Advertisement

Kundapura: ವೈದ್ಯರ ವಿರುದ್ಧದ ಪ್ರತಿಭಟನೆ ತಾತ್ಕಾಲಿಕ ಸ್ಥಗಿತ

11:48 PM Nov 21, 2023 | Team Udayavani |

ಕುಂದಾಪುರ: ಹೆರಿಗೆ ವೇಳೆ ಮಗು ಮೃತಪಟ್ಟ ಪ್ರಕರಣದಲ್ಲಿ ವೈದ್ಯರಿಬ್ಬರ ವಿರುದ್ಧ ಇಲ್ಲಿನ ಸರಕಾರಿ ಆಸ್ಪತ್ರೆ ಎದುರು ಅಹೋರಾತ್ರಿ ನಡೆದ ಪ್ರತಿಭಟನೆ ಮಂಗಳವಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.

Advertisement

ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ, ಎಸ್‌ಪಿ ಡಾ| ಅರುಣ್‌, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್‌., ಆರೋಗ್ಯ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕಿ ಡಾ| ರಾಜೇಶ್ವರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಪ್ರತಿಭಟನಕಾರರ ಜತೆ ಮಾತುಕತೆ ನಡೆಸಿದರು.

ತಪ್ಪಿತಸ್ಥ ವೈದ್ಯರನ್ನು ತತ್‌ಕ್ಷಣ ಸೇವೆಯಿಂದ ಅಮಾನತು ನಡೆಸಬೇಕು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಕೊಲೆ ಪ್ರಕರಣ ದಾಖಲಿಸಬೇಕು, ಇನ್ನು ಮುಂದೆ ಇಂತಹ ದುರ್ಘ‌ಟನೆಗಳು ನಡೆಯಬಾರದು, ಕಳೆದ 1 ವರ್ಷದಲ್ಲಿ ನಡೆದ ಇಂತಹ ಪ್ರಕರಣಗಳ ತನಿಖೆ ನಡೆಸಬೇಕು, ಕಳೆದ ಕೆಲವು ವರ್ಷಗಳಿಂದ ಆಸ್ಪತ್ರೆಯಲ್ಲೇ ಠಿಕಾಣಿ ಹೂಡಿದವರನ್ನು ವರ್ಗ ಮಾಡಬೇಕು, ಸರಕಾರಿ ಕರ್ತವ್ಯದ ವೇಳೆ ಖಾಸಗಿ ಕ್ಲಿನಿಕ್‌ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಕೆಲಸ ದಿಂದ ತೆಗೆಯಬೇಕು ಮೊದಲಾದ ಬೇಡಿಕೆ ಗಳನ್ನು ಪ್ರತಿಭಟನಕಾರರು ಇಟ್ಟರು.

ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣದಲ್ಲಿ ತತ್‌ಕ್ಷಣ ಅಮಾನತು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಇಲ್ಲಿಂದ ಬೇರೆ ಕಡೆಗೆ ವರ್ಗ ಮಾಡಲಾಗುವುದು. ಪರಿಣತ ವೈದ್ಯರ ಸಮಿತಿ ರಚಿಸಿ ಆ ಸಮಿತಿ ತನಿಖೆ ನಡೆಸಿ ನೀಡಿದ ವರದಿ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಘಟನೆ ಕುರಿತು ವಿಷಾದವಿದೆ ಎಂದು ಅಧಿಕಾರಿಗಳು ಭರವಸೆ ನೀಡಿದರು.

1 ವಾರ ತನಕ ಕಾದು ಮುಂದಿನ ಹೋರಾಟ ಮುಂದುವರಿಸಲಾಗು ವುದು. ಅದಕ್ಕಾಗಿ ಪ್ರತ್ಯೇಕ ಹೋರಾಟ ಸಮಿತಿ ರಚಿಸಲಾಗುವುದು. ಆ ಸಮಿತಿಯ ತೀರ್ಮಾನದಂತೆ ಅವಶ್ಯ ವಿದ್ದರೆ ಕುಂದಾಪುರ, ಗಂಗೊಳ್ಳಿ ಬಂದ್‌ ಕೂಡ ಮಾಡಲಾಗು ವುದು ಎಂದು ನಿರ್ಧರಿಸಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Advertisement

ಗಂಗೊಳ್ಳಿ, ಕುಂದಾಪುರ ಅಲ್ಲದೇ ತಾಲೂಕಿನ ವಿವಿಧೆಡೆಯಿಂದ ಪ್ರತಿಭಟನೆಗಾಗಿ ಜನ ಆಗಮಿಸಿದ್ದರು. 8 ತಿಂಗಳು ತುಂಬಿದಾಗ ಮಾಡ ಬೇಕಾದ ಸ್ಕ್ಯಾನಿಂಗ್‌ ಮಾಡಿರಲಿಲ್ಲ. ಈಗ ಮಾಡಿ ಎಂದಾಗ ವೈದ್ಯರು ಮಾಡಲಿಲ್ಲ. ಶುಕ್ರವಾರ ದಾಖಲಿಸಿ ದರೂ ಸೋಮವಾರ ಹೆರಿಗೆ ಮಾಡಿಸಿದರು. ಉಡಾಫೆಯಿಂದ ಮಾತನಾಡಿದರು.

ಇಂತಹ ಪ್ರಕರಣಗಳು ನಡೆಯುತ್ತಿರುತ್ತವೆ ಎಂದು ಬೇಜವಾಬ್ದಾರಿ ಯಿಂದ ಹೇಳಿದರು ಎಂದು ವೈದ್ಯರ ಮೇಲೆ ಸಂತ್ರಸ್ತ ಶ್ರೀನಿವಾಸ ಖಾರ್ವಿ ಆರೋಪಿಸಿದ್ದರು. ಇಬ್ಬರು ವೈದ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಆಸ್ಪತ್ರೆ ಮೂಲಗಳ ಪ್ರಕಾರ ಸಂತ್ರಸ್ತರು, ಪ್ರತಿಭಟನಕಾರರು ಆರೋಪಿಸುತ್ತಿರುವವರ ಪೈಕಿ ಒಬ್ಬ ವೈದ್ಯರು ಮೂರು ದಿನಗಳ ಕಾಲದ ರಜೆಯಲ್ಲಿದ್ದರು. ಹೆರಿಗೆ ವೇಳೆ ಮಗುವಿನ ಕುತ್ತಿಗೆಗೆ ಕರುಳಿನ ಬಳ್ಳಿ 6 ಸುತ್ತು ಸುತ್ತಿರುವುದು ಕರ್ತವ್ಯದಲ್ಲಿದ್ದ ವೈದ್ಯರಿಗೆ ಗೊತ್ತಾದಾಗ ಚಿಕಿತ್ಸೆ ಸಂದರ್ಭ ಮಾರ್ಗದರ್ಶನಕ್ಕಾಗಿ ಹಿರಿಯ ವೈದ್ಯರನ್ನು ವಿನಂತಿಸಿದ್ದರು. ಅದರಂತೆ ಅವರು ಮಾನವೀಯ ನೆಲೆಯಲ್ಲಿ ರಜೆಯಲ್ಲಿದ್ದರೂ ಸಹ ವೈದ್ಯರಿಗೆ ಮಾರ್ಗದರ್ಶನ ಮಾಡಲು ಆಸ್ಪತ್ರೆಗೆ ಆಗಮಿಸಿದ್ದರು. ಹಾಗಿದ್ದರೂ ಮಗುವನ್ನು ಉಳಿಸಲಾಗಲಿಲ್ಲ. ತಾಯಿ ಆರೋಗ್ಯ ವಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಹೆರಿಗೆ ದಿನಗಳು ಭರ್ತಿ ಯಾಗಿರಲಿಲ್ಲ, ಕೊನೆ ಕ್ಷಣದಲ್ಲಿ ಸ್ಕ್ಯಾನಿಂಗ್‌ ಮಾಡಿದರೆ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾಡಿರಲಿಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next