Advertisement

ಕುಂದಾಪುರ: ರೈಲು ಹಳಿಗೆ ಭೂಮಿ ಕೊಟ್ಟ ರೈತರಿಗೆ ರಸ್ತೆಯಿಲ್ಲ

01:45 PM Feb 08, 2024 | Team Udayavani |

ಕುಂದಾಪುರ: ತಮ್ಮೂರು ಸಹಿತ ಇಡೀ ಕರಾವಳಿಗೆ ಉಪಕಾರವಾಗಲಿ ಎಂದು ಎರಡೂವರೆ ದಶಕದ ಹಿಂದೆ ಕೊಂಕಣ್‌ ರೈಲ್ವೇಯಿಂದ ರೈಲು ಹಳಿ ನಿರ್ಮಾಣವಾಗುವ ವೇಳೆ, ತಾವು ಬೇಸಾಯ ಮಾಡುತ್ತಿದ್ದ ಅಮೂಲ್ಯವಾದ ಭೂಮಿಯನ್ನು ಕೊಟ್ಟ
ರೈತರಿಗೆ ಮಾತ್ರ ರೈಲು ಸಂಪರ್ಕ ಆರಂಭಗೊಂಡು 25 ವರ್ಷ ಕಳೆದರೂ ರಸ್ತೆಯಿಲ್ಲದ ದುಃಸ್ಥಿತಿ.ಇದು ಹಕ್ಲಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಂದಬಾರಂದಾಡಿ ಗ್ರಾಮದ ಮಾಣಿ ಕೊಳಲು ಪ್ರದೇಶದ ರೈತರು ಪಡುತ್ತಿರುವ ನಿತ್ಯದ ಪಾಡು.

Advertisement

ತಲೆಗೆ “ಹೊರೆ’
ಇಲ್ಲಿ ಒಟ್ಟು 25-30 ಮಂದಿ ರೈತರಿದ್ದು, ಅಂದಾಜು ಆಚೆ ಬದಿ 100 ಎಕರೆಯಷ್ಟು ಕೃಷಿ ಭೂಮಿಯಿದೆ. ಗದ್ದೆ, ಅಡಿಕೆ ತೋಟಗಳಿವೆ. ಭತ್ತದ ಬೆಳೆ ಇಲ್ಲಿನವರ ಪ್ರಮುಖ ಬೇಸಾಯ. ರೈಲು ಹಳಿಗೆ ಜಾಗ ಕೊಟ್ಟ ಬಳಿಕ ರೈತರು ಮಾತ್ರ ಈಗಲೂ ತಾವು ಬೆಳೆದ ಭತ್ತ, ಅಡಿಕೆ, ದ್ವಿದಳ ಧಾನ್ಯಗಳನ್ನು, ಗದ್ದೆಗೆ ಬೇಕಾದ ಗೊಬ್ಬರ, ಇನ್ನಿತರ ಸಲಕರಣೆಗಳನ್ನು ತಲೆ ಮೇಲೆ ಹೊತ್ತುಕೊಂಡೇ ಸಾಗುತ್ತಿದ್ದಾರೆ.

ಈಗ ಎಲ್ಲೆಡೆ ಯಂತ್ರೋಪಕರಣಗಳಿಂದಲೇ ಬಹುಪಾಲು ಬೇಸಾಯ ನಡೆಯುತ್ತಿದೆ. ಆದರೆ ಇಲ್ಲಿನ ಗದ್ದೆಗಳಿಗೆ ಯಂತ್ರೋಪಕರಣಗಳನ್ನು ಇಳಿಸಬೇಕಾದರೆ ಪ್ರಯಾಸವೇ ಮಾಡಬೇಕಾಗಿದೆ. ಇನ್ನು ಆಚೆ ಕಡೆ ಮನೆಗಳು ಇದ್ದು, ಅವರೆಲ್ಲ ಇದೇ ಕಾಲು ದಾರಿಯಲ್ಲಿಯೇ ಸಂಚರಿಸಬೇಕು.

ಸಮಸ್ಯೆಯೇನು?
1997-98ರ ಅವಧಿಯಲ್ಲಿ ಕೊಂಕಣ್‌ ರೈಲ್ವೇಯ ಹಳಿ ನಿರ್ಮಾಣ ಕಾರ್ಯ ನಡೆದಿತ್ತು. ಆಗ ಮಾಣಿಕೊಳಲು ಬಳಿಯಲ್ಲಿ ನಿರ್ಮಾಣಗೊಂಡ ಹಳಿ ಪಕ್ಕದಲ್ಲಿಯೇ ಬೃಹತ್‌ ಪ್ರಮಾಣದಲ್ಲಿ ಮಣ್ಣು ರಾಶಿ ಹಾಕಲಾಗಿತ್ತು. ಅದರಿಂದ ಕೆಳಗೆ ಬೈಲಿನಲ್ಲಿರುವ ತಮ್ಮ ಕೃಷಿ ಭೂಮಿಗಳಿಗೆ ಹೋಗಲು ರೈತರಿಗೆ ಇದ್ದಂತಹ ದಾರಿಯೇ ಮುಚ್ಚಿ ಹೋದಂತಾಗಿದೆ.

ಹೇಗೋ ಕಷ್ಟಪಟ್ಟು ನಡೆದುಕೊಂಡು ಹೋಗಲು ಕಾಲು ದಾರಿಯೊಂದು ಇದೆ. ಆ ರಾಶಿ ಹಾಕಲಾದ ಮಣ್ಣನ್ನು ತೆರವು ಮಾಡಿ, ಅಲ್ಲೊಂದು ಮೋರಿ ಹಾಕಿ ಕೊಡಿ ಎಂದರೆ ಈವರೆಗೂ ಕೊಂಕಣ್‌ ರೈಲ್ವೇಯವರು ಗಂಭೀರವಾಗಿ ಪರಿಗಣಿಸಲೇ ಇಲ್ಲ ಅನ್ನುತ್ತಾರೆ ಇಲ್ಲಿನ ರೈತರು. ಇನ್ನು ಸ್ಥಳೀಯ ಹಕ್ಲಾಡಿ ಗ್ರಾ.ಪಂ.ಗೆ ಮನವಿ ಕೊಟ್ಟರೆ ಅದು ರೈಲ್ವೇಯ ಸಮಸ್ಯೆ ಆಗಿದ್ದರಿಂದ ನಾವು ತಲೆ ಹಾಕುವಂತಿಲ್ಲ ಎನ್ನುತ್ತಾ ಜಾರಿಕೊಳ್ಳುತ್ತಾರೆ.

Advertisement

ಭೂಮಿ ಕೊಟ್ಟಿದ್ದೇ ತಪ್ಪಾ?
ಊರಿಗೆಲ್ಲ ಉಪಕಾರ ಆಗಲಿಯೆಂದು ಆಗ ನಾವು ರೈಲು ಹಳಿ ನಿರ್ಮಾಣಕ್ಕೆ ಭೂಮಿ ಕೊಟ್ಟಿರುವುದೇ ನಮ್ಮ ತಪ್ಪಾ? ಈಗ ನಮ್ಮ
ಸಮಸ್ಯೆಯನ್ನು ಯಾರೂ ಸಹ ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಸಂಬಂಧಪಟ್ಟ ಎಲ್ಲರಿಗೂ ಮನವಿ ಕೊಟ್ಟಿದ್ದೇವೆ. ಇದರಿಂದ ಕೃಷಿಯೇ ಮಾಡುವುದು ಕಷ್ಟವಾಗಿದ್ದು, ರೈತರಿಗೆ ಕೊಡುವ ಪ್ರೋತ್ಸಾಹ ಇದೇನಾ? ನಾವು ಬೆಳೆದಿದ್ದನ್ನೆಲ್ಲ ತಲೆ ಮೇಲೆ ಹೊತ್ತುಕೊಂಡೇ ಬರಬೇಕು. ಅವರು ನಮಗೆ ಶಾಶ್ವತ ರಸ್ತೆ ಮಾಡುವುದು ಬೇಡ. ಮೋರಿ ಹಾಕಿ, ಮಣ್ಣನ್ನು ಕೆಳಗೆ ದೂಡಿ ಬಿಟ್ಟರೆ ಸಾಕು. ನಮಗೆ ಅನುಕೂಲ ಆಗಲಿದೆ.
ಪರಮೇಶ್ವರ ಮಾಣಿಕೊಳಲು,ಕೃಷಿಕ

*ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next