Advertisement
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿಯೇ ಎರಡನೇ ಅತೀ ದೊಡ್ಡ ವಾರದ ಸಂತೆಯೆಂದೇ ಹೆಸರಾದ ಕುಂದಾಪುರದ ವಾರದ ಸಂತೆಗೆ ಬರುವ ಜನರಿಗೆ ವಾಹನ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಾಹನಪಾರ್ಕಿಂಗ್ಗೆ ಪರ್ಯಾಯ ಜಾಗವಿಲ್ಲದೆ ಕೆಲವರು ರಾಷ್ಟ್ರೀಯ ಹೆದ್ದಾರಿಯಲ್ಲೇ ಪಾರ್ಕಿಂಗ್ ಮಾಡಿದರೆ, ಮತ್ತೆ ಕೆಲವರು ಸರ್ವೀಸ್ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವಂತಾಗಿದೆ.
ವಾರದ ಸಂತೆಗೆ ವ್ಯಾಪಾರಸ್ಥರು, ಗ್ರಾಹಕರು ಸೇರಿ ಸಾವಿರಾರು ಮಂದಿ ಬರುತ್ತಿದ್ದು, ಸಂತೆಯಿಂದ ತುಂಬಾ ವಸ್ತುಗಳನ್ನು ತೆಗೆದುಕೊಂಡು ಹೋಗಲು ಹೆಚ್ಚಿನವರು ವಾಹನಗಳಲ್ಲಿಯೇ ಬರುತ್ತಾರೆ. ಆದರೆ ಇಲ್ಲಿಗೆ ಬರುವ ಗ್ರಾಹಕರಿಗೆ ತಲೆ ನೋವಾಗಿ ಪರಿಣಮಿಸಿರುವುದು ವಾಹನ ಪಾರ್ಕಿಂಗ್ ಸಮಸ್ಯೆ. ಎಪಿಎಂಸಿ ಪ್ರಾಂಗಣದೊಳಗೆ ಇರುವ ಸ್ವಲ್ಪ ಜಾಗದಲ್ಲಿ ದ್ವಿಚಕ್ರ ವಾಹನಗಳು, ವ್ಯಾಪಾರಸ್ಥರ ವಾಹನ ಪಾರ್ಕಿಂಗ್‌ಗೆ ಜಾಗ ಸಾಕಾಗುತ್ತಿಲ್ಲ. ಇನ್ನು ಕಾರು, ಟೆಂಪೋ, ಗೂಡ್ಸ್, ರಿಕ್ಷಾಗಳನ್ನು ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಅಲ್ಲಿ ಜಾಗ ಸಾಕಾಗದೆ ಕೆಲವರು ಹೆದ್ದಾರಿಯ ಒಂದು ಬದಿಯಲ್ಲಿ ಪಾರ್ಕಿಂಗ್ ಮಾಡಿ, ಖರೀದಿಗೆ ಬರುವಂತಾಗಿದೆ.
Related Articles
ಎಪಿಎಂಸಿ ಪ್ರಾಂಗಣದೊಳಗೆ ಪಾರ್ಕಿಂಗ್‌ಗೆ ಜಾಗವಿಲ್ಲ. ಹಾಗಂತ ಸರ್ವೀಸ್ ರಸ್ತೆಯಲ್ಲೋ ಅಥವಾ ಹೆದ್ದಾರಿಯಲ್ಲೋ ವಾಹನಗಳನ್ನು ಪಾರ್ಕಿಂಗ್ ಮಾಡಿದರೆ ಪೊಲೀಸರು ಬಂದು ಯಾಕೆ ಇಲ್ಲಿ ನಿಲ್ಲಿಸಿದ್ದು ಎಂದು ಕೇಳುತ್ತಾರೆ. ಸಂತೆಗೆ ಬರುವ ಗ್ರಾಹಕರ ಪಾಡು ಮಾತ್ರ ಹೇಳತೀರದಾಗಿದೆ. ಹಾಗಾದರೆ ವಾಹನ ಪಾರ್ಕಿಂಗ್‌ಗೆ ಜಾಗ ಮಾಡಿಕೊಡಬೇಕಾದವರು ಯಾರು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
Advertisement
ಸಂಚಾರಕ್ಕೆ ಸಮಸ್ಯೆಹೆದ್ದಾರಿಯಲ್ಲಿ ಪಾರ್ಕಿಂಗ್ ಮಾಡುತ್ತಿರು ವುದರಿಂದ ಇತರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನು ಸರ್ವಿಸ್ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಎಪಿಎಂಸಿ ಪ್ರಾಂಗಣಕ್ಕೆ, ಸಂತೆಗೆ ಬರುವವರಿಗೆಲ್ಲ ಭಾರೀ ಸಮಸ್ಯೆಯಾಗುತ್ತಿದೆ. ಸಂತೆ ಮಾರುಕಟ್ಟೆಯ ಒಳಗೆ ಪ್ರವೇಶಿಸಬೇಕಾದರೆ ಸಾಹಸವೇ ಮಾಡಬೇಕಾಗಿದೆ.