ಕುಂದಾಪುರ: ಕುಂದಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಾಡಿ ಶ್ರೀನಿವಾಸ ಶೆಟ್ಟರ ಹೆಸರು ಘೋಷಣೆಯಾಗುತ್ತಲೇ ಅವರ ಸ್ಪರ್ಧೆ ವಿರೋಧಿಸುತ್ತಿದ್ದ ಆರು ಮಂದಿ ಮಂಗಳವಾರ ಪಕ್ಷದ ವಿವಿಧ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿದ್ದಾರೆ. ಆದರೆ ಪಕ್ಷ ತೊರೆಯುವುದಿಲ್ಲ ಎಂಬುದಾಗಿ ಈ ಆರು ಮಂದಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಬಿ., ಹಿಂದುಳಿದ ವರ್ಗಗಳ ವಿಭಾಗ ಜಿಲ್ಲಾ ಕಾರ್ಯದರ್ಶಿ ವಿಠಲ ಪೂಜಾರಿ, ಕೋಶಾಧಿಕಾರಿ ಶ್ರೀನಿವಾಸ ಕುಂದರ್, ಸದಸ್ಯ ಚಂದ್ರಮೋಹನ ಪೂಜಾರಿ, ಕೈಗಾರಿಕಾ ಪ್ರಕೋಷ್ಠ ಸಹ ಸಂಚಾಲಕ ಮೇರ್ಡಿ ಸತೀಶ್ ಹೆಗ್ಡೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರವಿ ದೊಡ್ಮನೆ ಅವರು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರ ಮನೆಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕಿಶೋರ್ ಕುಮಾರ್, ಕಳೆದ ಬಾರಿ ಹಾಲಾಡಿಯವರು ಪಕ್ಷ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿದ್ದರು, ಆಗ ಗೆಲ್ಲಲಾರೆ ಎಂದು ಗೊತ್ತಿದ್ದರೂ ಹಿರಿ ಯರ ಸೂಚನೆ ಮೇರೆಗೆ ಸ್ಪರ್ಧಿಸಿದ್ದೆ. ಆದರೆ ಈ ಬಾರಿ ಬಿಜೆಪಿಗೆ ಗೆಲುವಿನ ವಾತಾವರಣ ಇದೆ. ಈ ಸಂದರ್ಭ ದಲ್ಲಿ ಹಾಲಾಡಿ ಯವರಿಗೆ ಟಿಕೆಟ್ ನೀಡಿರುವುದಕ್ಕೆ ನಮ್ಮ ವಿರೋಧವಿದೆ. ಹುದ್ದೆಗಳಿಗೆ ಮಾತ್ರ ರಾಜೀನಾಮೆ, ನಾವು ಪಕ್ಷ ತೊರೆಯುವುದಿಲ್ಲ. ಹಾಲಾಡಿ ಪರ ಪ್ರಚಾರ ಮಾಡುವು ದಿಲ್ಲ. ಬೇರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಯಾಚಿಸು ತ್ತೇವೆ. 2019ರಲ್ಲಿ ಲೋಕಸಭಾ ಚುನಾ ವಣೆಗೆ ಕುಂದಾಪುರದಲ್ಲಿ ಪ್ರಚಾರ ನಡೆಸುತ್ತೇವೆ ಎಂದರು.
ರಾಜೇಶ್ ಕಾವೇರಿ ಮಾತನಾಡಿ, ಬಿಜೆಪಿ ನಮ್ಮದು, ಮೋದಿ ನಮ್ಮವರು. ಹಾಲಾಡಿಯವರನ್ನು ಹೊರತಾದ ಬಿಜೆಪಿಗೆ ನಮ್ಮ ಬೆಂಬಲ ಇದೆ. ಕಷ್ಟಕಾಲದಲ್ಲಿ ಅಭ್ಯರ್ಥಿಯಾಗಿದ್ದ ಕಿಶೋರ್ ಅವರಿಗೆ ಅಥವಾ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡಬೇಕಿತ್ತು ಎಂದರು.
ಭಿನ್ನಾಭಿಪ್ರಾಯ ಬಗೆಹರಿಸುವೆ: ಮಟ್ಟಾರು
ರಾಜೀನಾಮೆ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಮಟ್ಟಾರು ರತ್ನಾಕರ ಹೆಗ್ಡೆ, ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ವಿನಾ ಪಕ್ಷ ತೊರೆದಿಲ್ಲ. ಅದರರ್ಥ ಅವರು ಪಕ್ಷದಲ್ಲಿಯೇ ಮುಂದುವರಿದು ಪಕ್ಷಕ್ಕಾಗಿ ದುಡಿದು ಹಾಲಾಡಿಯವರನ್ನು ಗೆಲ್ಲಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ. ಅವರ ರಾಜೀನಾಮೆಯನ್ನು ನಾನು ಅಂಗೀಕರಿಸಿಲ್ಲ. ಇವರು ಪಕ್ಷಕ್ಕಾಗಿ ಕೆಲಸ ಮಾಡಿದವರು. ಈಗ ಬಂದಿರುವ ಭಿನ್ನಾಭಿಪ್ರಾಯವನ್ನು ಹಾಲಾಡಿಯವರ ಸಮ್ಮುಖ ಪಕ್ಷದ ಮಂಡಲ ಅಧ್ಯಕ್ಷರ ಜತೆಗೂಡಿ ಪರಿಹರಿಸಲು ಮುಂದಾಗುತ್ತೇನೆ ಎಂದಿದ್ದಾರೆ.