Advertisement

ಕುಂದಾಪುರ: ವಲಸೆ ಕಾರ್ಮಿಕನ ಕೊಲೆಯಲ್ಲಿ ಅಂತ್ಯವಾದ ಜಗಳ

12:48 AM May 16, 2023 | Team Udayavani |

ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಗಂಗೊಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಟ್ಟಿನಮಕ್ಕಿಯಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಬಾಗಲಕೋಟೆ ಮೂಲದ ಸಂಗಪ್ಪ ಅಲಿಯಾಸ್‌ ಸಂಗಮೇಶ (42) ಕೊಲೆಯಾದ ವ್ಯಕ್ತಿ. ಈತನೊಂದಿಗೆ ಇದ್ದ ವಲಸೆ ಕಾರ್ಮಿಕ ಆರೋಪಿ ಮಂಡ್ಯ ಮೂಲದ ರಾಜಾ (36)ನನ್ನು ಬಂಧಿಸಲಾಗಿದೆ.

Advertisement

ಘಟನೆ ವಿವರ
ಸಂಗಪ್ಪ ಹಾಗೂ ರಾಜಾ ವಲಸೆ ಕಾರ್ಮಿಕರಾಗಿದ್ದು, ಕುಂದಾಪುರದಲ್ಲಿ ನೆಲೆಸುತ್ತಿದ್ದು ಕೆಲಸಕ್ಕೆ ತೆರಳಿದಲ್ಲಿಯೇ ಉಳಿಯುತ್ತಿದ್ದರು. ಆಲೂರು ಗ್ರಾ.ಪಂ. ವ್ಯಾಪ್ತಿಯ ಕಟ್ಟಿನಮಕ್ಕಿಯ ನಾಗೇಂದ್ರ ಆಚಾರ್ಯ ಅವರು ಗುತ್ತಿಗೆ ಕೆಲಸ ಮಾಡುತ್ತಿದ್ದು ಆಗಾಗ ಅವರ ಕೆಲಸದ ನಿಮಿತ್ತ ರಾಜಾ, ಸಂಗಪ್ಪ ಹಾಗೂ ಸಂಗಡಿಗರು ಬರುತ್ತಿದ್ದರು.

ಕಳೆದ ವಾರವೂ ಮೂರ್ನಾಲ್ಕು ದಿನ ಅವರೊಂದಿಗೆ ಕೆಲಸ ಮಾಡಿದ್ದು, ಶನಿವಾರ ಸಂಬಳ ಪಡೆದು ಕುಂದಾಪುರಕ್ಕೆ ವಾಪಸಾಗಿದ್ದರು. ರವಿವಾರ ಮತ್ತೆ ಕಟ್ಟಿನಮಕ್ಕಿಗೆ ಆಗಮಿಸಿ ನಾಗೇಂದ್ರ ಅವರ ಮನೆ ಎದುರು ನಿರ್ಮಾಣವಾಗುತ್ತಿದ್ದ ಮನೆಯ ಬಳಿ ಶೆಡ್‌ನ‌ಲ್ಲಿ ಉಳಿದಿದ್ದರು.

ಘಟನ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸಂತೋಷ್‌ ಎ. ಕಾಯ್ಕಿಣಿ, ಗಂಗೊಳ್ಳಿ ಠಾಣಾ ತನಿಖಾ ವಿಭಾಗದ ಪಿಎಸ್‌ಐ ಜಯಶ್ರೀ ಹೊನ್ನೂರು, ಕೊಲ್ಲೂರು ಠಾಣೆ ತನಿಖಾ ಪಿಎಸ್‌ಐ ಸುಧಾರಾಣಿ ಹಾಗೂ ಸಿಬಂದಿ ಭೇಟಿ ನೀಡಿದ್ದಾರೆ. ಫಾರೆನ್ಸಿಕ್‌ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗಂಗೊಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮದ್ಯದ ನಶೆಯಲ್ಲಿ ಕೃತ್ಯ
ಈ ವೇಳೆ ವಲಸೆ ಕಾರ್ಮಿಕರು ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ರಾಜಾ ಹಾಗೂ ಸಂಗಪ್ಪ ನಡುವೆ ಚಕಮಕಿ ನಡೆದಿದ್ದು, ಸಂಗಪ್ಪ ಶೆಡ್‌ ಎದುರಿನ ಮನೆ ಪಂಚಾಂಗದ ಮೇಲೆ ಮಲಗಿದ್ದಾಗ ರಾಜಾ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದಾನೆ ಎಂದು ದೂರಲಾಗಿದೆ. ಬಳಿಕ ಅಲ್ಲಿಯೇ ಸಮೀಪದಲ್ಲಿದ್ದ ಮಾಲಕರ ಮನೆಗೆ ಬಂದು ಮಾಹಿತಿ ನೀಡಿದ್ದು, ಆತನನ್ನು ಹಿಡಿದಿಟ್ಟುಕೊಂಡ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next