Advertisement

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

02:33 PM Nov 26, 2024 | Team Udayavani |

ಕುಂದಾಪುರ: ಸೌಪರ್ಣಿಕಾ ನದಿಗೆ ಅಡ್ಡಲಾಗಿ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ-66ರ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ 54 ವರ್ಷಗಳ ಹಿಂದೆ ನಿರ್ಮಿಸಿರುವ ಹಳೆಯ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಳೆಯದಾದ ಸೇತುವೆ ಇದಾಗಿದ್ದು, ಶಿಥಿಲಗೊಂಡಿರುವ ಬಗ್ಗೆ ವರದಿ ಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ.

Advertisement

ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಕನ್ನಡಕುದ್ರು (ಮೂವತ್ತುಮುಡಿ) ಕ್ರಾಸ್‌ ಬಳಿಯಿಂದ ಅರಾಟೆಯವರೆಗೆ ಹಳೆಯ ಸೇತುವೆ ಇರುವ ಭಾಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪಕ್ಕದಲ್ಲೇ ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣಗೊಂಡ ಹೊಸ ಸೇತುವೆಯಲ್ಲಿಯೇ ಎರಡೂ ಕಡೆಗಳ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕುಂದಾಪುರದಿಂದ ಸಂಚರಿಸುವವರು ಸಹ ಕನ್ನಡಕುದ್ರು ಬಳಿಯಿಂದ ಅರಾಟೆಯವರೆಗೆ ಎಡ ಭಾಗದ ಹೆದ್ದಾರಿಯಲ್ಲಿಯೇ ಸಂಚರಿಸಬೇಕು. ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಹೊಸ ಸೇತುವೆಯಲ್ಲಿಯೇ ಎರಡೂ ಕಡೆಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕುಂದಾಪುರ ಭಾಗದ ಇದು ಅತೀ ಉದ್ದದ ಸೇತುವೆ ಇದಾಗಿದ್ದು, 615 ಮೀ. ಉದ್ದವಿದೆ. ಹಳೆಯ ಸೇತುವೆಯ ಧಾರಣ ಸಾಮರ್ಥ್ಯದ ಬಗ್ಗೆ ಕೆಲ ವರ್ಷಗಳಿಂದ ಅನುಮಾನಗಳಿದ್ದವು. ಕಳೆದ ಸೆಪ್ಟೆಂಬರ್‌ನಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕುಂದಾಪುರ – ಬೈಂದೂರು ಹೆದ್ದಾರಿಯ ಎಲ್ಲ ಸೇತುವೆಗಳ ಧಾರಣಾ ಸಾಮರ್ಥ್ಯ ಯಂತ್ರದ ಮೂಲಕ ತಪಾಸಣೆ ನಡೆಸಲಾಗಿತ್ತು.

ಕುಸಿದು ಬಿದ್ದಿದ್ದ ಕಾಳಿ ಸೇತುವೆ
ಕಳೆದ ಮಳೆಗಾಲದಲ್ಲಿ ಇದೆ ರಾ.ಹೆ. 66ರ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಗೆ ನಿರ್ಮಿಸಲಾಗಿದ್ದ ಹಳೆಯ ಸೇತುವೆಯು ಕುಸಿದು, ಬಿದ್ದು, ಸಂಪರ್ಕವೇ ಕಡಿತಗೊಂಡಿತ್ತು. ಆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಾಟೆಯ ಈ ಹಳೆಯ ಸೇತುವೆಯಲ್ಲಿಯೂ ಸಂಚಾರವನ್ನು ಸ್ಥಗಿತಗೊಳಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

50 ವರ್ಷ ಹಳೆಯ ಸೇತುವೆ
ಅರಾಟೆಯ ಹೊಸ ಸೇತುವೆ ಪಕ್ಕದಲ್ಲಿರುವ ಹಳೆಯ ಸೇತುವೆ ನಿರ್ಮಾಣಗೊಂಡಿರುವುದು 1966-67ರಲ್ಲಿ. ಜರ್ಮನ್‌ ಮೂಲದ ಗ್ಯಾಮನ್‌ ಇಂಡಿಯಾ ಸಂಸ್ಥೆಯು ಆಗ ಈ ಹಳೆಯ ಸೇತುವೆಯ ಕಾಮಗಾರಿಯನ್ನು ನಿರ್ವಹಿ ಸಿತ್ತು. ಅಂದರೆ ಈ ಸೇತುವೆ ನಿರ್ಮಾಣಗೊಂಡು, ಸರಿ ಸುಮಾರು 56 ವರ್ಷಗಳೇ ಕಳೆದಿವೆ. ಈ ಸೇತುವೆ ಹಳೆಯದಾದರೂ ಯಾವುದೇ ಬಿರುಕು ಆಗಲಿ ಅಥವಾ ಪಿಲ್ಲರ್‌ಗೆ ಹಾನಿ ಆಗಲೀ ಸಂಭವಿಸಿಲ್ಲ. ಸೇತುವೆಯ ಮೇಲಿನ ಡಾಮರು ಕಿತ್ತುಹೋಗಿದ್ದು, ಅದಕ್ಕೆ ತೇಪೆ ಹಾಕಿ ಸರಿ ಮಾಡಲಾಗಿತ್ತು. ಇದರ ಧಾರಣಾ ಸಾಮರ್ಥ್ಯದ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಅಲ್ಲಲ್ಲಿ ಸಣ್ಣ-ಪುಟ್ಟ ಹಾನಿಯಾಗಿರುವುದನ್ನು ಸರಿಪಡಿಸಬೇಕಾಗಿದೆ.

ಮುಂಜಾಗ್ರತೆ ಅಗತ್ಯ
ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಪ್ರತಿನಿತ್ಯ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೂ ಬೈಕ್‌, ಕಾರು, ರಿಕ್ಷಾದಂತಹ ವಾಹನಗಳಿಂದ ಹಿಡಿದು, ಬಸ್‌ಗಳು, ಸರಕು ಸಾಗಾಟದ ಘನ ವಾಹನಗಳು ಸೇರಿದಂತೆ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಈಗ ಕಾಮಗಾರಿ ಮುಗಿಯವವರೆಗೆ ಹೆದ್ದಾರಿಯ ಒಂದೇ ಮಾರ್ಗದಲ್ಲಿ ಎರಡೂ ಕಡೆಗಳ ವಾಹನಗಳನ್ನು ಬಿಡಲಾಗಿದ್ದು, ಇದು ಅಪಘಾತಕ್ಕೂ ಕಾರಣ ಆಗುವ ಸಾಧ್ಯತೆಗಳಿವೆ. ವೇಗದ ಸಂಚಾರ, ಓವರ್‌ ಟೇಕ್‌ ಮಾಡದಂತೆ ಎಚ್ಚರ ವಹಿಸಬೇಕಾಗಿದೆ. ಸೇತುವೆಯಲ್ಲಿ ಬೆಳಕಿನ ವ್ಯವಸ್ಥೆಯೂ ಇಲ್ಲದಿರುವುದರಿಂದ ರಾತ್ರಿ ವೇಳೆ ಅಪಘಾತ ಸಂಭವಿಸದಂತೆ, ಜಾಗರೂಕತೆಯಿಂದ ಸಂಚರಿಸಬೇಕಾಗಿದೆ. ಒಂದು ಕಡೆಯ ಹೆದ್ದಾರಿಯಿಂದ ಇನ್ನೊಂದು ಕಡೆಯ ಹೆದ್ದಾರಿಗೆ ಡೈವರ್ಶನ್‌ ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.

ಸುದಿನ ವರದಿ
50 ವರ್ಷ ಹಳೆಯ ಅರಾಟೆ ಸೇತುವೆಯ ಕೆಲವೆಡೆಗಳಲ್ಲಿ ವಾಹನಗಳು ಢಿಕ್ಕಿಯಾಗಿ, ತಡೆಗೋಡೆಗೆ ಹಾನಿಯಾಗಿದೆ. ಸೇತುವೆಯ ಕೆಲವು ಕಡೆಗಳಲ್ಲಿ ತಡೆಗೋಡೆಗೆ ಹಾನಿಯಾಗಿ ಮುರಿದು ಹೋಗಿದೆ. ಇದಲ್ಲದೆ ಸೇತುವೆಯ ಮೇಲೆ ಪಾದಚಾರಿಗಳಿಗೆ ನಡದುಕೊಂಡು ಹೋಗಲು ನಿರ್ಮಿಸಿರುವ ಫುಟ್‌ಪಾತ್‌ ಸಹ ಅಲ್ಲಲ್ಲಿ ಜರ್ಜರಿತಗೊಂಡಿದ್ದರ ಬಗ್ಗೆ ಉದಯವಾಣಿ ಸುದಿನವು ಕಳೆದ ವರ್ಷದ ಮೇ 27ರಂದು ವಿಶೇಷ ವರದಿ ಪ್ರಕಟಿಸಿತ್ತು.

ಸುರಕ್ಷತಾ ಕ್ರಮಕ್ಕೆ ಸೂಚನೆ
ಹೆದ್ದಾರಿ ಪ್ರಾಧಿಕಾರವು ಹಳೆಯ ಸೇತುವೆಯಲ್ಲಿ ಸಂಚಾರವನ್ನು ನಿರ್ಬಂಧಿಸುವ ಕ್ರಮ ಕೈಗೊಂಡಿದೆ. ಇದರಿಂದ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ, ಸೂಕ್ತ ಸುರಕ್ಷತಾ ಕ್ರಮಕೈಗೊಳ್ಳಲು ಸಂಬಂದಪಟ್ಟವರಿಗೆ ಸೂಚನೆ ನೀಡಲಾಗುವುದು.
– ಡಾ. ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next