Advertisement

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

01:05 PM Dec 20, 2024 | Team Udayavani |

ಕುಂದಾಪುರ: ಗಂಗೊಳ್ಳಿ – ಕುಂದಾಪುರ ನಡುವೆ ಪಂಚಾಗಂಗಾವಳಿ ನದಿಗೆ ಸೇತುವೆ ನಿರ್ಮಾಣ ಅಥವಾ ಬಾರ್ಜ್‌ ವ್ಯವಸ್ಥೆ ಕಲ್ಪಿಸಬೇಕು ಎಂಬ ಸಾರ್ವಜನಿಕರ ಬಹು ವರ್ಷದ ಬೇಡಿಕೆಯನ್ನು ರಾಜ್ಯ ಸರಕಾರ ಸದ್ಯಕ್ಕೆ ತಿರಸ್ಕರಿಸಿದೆ. ಈ ಸಂಬಂಧ ನಮ್ಮ ಬಳಿ ಪ್ರಸ್ತಾವನೆಯೇ ಇಲ್ಲ ಎನ್ನುವ ಮೂಲಕ ಗಂಗೊಳ್ಳಿ ಭಾಗದ ಸಾರ್ವ ಜನಿಕರ ಬೇಡಿಕೆಗೆ ತಣ್ಣೀರೆರೆಚಿದೆ. ಬೆಳಗಾವಿ
ಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಲೋಕೋಪ ಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

Advertisement

ನಗರದಿಂದ ಮೀನುಗಾರಿಕಾ ಬಂದರು ಪಟ್ಟಣ ಗಂಗೊಳ್ಳಿಯನ್ನು ಸಂಪರ್ಕಿಸಲು ಪಂಚಗಂಗಾವಳಿಯಲ್ಲಿ ಬಾರ್ಜ್‌ ಸೇವೆ ಆರಂಭಿಸಬೇಕೆಂದು ಜನ ಒತ್ತಾಯಿಸುತ್ತಿದ್ದರು. ಗಂಗೊಳ್ಳಿ ಕುಂದಾಪುರ ನಡುವೆ ಸೇತುವೆ ಕಾಮಗಾರಿಗೆ ಕೇಂದ್ರ, ರಾಜ್ಯದ ಮುಂದೆ ಬೇಡಿಕೆಯಿದ್ದು ಮಂಜೂರಾಗುವವರೆಗೆ ಬಾರ್ಜ್‌ ನೀಡಿದರೆ ಕುಂದಾಪುರ ಗಂಗೊಳ್ಳಿ ನಡುವಿನ 15 ಕಿ.ಮೀ. ರಸ್ತೆ ಅಂತರ ಕಡಿಮೆ ಮಾಡಿ ವ್ಯಾವಹಾರಿಕ ಅಭಿವೃದ್ಧಿಗೆ ವೇದಿಕೆಯಾಗಲಿದೆ ಎಂದು ಭಾವಿಸಲಾಗಿತ್ತು.

ಹಲವು ಪ್ರಯತ್ನಗಳು ನಡೆದಿದ್ದವು: ಇಲ್ಲಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಹಲವು ಪ್ರಯತ್ನಗಳು ನಡೆದಿವೆ. ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌, ಮೀಣುಗಾರಿಕಾ ಸಚಿವ ಮಂಕಾಳ್‌ ವೈದ್ಯ ಅವರು ಭೇಟಿ ನೀಡಿ ಕುಂದಾಪುರ- ಗಂಗೊಳ್ಳಿ ಸೇತುವೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಸರಕಾರದ ಮೂಲಕ ಪ್ರಯತ್ನ ನಡೆಸಿದ್ದರು. ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ಗುರುರಾಜ್‌ ಗಂಟಿಹೊಳಿ, ಮಾಜಿ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ, ಗೋಪಾಲ ಪೂಜಾರಿ ಮೊದಲಾದವರು ಸೇತುವೆ ನಿರ್ಮಾಣಕ್ಕೆ ಅನುದಾನಕ್ಕೆ ಪ್ರಯತ್ನ ನಡೆಸಿದ್ದರು.

ಸಚಿವರು ನೀಡಿದ ಉತ್ತರದಲ್ಲೇನಿದೆ?
ಬೈಂದೂರು ಶಾಸಕ ಗುರುರಾಜ್‌ ಶೆಟ್ಟಿ ಗಂಟಿಹೊಳೆ ಅವರು ಬೆಳಗಾವಿ ಅಧಿವೇಶನದಲ್ಲಿ ಸೇತುವೆ ನಿರ್ಮಾಣದ ಬಗ್ಗೆ ಗಮನ ಸೆಳೆದಿದ್ದರು. ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ನಿತ್ಯ ಕುಂದಾಪುರ ಭಾಗದಿಂದ ಸಾವಿರಾರು ಮೀನುಗಾರರು, ಮೀನು ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಹೋಗುತ್ತಾರೆ. ಈಗ ಅವರು ರಸ್ತೆ ಮೂಲಕ 18 ಕಿ.ಮೀ ಕ್ರಮಿಸಬೇಕಾಗಿರುವುದರಿಂದ ಸೇತುವೆ ನಿರ್ಮಾಣ ಆಗುವವರೆಗೆ ಬಾರ್ಜ್‌ ವ್ಯವಸ್ಥೆ ಮಾಡಲು ಸಾಧ್ಯವೇ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಗಂಗೊಳ್ಳಿಯಿಂದ ಕುಂದಾಪುರ ಸಂಪರ್ಕಿಸಲು ಸೇತುವೆ ನಿರ್ಮಾಣದ ಪ್ರಸ್ತಾವನೆ ಲೋಕೋಪಯೋಗಿ ಇಲಾಖೆ ಮುಂದೆ ಇರುವುದಿಲ್ಲ ಎಂದಿದ್ದಾರೆ. ಬಾರ್ಜ್‌ ವ್ಯವಸ್ಥೆ ಕಲ್ಪಿಸುವ ಯಾವುದೇ
ಪ್ರಸ್ತಾವನೆ ಇರುವುದಿಲ್ಲವೆಂದು ಬಂದರುಗಳು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯವರು ವರದಿ ಮಾಡಿದ್ದಾಗಿ ಉತ್ತರ ನೀಡಿದ್ದಾರೆ.

1973ರವರೆಗೆ ಬಾರ್ಜ್‌ ಇತ್ತು
1960ರಲ್ಲಿ ಪಂಚಗಂಗಾವಳಿಯ 5 ಸೇತುವೆಗಳು ಆಗುವ ತನಕ ಈ ಎರಡು ಪಟ್ಟಣಗಳ ನಡುವೆ ಫೆರಿ ಸೇವೆ ಜನಪ್ರಿಯವಾಗಿತ್ತು. ಕುಂದಾಪುರದ ಮಸೀದಿ ಪಕ್ಕದ, ಪುರಸಭೆ ಪಾರ್ಕ್‌ ಇರುವ ಜಾಗದಿಂದ ಗಂಗೊಳ್ಳಿಗೆ 1973ರವರೆಗೂ ಒಬ್ಬರಿಗೆ 20 ಪೈಸೆಗೆ ಫೆರಿ ದೋಣಿ ಇತ್ತು. ಸ್ಥಳೀಯಾಡಳಿತ ಏಲಂ ಮೂಲಕ ವಹಿಸಿ, ಬಿದಿರು ಜಲ್ಲೆ ಮೂಲಕವೇ ದೋಣಿ ಚಲಾಯಿಸಿ

Advertisement

ಒಂದು ಟ್ರಿಪ್ಪಿ ಗೆ 10ರಿಂದ 12 ಜನರಂತೆ ಗಂಗೊಳ್ಳಿಗೆ ಕರೆದೊಯ್ದು ಸಂಜೆ 6ಗಂಟೆವರೆಗೆ ನಿರಂತರ ಸೇವೆ ಇತ್ತು.

ಸೇತುವೆ ಯಾಕೆ ಅನಿವಾರ್ಯ?
ಕುಂದಾಪುರ -ಗಂಗೊಳ್ಳಿ ನಡುವೆ ಕೋಡಿಯಿಂದ ಇರುವ ಅಂತರ ಕೇವಲ 1 ಕಿ.ಮೀ. ದೋಣಿ ಮೂಲಕ ಪ್ರಯಾಣಿಸಿದರೆ 20 ನಿಮಿಷ. ರಸ್ತೆ ಮೂಲಕ 15 ಕಿ.ಮೀ. ದೂರವಿದ್ದು, 45 ನಿಮಿಷದ ಪ್ರಯಾಣ. ಕೆಲವೊಮ್ಮೆ 1 ಗಂಟೆಯಾಗುವುದೂ ಇದೆ.

ಗಂಗೊಳ್ಳಿಯಿಂದ ಕುಂದಾಪುರಕ್ಕೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಶಿಕ್ಷಣದ ಸಲುವಾಗಿ ಆಗಮಿಸುತ್ತಾರೆ. ಆಸ್ಪತ್ರೆ, ತಾಲೂಕು ಕಚೇರಿ ಮೊದಲಾದ ಕೆಲಸಗಳಿಗೆ, ವ್ಯಾವಹಾರಿಕವಾಗಿಯೂ ಗಂಗೊಳ್ಳಿ ಜನರಿಗೆ ಕುಂದಾಪುರದ ಜತೆ ನಿಕಟ ಒಡನಾಟ. ಹಾಗಾಗಿ ಸೇತುವೆಗೆ ಬಹಳ ವರ್ಷಗಳಿಂದ ಬೇಡಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next