇದ್ದು, ಆದರೂ ಈ ರಸ್ತೆಯ ಅಭಿವೃದ್ಧಿಗೆ ಮಾತ್ರ ಕಾಲ ಕೂಡಿ ಬಂದಿಲ್ಲ.
ಸುಮಾರು 2 ಕಿ.ಮೀ. ದೂರದ ಈ ರಸ್ತೆಯ ಕಾಂಕ್ರೀಟೀಕರಣಕ್ಕಾಗಿ ಈ ಭಾಗದ ಜನರು ಕಳೆದ 15 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಈವರೆಗೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಮತ ಕೇಳಲು ಬರುವಾಗ ಈ ಸಲ ನಿಮ್ಮ ರಸ್ತೆ ಮಾಡಿಕೊಡುವ ಅನ್ನುತ್ತಾರೆ. ಗೆದ್ದ ಬಳಿಕ ಇತ್ತ ತಲೆಯೂ ಹಾಕದೇ ನಿರ್ಲಕ್ಷ್ಯ ವಹಿಸುತ್ತಾರೆ ಅನ್ನುವುದು ಇಲ್ಲಿನ ಗ್ರಾಮಸ್ಥರ ಅಳಲು. ಕುಗ್ರಾಮದಂತಿರುವ ಊರು
ಹೊಸೂರಿನಿಂದ ಹಡವಲಗದ್ದೆ ಕಡೆಗೆ ಸಾಗುವ ಈ ಊರು ಒಂದು ರೀತಿಯಲ್ಲಿ ಮೂಲ ಸೌಕರ್ಯಗಳಿಂದ ವಂಚಿತವಾದ ಕುಗ್ರಾಮದಂತಿದೆ. ಮಳೆಗಾಲದಲ್ಲಿ ಮಣ್ಣಿನ ರಸ್ತೆ ಸಂಪೂರ್ಣ ಕೆಸರುಮಯಗೊಂಡರೆ, ಬೇಸಗೆಯಲ್ಲಿ ಧೂಳುಮಯವಾಗಿರುತ್ತದೆ. ಮಳೆಗಾಲದಲ್ಲಿ ರಿಕ್ಷಾ, ಶಾಲಾ ವಾಹನಗಳು ಯಾವುದೂ ಬರುವುದಿಲ್ಲ. 2 ಕಿ.ಮೀ. ದೂರದಿಂದ ನಡೆದುಕೊಂಡು ಬರಬೇಕಾದ ಸ್ಥಿತಿಯಿದೆ. ಇನ್ನೂ ನೆಟ್‌ವರ್ಕ್ ಸಹ ಸಂಪರ್ಕ ವಿಲ್ಲದೇ, ಯಾರಿಗಾದರೂ ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಕರೆದೊಯ್ಯಲು ಇಲ್ಲಿನ ಜನ ಪ್ರಯಾಸ ಪಡಬೇಕಾಗಿದೆ. ಇನ್ನು ಬೇಸಗೆಯಲ್ಲಿ ಇಲ್ಲಿನ ಮನೆಗಳಿಗೆ ನೀರಿನ ಸಮಸ್ಯೆಯೂ ಇದ್ದು, ಇದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ.
Related Articles
ಹೊಸೂರಿನ ನಮ್ಮ ಈ ಊರೇ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ನಾವು ಅನೇಕ ವರ್ಷಗಳಿಂದ ಸಂಬಂಧಪಟ್ಟ ಎಲ್ಲರಿಗೂ ಮನವಿ ಕೊಟ್ಟಿದ್ದೇವೆ. ಆದರೆ ಇನ್ನೂ ಅನುದಾನ ನೀಡಿಲ್ಲ. ಮಳೆಗಾಲದಲ್ಲಿ ತುಂಬಾ ತೊಂದರೆಯಾಗುತ್ತಿದೆ. ವಾಹನಗಳು ಕೆಸರಲ್ಲಿ ಹೂತು, ನಿತ್ಯ ಸಂಕಷ್ಟಪಡುವಂತಾಗಿದೆ. ಆದಷ್ಟು ಬೇಗ ಈ 2 ಕಿ.ಮೀ. ದೂರದ ರಸ್ತೆ ಕಾಂಕ್ರೀಟಿಕರಣವಾಗಲಿ.
– ರತ್ನಾಕರ್ ಶೆಟ್ಟಿ ಹೊಸೂರು, ಸ್ಥಳೀಯರು
Advertisement