Advertisement

ಕುಂದಾಪುರ: ಗಾಳಿ-ಮಳೆಗೆ 50ಕ್ಕೂ ಅಧಿಕ ಮನೆಗೆ ಹಾನಿ

07:30 PM Oct 06, 2021 | Team Udayavani |

ಕುಂದಾಪುರ: ಶಹೀನ್‌ ಚಂಡಮಾರುತದ ಪರಿಣಾಮದಿಂದ ಮಂಗಳವಾರ ಸಂಜೆ ವೇಳೆಗೆ ಬೀಸಿದ ಭಾರಿ ಸುಂಟರಗಾಳಿಯಿಂದಾಗಿ ಅಂಪಾರಿನ ಮೂಡುಬಗೆ ಗ್ರಾಮದಲ್ಲಿ 50ಕ್ಕೂ ಅಧಿಕ ಕುಟುಂಬ ಅಕ್ಷರಶಃ ನಲುಗಿ ಹೋಗಿದೆ.

Advertisement

ಒಟ್ಟು 6,000ಕ್ಕೂ ಅಧಿಕ ಅಡಿಕೆ ಮರ, 800ಕ್ಕೂ ಅಧಿಕ ತೆಂಗಿನಮರಗಳು ಧರೆಗುರುಳಿದೆ. 50 ಕ್ಕೂ ಅಧಿಕ ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಜನರು ಸಮಸ್ಯೆಗೀಡಾಗಿದ್ದಾರೆ. 104 ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ಅಂಪಾರು ಗ್ರಾಮವೊಂದರಲ್ಲಿಯೇ 65 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 8-9 ಮನೆಗಳಿಗೆ ತೀವ್ರ ಹಾನಿ, 50ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಅಂದಾಜು 30-40 ಲಕ್ಷ ರೂ. ನಷ್ಟ ಸಂಭವಿಸಿದೆ. 104 ಕಂಬಗಳು ಧರೆಗುರುಳಿದ್ದು, ಅಂದಾಜು 1.50 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ.

ಅಂಪಾರು ಹೊರತುಪಡಿಸಿ ಕಟ್‌ಬೆಲೂ¤ರಿನಲ್ಲಿ ಒಂದು ಮನೆ, ಶಂಕರನಾರಾಯಣ ಗ್ರಾಮದಲ್ಲಿ 6 ಮನೆಗಳು, ಹಾಲಾಡಿ ಗ್ರಾಮದಲ್ಲಿ ಒಂದು ಮನೆ, ತೋಟಗಳಿಗೆ, ಕುಳುಂಜೆ ಗ್ರಾಮದಲ್ಲಿಯೂ ಮನೆ, ತೋಟಕ್ಕೆ ಹಾನಿಯಾಗಿದೆ.

ತಹಶೀಲ್ದಾರ್‌ ಭೇಟಿ
ಅಂಪಾರಿನ ಮೂಡುಬಗೆಯಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಬುಧವಾರ ಸಹ ಕುಂದಾಪುರ ತಹಶೀಲ್ದಾರ್‌ ಕಿರಣ್‌ ಗೌರಯ್ಯ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಸಂದರ್ಭ ಮಾಧ್ಯಮದ ಜತೆ ಮಾತನಾಡಿದ ತಹಶೀಲ್ದಾರ್‌, ಫಲಭರಿತ ಅಡಿಕೆ ಹಾಗೂ ತೆಂಗಿನ ಮರಗಳು, ಮನೆಗಳು, ವಿದ್ಯುತ್‌ ಕಂಬಗಳು ಧರೆಗುರುಳಿದೆ. ಸರ್ವೇ ಕಾರ್ಯ ಮುಗಿದ ಮೇಲೆ ನಿಖರವಾಗಿ ಒಟ್ಟು ನಷ್ಟದ ಮೌಲ್ಯ ತಿಳಿಯುತ್ತದೆ. ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಲಾಗುತ್ತದೆ. ಮನೆ ಮೇಲೆ ಬಿದ್ದ ಮರಗಳ ತೆರವು ಕಾರ್ಯ ಕ್ಷಿಪ್ರವಾಗಿ ಮಾಡಲಾಗುತ್ತಿದೆ. ಸುಂಟರಗಾಳಿ ಪರಿಣಾಮ ನಡೆದ ಈ ಘಟನೆಯಲ್ಲಿ ಜೀವ ಹಾನಿಯಾಗಿಲ್ಲ. ಆದರೆ ಆಸ್ತಿಪಾಸ್ತಿ ಹಾನಿಯಾಗಿದೆ ಎಂದಿದ್ದಾರೆ.

Advertisement

ಇದನ್ನೂ ಓದಿ:ಪೊಲೀಸ್ ವೇಷದಲ್ಲಿ ಬಂದು ಮಹಿಳೆ ಮೇಲೆ ಅತ್ಯಾಚಾರ ಎಸಗಿ, ನಗ, ನಾಣ್ಯ ಎಗರಿಸಿದ  ಭೂಪ!

ಬಾಣಂತಿ – ಹಸುಗೂಸು ಸ್ವಲ್ಪದರಲ್ಲೇ ಪಾರು
ಸುಬ್ಬ ಮೂಡುಬಗೆ ಎನ್ನುವವರ ಮನೆ ಮೇಲೆ ಮರಬಿದ್ದಿದ್ದು, ಅದೃಷ್ಟವಶಾತ್‌ ಮನೆಯೊಳಗಿದ್ದ ಬಾಣಂತಿ ಹಾಗೂ ಮೂರೂವರೆ ತಿಂಗಳ ಗಂಡು ಮಗು ಬಚಾವ್‌ ಆಗಿದ್ದಾರೆ. “ಮನೆಮೇಲೆ ಮರ ಬಿತ್ತು…ಅದೇಗೋ ಮಕ್ಕಳು ಮರಿಯೊಂದಿಗೆ ಓಡಿ ಪಾರಾದೆವು’ ಎಂದು ಮಹಿಳೆಯೊಬ್ಬರು ಘಟನೆ ಭೀಕರತೆ ಬಗ್ಗೆ ಹೇಳಿದ್ದಾರೆ. ಮನೆ ಮಕ್ಕಳಂತೆ ತೋಟ ಪೋಷಿಸಿದ್ದೆವು. ಆದರೆ ಈಗ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮ್ಮ ಜೀವನವೇ ಹೋದಂತಾಗಿದೆ’ ಎಂದು ಹಿರಿಯ ಕೃಷಿಕ ಸುಬ್ಬಣ್ಣ ಶೆಟ್ಟಿ ಆವರ್ಸೆಮನೆ ಕಣ್ಣೀರು ಹಾಕಿದರು. “ಸರಕಾರ ಕೊಡುವ ಪರಿಹಾರ ಮೊತ್ತದಲ್ಲಿ ತೋಟದಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲು ಆಗಲ್ಲ. ಅ ಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಪರಿಹಾರಕ್ಕೆ ಅಲೆದಾಟ ತಪ್ಪುವುದಿಲ್ಲ’ ಎಂದು ಮಹಿಳೆಯೊಬ್ಬರು ಅಸಹಾಯಕತೆ ತೋಡಿಕೊಂಡರು. “ಕಣ್ಣೀರೊರೆಸಲು ಪರಿಹಾರ ಧನ ನೀಡುವುದು ಬೇಡ. ಅದರ ಬದಲು ಬಿದ್ದಿರುವ ಮರಗಳನ್ನು ಕ್ಲೀನ್‌ ಮಾಡಿ ಅಡಿಕೆ ಸಸಿಯನ್ನು ನೀಡಿ, ನಾವೇ ಏನಾದರೂ ಮಾಡುತ್ತೇವೆ ಎಂದು ಕೃಷಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next