ಕುಂದಾಪುರ: ಅಡಿಕೆ ಕೊಯ್ಯುವ ವೇಳೆ ಕಬ್ಬಿಣದ ಕೊಕ್ಕೆ ಹೈಟೆನ್ಶನ್ ವಯರ್‌ನ ವಿದ್ಯುತ್ ತಂತಿಗೆ ತಾಗಿ, ವಿದ್ಯುತ್ ಸ್ಪರ್ಶಿಸಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಾಡ ಗ್ರಾಮದ ಕೊನ್ಕೆಯ ಅಂಗಡಿ ಮನೆಯಲ್ಲಿ ಗುರುವಾರ ಸಂಭವಿಸಿದೆ.
ಕೊನ್ಕೆಯ ಅಂಗಡಿ ಮನೆಯ ನಿವಾಸಿ ಭುಜಂಗ ಶೆಟ್ಟಿ (59) ಸಾವನ್ನಪ್ಪಿದವರು. ಅವರು ಗುರುವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ತಮ್ಮದೇ ಮನೆಯ ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಡಿಕೆ ಕೊಯ್ಯುವ ಕಬ್ಬಿಣದ ಕೊಕ್ಕೆಯು ತೋಟದಲ್ಲಿ ಹಾದುಹೋಗುವ ಹೈಟೆನ್ಶನ್ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ತಾಗಿದ ಪರಿಣಾಮ, ಅದರ ಮೂಲಕ ವಿದ್ಯುತ್ ಪ್ರವಹಿಸಿ, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರರನ್ನು ಅಗಲಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲು ಗಂಗೊಳ್ಳಿ ಪೊಲೀಸರು, ಆ್ಯಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಅಬ್ರಾರ್, ಸಫಾನ್ ಸಹಕರಿಸಿದರು. ಘಟನ ಸ್ಥಳಕ್ಕೆ ಗಂಗೊಳ್ಳಿ ಎಸ್‌ಐ ವಿನಯ್ ಹಾಗೂ ಸಿಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.