Advertisement

kundapura constituency; ಕುಂದಾಪುರ- ಮುಚ್ಚಿದ ಶಾಲೆಗಳಲ್ಲಿ ಮತಗಟ್ಟೆ

12:20 PM Apr 22, 2023 | Team Udayavani |

ಕುಂದಾಪುರ: ವಿದ್ಯಾರ್ಥಿ ಕೊರತೆ ಸೇರಿದಂತೆ ಹಲವು ಕಾರಣಕ್ಕೆ ಶಾಲೆಗಳು ಮುಚ್ಚಿದರೂ ಅದೇ ಶಾಲೆಗಳು ಮತಗಟ್ಟೆಗಳಾಗಿ ಕಾರ್ಯಾ ಚರಿಸುವುದರಿಂದ ಚುನಾವಣೆ ಬರುವಾಗ ಕೇವಲ ಒಂದು ದಿನಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದುರಸ್ತಿ ಪಡಿಸಬೇಕಾದ ಸ್ಥಿತಿ ಇದ್ದು, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಚ್ಚಿರುವ 8 ಸರಕಾರಿ ಶಾಲೆಗಳನ್ನು ಚುನಾವಣೆಗಾಗಿ ಮತಗಟ್ಟೆಯಾಗಿಸಲಾಗಿದೆ. ಸಣ್ಣಪುಟ್ಟ ದುರಸ್ತಿ ಕಾರ್ಯ ಮಾಡಿಸಲಾಗಿದೆ.

Advertisement

ಮುಚ್ಚುಗಡೆ
ಕುಂದಾಪುರ ನಗರ ವ್ಯಾಪ್ತಿಯಲ್ಲೇ ಇರುವ ದಶಕಗಳ ಇತಿಹಾಸದ ಖಾರ್ವಿಕೇರಿ ಸರಕಾರಿ ಪ್ರಾಥಮಿಕ ಶಾಲೆಯು ಕಳೆದ ವರ್ಷ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟಿದ್ದು, ಉಪಯೋಗ ಇಲ್ಲದಿರುವ ಕಟ್ಟಡವನ್ನು ಚುನಾವಣೆಗಾಗಿ ಸಿದ್ಧಪಡಿಸಲಾಗಿದೆ. ಹೀಗೆ ಈ ಚುನಾವಣೆ ಮುಗಿದರೆ ಮತ್ತೆ ಕಟ್ಟಡ ಉಪಯೋಗ ಇಲ್ಲದೇ ಮತ್ತೂಂದು ಚುನಾವಣೆಗೆ ಸಿದ್ಧಪಡಿಸಲಾಗುತ್ತದೆ.

ದುರಸ್ತಿ
ಪ್ರಸ್ತುತ ಮತದಾನದ ದೃಷ್ಟಿಯಿಂದ ವಿವಿಧ ಶಾಲೆಗಳನ್ನು ದುರಸ್ತಿ ಪಡಿಸಲಾಗಿದೆ. ಜತೆಗೆ ಕೆಲವೆಡೆ ಶಿಥಿಲಗೊಂಡಿದ್ದ ಬಾಗಿಲುಗಳನ್ನು ಕೂಡ ದುರಸ್ತಿ ಪಡಿಸಿ ಬೀಗ ಹಾಕುವ ಕಾರ್ಯ ಮಾಡಲಾಗಿದೆ. ವಿದ್ಯುತ್‌ ಸಂಪರ್ಕ, ಶೌಚಾಲಯ ದುರಸ್ತಿ, ನೀರಿನ ಸಂಪರ್ಕ ಕೂಡ ಮಾಡಲಾಗಿದೆ. ಹೀಗೆ ಈ ಚುನಾವಣೆಗೆ ದುರಸ್ತಿ ನಡೆದಿದೆ. ಮುಂದಿನ ಚುನಾವಣೆಗೆ ಮತ್ತದೇ ಕಥೆ. ಇಂತಹ ದುರಸ್ತಿ ಕಾರ್ಯಗಳಿಗೆ ಹೇಗೆ ಅನುದಾನ ಹೊಂದಿಸಲಾಗುತ್ತದೆ ಎಂದರೆ, ಇದಕ್ಕಾಗಿ ಪ್ರತ್ಯೇಕ ಅನುದಾನ ಬರುವುದಿಲ್ಲ. ಆದರೆ ಬೇರೆ ಹೊಸ ಕಟ್ಟಡಗಳಿಗೆ ಬಂದ ಅನುದಾನಗಳಲ್ಲಿ ಕಡಿಮೆ ಮೊತ್ತಕ್ಕೆ ಟೆಂಡರ್‌ ಆಗಿ ಉಳಿದ ಅನುದಾನವನ್ನು ಇಂತಹ ದುರಸ್ತಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಅಧಿಕಾರಿಗಳು ಗುಟ್ಟಿನಲ್ಲಿ ಹೇಳುತ್ತಾರೆ.

ಉಪಯೋಗ ಶೂನ್ಯ
ಮುಚ್ಚಿರುವ ಅನುದಾನಿತ, ಖಾಸಗಿ ಶಾಲೆಗಳು ಖಾಸಗಿಯವರ ಒಡೆತನ ದಲ್ಲಿರುವ ಕಾರಣ ಅದನ್ನು ಏನೂ ಮಾಡುವಂತಿಲ್ಲ. ಆದರೆ ಪಾಳು ಬಿದ್ದಿರುವ, ಉಪಯೋಗ ಇಲ್ಲದಿರುವ ಸರಕಾರಿ ಶಾಲಾ ಕಟ್ಟಡಗಳನ್ನು ಬೇರೆ ಯಾವುದಾದರೂ ಸರಕಾರಿ ಉದ್ದೇಶಗಳಿಗೆ ಬಳಕೆ ಮಾಡಬಹುದು. ಉಪಯೋಗ ಇಲ್ಲದ ಶಾಲೆಗಳನ್ನು ಚುನಾವಣೆ ಸಂದರ್ಭದಲ್ಲಿ ಖರ್ಚು ಮಾಡಿ ದುರಸ್ತಿ ಪಡಿಸಲಾಗುತ್ತದೆ. ಸಾಕಷ್ಟು ಸರಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿದ್ದು, ಒಂದು ವೇಳೆ ಕಟ್ಟಡವನ್ನು ಯಾವುದಾದರೂ ಸರಕಾರಿ ಉದ್ದೇಶಕ್ಕೆ ಬಳಕೆ ಮಾಡಿದರೆ ಕಟ್ಟಡ ಉಳಿಯುವ ಜತೆಗೆ ಪರಿಸರವೂ ಸ್ವಚ್ಛವಾಗಿರುತ್ತದೆ. ಜತೆಗೆ ಪ್ರತೀ ಬಾರಿ ಚುನಾವಣೆಯ ಸಂದರ್ಭದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ದುರಸ್ತಿ ಪಡಿಸುವುದು ಉಳಿಯುತ್ತದೆ. ಮತದಾನ ನಡೆದು ಬೀಗ ಹಾಕಿ ತೆರಳಿದರೆ ಮುಂದಿನ ದಿನಗಳಲ್ಲಿ ಶಾಲೆಗೆ ಯಾರು ಬಂದರೂ ಇಲಾಖೆಗೆ ಗೊತ್ತಾಗುವುದಿಲ್ಲ.

ಶಾಲಾ ಕಟ್ಟಡ ಉಪಯೋಗ
ಈ ನಿಟ್ಟಿನಲ್ಲಿ ಜಿ.ಪಂ. ಸಿಇಒ ಪ್ರಸನ್ನ ಅವರು ಕೆಲವು ದಿನಗಳ ಹಿಂದೆ ತಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಚುನಾವಣೆ ಬಳಿಕ ಸರಕಾರದ ವಿವಿಧ ಇಲಾಖೆಗಳ ಉಪಯೋಗಕ್ಕೆ ಬಾಡಿಗೆ ಕಟ್ಟಡದ ಬದಲಿಗೆ ಶಾಲಾ ಕಟ್ಟಡವನ್ನು ಸುವ್ಯವಸ್ಥಿತವಾಗಿ ಬಳಸುವ ಕುರಿತು ಯೋಚಿಸೋಣ. ಜಾಗದ ಹಸ್ತಾಂತರ, ಕಟ್ಟಡವನ್ನಷ್ಟೇ ತಾತ್ಕಾಲಿಕವಾಗಿ ಆಯಾ ಇಲಾಖೆಗೆ ಅಧೀನಕ್ಕೆ ನೀಡಿ ಉಪಯೋಗವಾಗುವಂತೆ ಮಾಡೋಣ ಎಂದಿದ್ದಾರೆ.

Advertisement

ಕಟ್ಟಡ ಉಪಯೋಗ ರಹಿತವಾಗುವುದನ್ನು ತಪ್ಪಿಸಲು ಈ ಉಪಾಯ ಫ‌ಲಿಸಲಿದೆ. ಸರಕಾರಕ್ಕೆ ಖಾಸಗಿಯವರಿಗೆ ನೀಡುವ ಬಾಡಿಗೆಯೂ ಉಳಿತಾಯವಾಗಲಿದೆ.

ಯಾವೆಲ್ಲ ಶಾಲೆ
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕುಂದಾಪುರ ತಾಲೂಕಿನ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಮತಗಟ್ಟೆಗಳು, ಕೋಡಿ ಸೋನ್ಸ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರ ತಾಲೂಕಿನ ಮಣೂರಿನ ಶ್ರೀರಾಮ ಪ್ರಸಾದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಾರಂಪಳ್ಳಿಯ ಗಜಾನನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, 33 ಶಿರೂರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಹನೆಹಳ್ಳಿಯ ನವಭಾರತ ಅನುದಾನಿತ ಹಿರಿಯ ಪ್ರಾಥಮಿಕ
ಶಾಲೆ ಕೂರಾಡಿ.

ಸಿದ್ಧಪಡಿಸಲಾಗಿದೆ.
ಕುಂದಾಪುರ ಶೈಕ್ಷಣಿಕ ವಲಯದಲ್ಲಿ ತಾತ್ಕಾಲಿಕವಾಗಿ ಮುಚ್ಚಿದ್ದ ಎರಡು ಶಾಲೆಗಳನ್ನು ಚುನಾವಣೆಗಾಗಿ ಸಿದ್ಧಪಡಿಸಲಾಗಿದೆ.
-ಕಾಂತರಾಜು ಸಿ.ಎಸ್‌.
ಶಿಕ್ಷಣಾಧಿಕಾರಿ, ಕುಂದಾಪುರ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next