Advertisement

Kundapura: ಅನುದಾನ ಬಂದು 3 ವರ್ಷ; ಆರಂಭಗೊಳ್ಳದ ಕಾಮಗಾರಿ

03:40 PM Sep 03, 2024 | Team Udayavani |

ಕುಂದಾಪುರ: ಮರವಂತೆಯ ಕೇರಳ ಮಾದರಿಯ ಔಟ್‌ಡೋರ್‌(ಹೊರ) ಬಂದರಿನ ಒಂದನೇ ಹಂತದ ಕಾಮಗಾರಿ ಅಪೂರ್ಣಗೊಂಡಿದ್ದು, ಅದನ್ನು ಪೂರ್ಣಗೊಳಿಸಲು 2ನೇ ಹಂತದ ಕಾಮಗಾರಿಗೆ 85 ಕೋ.ರೂ. ಘೋಷಣೆಯಾಗಿ, 3 ವರ್ಷ ಕಳೆದರೂ, ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಸಿಆರ್‌ಝಡ್‌ ತೊಡಕು ನಿವಾರಣೆಯಲ್ಲೇ ಕಾಲಹರಣ ಮಾಡುತ್ತಿದ್ದು, ಇದರಿಂದ ಮೀನುಗಾರಿಕೆ ಆರಂಭಗೊಂಡರೂ, ಮೀನುಗಾರರ ನಿತ್ಯದ ಬವಣೆ ಮಾತ್ರ ತಪ್ಪಿಲ್ಲ.
ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿಗೆ ಹಿಂದಿನ ಸರಕಾರವು 85 ಕೋ.ರೂ. ಅನುದಾನ ಮಂಜೂರು ಮಾಡಿತ್ತು. ಆದರೆ ಸಿಆರ್‌ಝಡ್‌ ಅನುಮತಿ ಸಿಗದಿರುವ ಕಾರಣ ಕಾಮಗಾರಿ ಆರಂಭಿಸಲು ಸಮಸ್ಯೆಯಾಗಿತ್ತು.

Advertisement

ಎಸ್‌ಎಂಪಿ ನಕ್ಷೆ ಅಂತಿಮ
ಸಿಆರ್‌ಝಡ್‌ ಅನುಮತಿ ಸಿಗಲು ಬಾಕಿಯಿದ್ದು, ಅದರ ನಿವಾರಣೆ ನಿಟ್ಟಿನಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯು ಪ್ರಯತ್ನ ಮಾಡುತ್ತಿದೆ. ಮೀನುಗಾರರಿಗೆ ಖುಷಿಯ ಸುದ್ದಿಯೆಂದರೆ ಈಗ ಸಿಆರ್‌ಝಡ್‌ ಅನುಮತಿ ಸಿಗಲು ಕರಾವಳಿ ನಿರ್ವಹಣಾ ಯೋಜನೆ (Shoreline Management Plan- SMP)ನಕ್ಷೆ ಅಗತ್ಯವಾಗಿದ್ದು, ಅದು ಈಗ ಅಂತಿಮಗೊಂಡಿದೆ. ಈ ನಕ್ಷೆ ತಯಾರಿಗಾಗಿ ಚೆನ್ನೈನ ಅಣ್ಣಾ ವಿವಿಯ ತಂಡಕ್ಕೆ ವಹಿಸಲಾಗಿದ್ದು, ಅದೀಗ ವಿಡಿಯೋ ಕಾನ್ಫರೆನ್ಸ್‌ ಮೂಲಕ ವರದಿ ಸಲ್ಲಿಸಿದೆ. ಅದನ್ನು ಇನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಸಲ್ಲಿಸಿದ ಬಳಿಕ ಸಿಆರ್‌ಝಡ್‌ ಅನುಮತಿ ಸಿಗುವ ಸಾಧ್ಯತೆಗಳಿವೆ.

ಮೀನುಗಾರಿಕೆಗೆ ತೆರಳಲು ಸಮಸ್ಯೆ
ಈ ಬಂದರನ್ನು ಆಶ್ರಯಿಸಿಕೊಂಡು 500 ಕ್ಕೂ ಮಿಕ್ಕಿ ದೋಣಿಗಳಿವೆ. ಸುಮಾರು 5 ಸಾವಿರದಷ್ಟು ಮಂದಿಗೆ ಈ ಮರವಂತೆ ಬಂದರು ಜೀವನಾಧಾರವಾಗಿದೆ. ಕಳೆದ ತೌಖ್ತೆ ಚಂಡಮಾರುತದ ಪರಿಣಾಮ ಮರವಂತೆಯ ಸುಮಾರು ಒಂದು ಕಿ.ಮೀ. ನಷ್ಟು ಉದ್ದದ ಕಡಲ ತೀರ ಕಡಲ ಅಲೆಗಳ ಅಬ್ಬರಕ್ಕೆ ನಲುಗಿ ಹೋಗಿತ್ತು. ಇಲ್ಲಿನ ಮೊದಲ ಹಂತದ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಅನೇಕ ಸಮಸ್ಯೆಗಳು ಉದ್ಭವವಾಗಿದ್ದು, 2ನೇ ಹಂತದ ಕಾಮಗಾರಿಯಾದರೆ ಆ ಸಮಸ್ಯೆ ಗಳು ಇತ್ಯರ್ಥಗೊಳ್ಳುವ ಸಾಧ್ಯತೆಯಿದೆ. ಆಗಾಗ್ಗೆ ಬರುತ್ತಿರುವ ಸೈಕ್ಲೋನ್‌, ವಿಪರೀತ ಗಾಳಿ, ಅಲೆಗಳ ಅಬ್ಬರ ಜಾಸ್ತಿಯಿದ್ದಾಗ ದೋಣಿಗಳು ಬಂದರಿನೊಳಗೆ ಬರಲು, ಬಂದರಿನಿಂದ ಹೋಗಲು ತುಂಬಾ ಸಮಸ್ಯೆ ಯಾಗುತ್ತಿದೆ. ಬಹುತೇಕ ದಿನಗಳಲ್ಲಿ ಇದರಿಂದ ಮೀನು ಗಾರಿಕೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಬೇಗ ಕಾಮಗಾರಿ ನಡೆಯಲಿ
ಬಂದರು ಕಾಮಗಾರಿ ಆಗದೇ ಇರುವುದರಿಂದ ಮೀನುಗಾರಿಕೆಗೆ ಹೋಗಲು ಹಾಗೂ ಬರಲು ದೋಣಿಗಳಿಗೆ ಭಾರೀ ಸಮಸ್ಯೆಯಾಗುತ್ತಿದೆ. ಇಲ್ಲಿನ ಬಂದರಿನಲ್ಲಿಯೂ ಮಳೆಗೆ ಹಾನಿಯಾಗಿದ್ದು, ಮೀನು ಇಳಿಸುವಲ್ಲಿಯೂ ಕಷ್ಟವಾಗುತ್ತಿದೆ. ನಮ್ಮ ಮೀನುಗಾರರು ಇನ್ನೆಷ್ಟು ದಿನ ತೊಂದರೆ ಅನುಭವಿಸಬೇಕು. ಈ ಬಾರಿ ಅಷ್ಟೊಂದು ಉತ್ತಮ ಸೀಸನ್‌ ಕೂಡ ಆಗಿಲ್ಲ. ಆದಷ್ಟು ಬೇಗ ಬಂದರಿನ ಕಾಮಗಾರಿ ನಡೆಯಲಿ.
– ವಾಸುದೇವ ಖಾರ್ವಿ, ಪ್ರಮುಖರು, ಶ್ರೀ ರಾಮ ಮೀನುಗಾರರ ಸೇವಾ ಸಮಿತಿ ಮರವಂತೆ

Advertisement

ಆದಷ್ಟು ಬೇಗ ಪರಿಸರ ಇಲಾಖೆಗೆ ವರದಿ ಸಲ್ಲಿಕೆ
ಸಿಆರ್‌ಝಡ್‌ ಅನುಮತಿಗೆ ಕರಾವಳಿ ನಿರ್ವಹಣಾ ಯೋಜನೆ (Shoreline Management Plan- SMP) ನಕ್ಷೆಯನ್ನು ಪರಿಸರ ಇಲಾಖೆ ಕೇಳಿದ್ದು, ಅದೀಗ ಅಂತಿಮಗೊಂಡಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸಲ್ಲಿಸಲಾಗುವುದು. ಬಾಕಿ ಎಲ್ಲ ದಾಖಲಾತಿಗಳನ್ನು ಈಗಾಗಲೇ ಸಲ್ಲಿಸಿರುವುದರಿಂದ ಆದಷ್ಟು ಸಿಆರ್‌ಝಡ್‌ ಅನುಮತಿ ಸಿಗುವ ನಿರೀಕ್ಷೆಯಿದೆ.
– ಶೋಭಾ ಕೆ., ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಬಂದರು ಇಲಾಖೆ ಉಡುಪಿ.

ಮೀನುಗಾರಿಕೆಯೂ ಇಲ್ಲ
ಹೊಸ ಮೀನುಗಾರಿಕಾ ಋತು ಆರಂಭಗೊಂಡು ಒಂದು ತಿಂಗಳಾದರೂ ಇನ್ನೂ ಉತ್ತಮ ಮೀನುಗಾರಿಕೆ ಆರಂಭಗೊಂಡಿಲ್ಲ. ಈ ಬಾರಿ ಉತ್ತಮ ಮಳೆಯಿಂದ ಒಳ್ಳೆಯ ಮೀನುಗಾರಿಕಾ ಋತುವನ್ನು ನಿರೀಕ್ಷಿಸಿದ್ದ ಮೀನುಗಾರರಿಗೆ ನಿರಾಶೆಯನ್ನೇ ಉಂಟು ಮಾಡಿದೆ. ಕರಾವಳಿಯ ಎಲ್ಲಿಯೂ ಮೀನಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದೊಂದು ತಿಂಗಳಲ್ಲಿ 15 ಕ್ಕೂ ಹೆಚ್ಚು ದಿನಗಳು ಮೀನುಗಾರಿಕೆಗೆ ರಜೆ ನೀಡಲಾಗಿತ್ತು. ಒಂದೆರಡು ದಿನ ಸಿಗಡಿ ಸಿಕ್ಕಿವೆ. ಬಾಕಿ ಕೆಲವೇ ಕೆಲವು ಮೀನುಗಳು ಮಾತ್ರ ಸಿಕ್ಕಿದ್ದು, ಇನ್ನೂ ಎಲ್ಲ ತರದ ಮೀನುಗಳು ಸಿಕ್ಕಿಲ್ಲ ಎನ್ನುತ್ತಾರೆ ಮರವಂತಯ ಮೀನುಗಾರ ಮುಖಂಡ ಮೋಹನ್‌ ಖಾರ್ವಿ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next